
ಬೆಂಗಳೂರು (ಜೂ.30): ರಾಜ್ಯದಲ್ಲಿ ಜೂ.30ರಿಂದ ಜುಲೈ 27ರವರೆಗೆ ನಡೆಯಲಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಎಲ್ಲ ಮತದಾರರು ಬೂತ್ ಮಟ್ಟದ ಅಧಿಕಾರಿಗಳಿಂದ ನಮೂನೆ (ಎನುಮರೇಶನ್ ಫಾರ್ಮ್) ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗದ, ಸೂಕ್ತ ದಾಖಲೆ, ಮಾಹಿತಿಗಳನ್ನು ಒದಗಿಸದೇ ಇದ್ದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ಮತದಾನದ ಹಕ್ಕು ಕಳೆದುಕೊಂಡರೆ ನಿಮ್ಮ ಜೀವನದ ಹಕ್ಕು ಕಳೆದುಕೊಂಡಂತೆ. ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿಗಳು, ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿರುವ ವಿವಿಧ ಪಿಂಚಣಿ ಸೌಲಭ್ಯ, ಸರ್ಕಾರಿ ಮನೆ, ನಿವೇಶನ ಸೇರಿದಂತೆ ಸರ್ಕಾರದಿಂದ ಸಿಗುವ ಯಾವ ರೀತಿಯ ಸೌಲಭ್ಯಗಳೂ ಇನ್ನು ಮುಂದೆ ಸಿಗದೆ ಹೋಗುತ್ತವೆ. ಹಾಗಾಗಿ ಎಚ್ಚರಿಕೆಯಿಂದ ಎಲ್ಲರೂ ಎಸ್‌ಐಆರ್‌ನಲ್ಲಿ ಭಾಗಿಯಾಗಿ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಕೋರಿದರು.
ಎಸ್‌ಐಆರ್ ಪ್ರಕ್ರಿಯೆ ವೇಳೆ ನಾಗರಿಕರಿಂದ ಚುನಾವಣಾ ಆಯೋಗ ಕೇಳುವ ಬೇರೆ ಬೇರೆ ಪ್ರಮಾಣ ಪತ್ರ, ದಾಖಲೆಗಳನ್ನು ಸರ್ಕಾರದಿಂದ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಪ್ರತಿ ಮನೆಗೂ ಶಾಶ್ವತವಾದ ನಿವಾಸ ಪ್ರಮಾಣ ಪತ್ರವನ್ನು ಸುಲಭವಾಗಿ, ಕಾಲಬದ್ಧವಾಗಿ ವಿತರಣೆಗೆ ತೀರ್ಮಾನ ಮಾಡಲಾಗಿದೆ. ಈ ಪ್ರಮಾಣ ಪತ್ರ ವಿತರಿಸಲು ಕಂದಾಯ ಇಲಾಖೆಯ ಉಪ ತಹಶೀಲ್ದಾರರಿಗೆ ಅಧಿಕಾರ ನೀಡಿ ವಿಶೇಷ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಜಾತಿ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ, ಮನೆ, ಸೈಟು ಖರೀದಿ ಪತ್ರ, ಕೇಂದ್ರ ಸರ್ಕಾರದ ಪಿಂಚಣಿ ಪತ್ರ ಸೇರಿದಂತೆ 11 ರಿಂದ 12 ದಾಖಲೆಗಳನ್ನು ಬಿಎಲ್‌ಒಗಳು ಕೇಳುತ್ತಾರೆ. ಸರ್ಕಾರ ಈಗಾಗಲೇ ಸುಮಾರು ಐದು ಕೋಟಿ ಜನರಿಗೆ ಜಾತಿ ಪ್ರಮಾಣ ಪತ್ರ ಕೊಟ್ಟಿದೆ. 2,54,95,767 ಒಬಿಸಿ ಪ್ರಮಾಣ ಪತ್ರ ಹಂಚಿದ್ದೇವೆ. 2,94,51,027 ಜನರಿಗೆ ಎಸ್ಸಿ, ಎಸ್ಟಿ ಪ್ರಮಾಣ ಪತ್ರ ಕೊಟ್ಟಿದ್ದೇವೆ. ಈ ಎಲ್ಲ ದಾಖಲೆಗಳನ್ನು ಜನರು ಡಿಜಿಟಲ್‌ನಲ್ಲೂ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇದೆ. ವಾಟ್ಸ್‌ಆ್ಯಪ್, ಎಸ್ಸೆಮ್ಮೆಸ್‌ನಲ್ಲಿ ಕೂಡ ಡೌನ್‌ಲೋಡ್‌ಗೆ ಅವಕಾಶ ಇದೆ ಎಂದು ವಿವರಿಸಿದರು.
ವಿಶೇಷ ತೀವ್ರ ಮತ ಪರಿಷ್ಕರಣೆಗಾಗಿ ಚುನಾವಣಾ ಆಯೋಗ ನೇಮಕ ಮಾಡಿರುವ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಜೂ. 30ರಿಂದ ಜುಲೈ 29ರವರೆಗೆ ಪ್ರತಿ ದಿನ ಕನಿಷ್ಠ 30ರಿಂದ 50 ಮನೆಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಅವರು ಪ್ರತಿ ಮತದಾರನ ಹಾಲಿ ಮತಪಟ್ಟಿಯಲ್ಲಿರುವ ಫೋಟೋ ಮತ್ತು ಹೆಸರನ್ನು ಒಳಗೊಂಡ ಅರ್ಜಿಯನ್ನು ಹಂಚಿಕೆ ಮಾಡುತ್ತಾರೆ. ಆ ಅರ್ಜಿಯನ್ನು ಸೂಕ್ತ ಮಾಹಿತಿಗಳೊಂದಿಗೆ ಭರ್ತಿ ಮಾಡುವ ಜೊತೆಗೆ ಕೇಳಿರುವ ಮಾಹಿತಿ, ದಾಖಲೆಗಳೊಂದಿಗೆ ಇತ್ತೀಚಿನ ಭಾವಚಿತ್ರ ಅಂಟಿಸಿ ಸಹಿ ಮಾಡಿ ಜು.29ರೊಳಗೆ ಸಲ್ಲಿಸಬೇಕು. ಬಿಎಲ್‌ಒಗಳು ಬಂದಾಗ ಮನೆಯ ಯಾವುದೇ ಸದಸ್ಯರು ಲಭ್ಯವಿಲ್ಲದಿದ್ದಾಗ ಮನೆಯ ವಾರಸುದಾರರೇ ಸಹಿ ಹಾಕಿ ಬಿಎಲ್‌ಒಗಳಿಗೆ ಕೊಡಬಹುದು ಎಂದು ತಿಳಿಸಿದರು.
ಬಿಎಲ್‌ಎ-2ಗೂ ಅವಕಾಶ:
ಬಿಎಲ್‌ಒಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಾರೆ. ಇವರ ಜೊತೆಗೆ ಚುನಾವಣಾ ಆಯೋಗವು ಬೂತ್ ಮಟ್ಟದ ಏಜೆಂಟ್‌ಗಳ (ಬಿಎಲ್‌ಎ-2) ಮೂಲಕವೂ ಮತದಾರರಿಗೆ ಮಾಹಿತಿ ಒದಗಿಸಿಕೊಡಲು ಅವಕಾಶ ನೀಡಿದೆ. ಇದರಡಿ ಎಲ್ಲ ಪಕ್ಷಗಳ ರಾಜಕೀಯ ಪ್ರತಿನಿಧಿಗಳು, ಮುಖಂಡರು ಮತದಾರು ನಾಗರಿಕರಿಗೆ ಮತ್ತು ಬಿಎಲ್‌ಒಗಳಿಗೆ ಸಹಾಯ ಮಾಡಲಿದ್ದಾರೆ. ಇದಕ್ಕಾಗಿ ಆಯೋಗ ಮತ್ತು ಸರ್ಕಾರ ಬಿಎಲ್‌ಎಗಳನ್ನು ಒಳಗೊಂಡ ಸಹಾಯ ಕೇಂದ್ರಗಳನ್ನು (ಫೆಸಿಲೇಷನ್ ಸೆಂಟರ್) ಪ್ರತಿ ಬೂತ್, ಪಂಚಾಯಿತಿ ಮಟ್ಟದಲ್ಲಿ ಮಾಡಲಾಗಿದೆ. 11,856 ಬಿಎಲ್‌ಒ ಸಹಾಯ ಕೇಂದ್ರಗಳು, 37,664 ಬಿಎಲ್‌ಎ ಕೇಂದ್ರಗಳು ಸೇರಿ ಒಟ್ಟಾರೆ 49,320 ಸಹಾಯ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ನಾಗರಿಕರು ಅಗತ್ಯ ಸಹಕಾರ ಪಡೆಯಬಹುದು ಎಂದು ಹೇಳಿದರು.
ಆನ್‌ಲೈನ್‌ನಲ್ಲೂ ಅರ್ಜಿ ಭರ್ತಿ ಮಾಡಬಹುದು:
ಬಿಎಲ್‌ಒಗಳು ಮನೆಗೆ ಬಂದಾಗ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲೂ ತಮ್ಮ ಎಸ್‌ಐಆರ್ ಸಂಬಂಧ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು.
ಇದರ ಜೊತೆಗೆ ಸರ್ಕಾರ ನಾಗರಿಕರ ಅನುಕೂಲಕ್ಕೆ ಯಾವೆಲ್ಲಾ ಸಹಾಯ ಬೇಕೋ ಅದನ್ನು ಗರಿಷ್ಠ ಮಟ್ಟದಲ್ಲಿ ನೀಡಲು ಕ್ರಮ ವಹಿಸಿದೆ. ಇದರ ಬಗ್ಗೆ ಸಮಗ್ರ ಮಾಹಿತಿಯ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಶೀಘ್ರ ಪ್ರಕಟಿಸಲಾಗುವುದು. ಅಂತಿಮವಾಗಿ ತಮ್ಮ ಅರ್ಜಿ, ದಾಖಲೆಗಳನ್ನು ಪರಿಶೀಲಿಸಿ ಆಯೋಗವು ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಬೇರೆ ಸಮಸ್ಯೆಗಳು ಶುರುವಾಗುತ್ತವೆ. ಆಗ ಅವರು ಕೇಳುವ ಬೇರೆ ಬೇರೆ ದಾಖಲೆಗಳನ್ನು ನೀಡಬೇಕಾಗುತ್ತದೆ. ಅದರ ಬಗ್ಗೆ ನಾನು ನಂತರದ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಈಗ ಎಸ್‌ಐಆರ್‌ನಲ್ಲಿ ಕಡ್ಡಾಯವಾಗಿ ಎಲ್ಲರೂ ಭಾಗಿಯಾಗಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಪದೇ ಪದೇ ಮನವಿ ಮಾಡಿದರು.
ಮತದ ಹಕ್ಕಿಲ್ಲದವರಿಗೆ ಬಂಗಾಳದಲ್ಲಿ ಅಕ್ಕಿ ಕೊಡ್ತಿಲ್ಲ
ಮತದಾನದ ಹಕ್ಕು ಕಳೆದುಕೊಂಡರೆ ಮುಂದೆ ಗ್ಯಾರಂಟಿಗಳು ಸೇರಿದಂತೆ ಎಲ್ಲ ರೀತಿಯ ಸರ್ಕಾರಿ ಯೋಜನೆ, ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಯಾರಿಗೆ ಮತದಾನ ಹಕ್ಕು ಇರೋದಿಲ್ಲವೋ ಅವರಿಗೆ ಸರ್ಕಾರದ ಸೌಲಭ್ಯ ಸಿಗಲ್ಲ. ಈಗಾಗಲೇ ಪಶ್ಚಿಮ ಬಂಗಾಳದ ಆಹಾರ ಇಲಾಖೆಯ ಮಾಡಿರುವ ಆದೇಶ ನಮ್ಮಮುಂದೆ ಇದೆ. ಮತದಾನದ ಹಕ್ಕು ಇಲ್ಲದವರಿಗೆ ಅಕ್ಕಿ ಕೊಡಲ್ಲ ಅಂತ ಆದೇಶ ಮಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಇಂತಹ ಆದೇಶ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಯಾರಾದರೂ ಮತದಾನದ ಹಕ್ಕು ಕಳೆದುಕೊಂಡರೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿಗಳು, ಸರ್ಕಾರಿ ಮನೆ, ನಿವೇಶನ ಸೇರಿದಂತೆ ಸರ್ಕಾರದಿಂದ ದೊರೆಯುವ ಯಾವುದೇ ಸೌಲಭ್ಯ ಪಡೆಯಲು ಸಮಸ್ಯೆ ಆಗಲಿದೆ ಎಂದು ತಿಳಿಸಿದರು.
ಪ್ರತಿ ಮನೆಗೆ ಶಾಶ್ವತ ನಿವಾಸ ಪ್ರಮಾಣಪತ್ರ
ಎಸ್‌ಐಆರ್(SIR) ಪ್ರಕ್ರಿಯೆ ವೇಳೆ ನಾಗರಿಕರಿಂದ ಚುನಾವಣಾ ಆಯೋಗ ಕೇಳುವ ಬೇರೆ ಬೇರೆ ಪ್ರಮಾಣ ಪತ್ರ, ದಾಖಲೆಗಳನ್ನು ಸರ್ಕಾರದಿಂದ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಪ್ರತಿ ಮನೆಗೂ ಶಾಶ್ವತವಾದ ನಿವಾಸ ಪ್ರಮಾಣ ಪತ್ರವನ್ನು ಸುಲಭವಾಗಿ, ಕಾಲಬದ್ಧವಾಗಿ ವಿತರಣೆಗೆ ತೀರ್ಮಾನ ಮಾಡಲಾಗಿದೆ. ಈ ಪ್ರಮಾಣ ಪತ್ರ ವಿತರಿಸಲು ಕಂದಾಯ ಇಲಾಖೆಯ ಉಪ ತಹಶೀಲ್ದಾರರಿಗೆ ಅಧಿಕಾರ ನೀಡಿ ವಿಶೇಷ ಆದೇಶ ಮಾಡಲಾಗಿದೆ ಎಂದು ಡಿಕೆಶಿ ತಿಳಿಸಿದರು.\B
ಮತ ಹಕ್ಕು ಇಲ್ಲದಿದ್ದರೆ ಯಾವ ಸವಲತ್ತೂ ಇಲ್ಲ
ಯಾರಿಗೆ ಮತದಾನ ಹಕ್ಕು ಇರೋದಿಲ್ಲವೋ ಅವರಿಗೆ ಸರ್ಕಾರದ ಸೌಲಭ್ಯ ಸಿಗಲ್ಲ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಮತ ಹಕ್ಕು ಇಲ್ಲದವರಿಗೆ ಅಕ್ಕಿ ಕೊಡಲ್ಲ ಅಂತ ಆದೇಶ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಯಾರಾದರೂ ಮತದಾನದ ಹಕ್ಕು ಕಳೆದುಕೊಂಡರೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿಗಳು, ಸರ್ಕಾರಿ ಮನೆ, ನಿವೇಶನ ಸೇರಿದಂತೆ ಸರ್ಕಾರದಿಂದ ದೊರೆಯುವ ಯಾವುದೇ ಸೌಲಭ್ಯ ಪಡೆಯಲು ಸಮಸ್ಯೆ ಆಗಲಿದೆ.
- ಡಿ.ಕೆ. ಶಿವಕುಮಾರ್ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ