ಪ್ರತಿ ಮನೆಗೂ ಶಾಶ್ವತ ನಿವಾಸ ಪ್ರಮಾಣ ಪತ್ರ, ಏನಿದು PRC? ನೀವು ತಪ್ಪದೇ ಇದನ್ನು ಮಾಡಿಸಿ

Kannadaprabha News   | Kannada Prabha
Published : Jun 30, 2026, 06:46 AM IST
Revenue Department Announces New Permanent Resident Certificate

ಸಾರಾಂಶ

ಕರ್ನಾಟಕದಲ್ಲಿ ಶಾಶ್ವತ ವಾಸಸ್ಥಳ ಪ್ರಮಾಣಪತ್ರ (PRC) ವಿತರಣೆಗೆ ಕಂದಾಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಆದೇಶವು ಪ್ರಮಾಣಪತ್ರ ಪಡೆಯಲು ಬೇಕಾದ ಅರ್ಹತೆಗಳು, ಅಗತ್ಯ ದಾಖಲೆಗಳು, ಮತ್ತು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಸ್ಪಷ್ಟಪಡಿಸುತ್ತದೆ.

 ಬೆಂಗಳೂರು (ಜೂ.30): ರಾಜ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಕರ್ನಾಟಕ ಶಾಶ್ವತ ವಾಸಸ್ಥಳ ಪ್ರಮಾಣಪತ್ರ (PRC) ವಿತರಿಸಿರುವ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹಾಗೂ ನಿರ್ವಹಣಾ ಚೌಕಟ್ಟು ಪ್ರಕಟಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಯಿಂದ ಅಧಿಕೃತಗೊಳಿಸಲಾದ ಉಪ ತಹಸಿಲ್ದಾರ್‌ ಅಥವಾ ತಹಸೀಲ್ದಾರ್‌, ಇತರೆ ಯಾವುದೇ ಅಧಿಕಾರಿಯನ್ನು ಶಾಶ್ವತ ನಿವಾಸ ಪ್ರಮಾಣಪತ್ರ ಹಾಗೂ ಡೊಮಿಸೈಲ್‌ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವನ್ನಾಗಿ ನಿಯೋಜಿಸಲಾಗಿದೆ.

ಸಹಾಯಕ ಆಯುಕ್ತರಿಗೆ ಮೇಲ್ಮನವಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ-ಪುನರ್‌ ಪರಿಶೀಲನಾ ಪ್ರಾಧಿಕಾರ ಆಗಿ ವ್ಯವಹರಿಸಲಿದ್ದಾರೆ.

ಪ್ರಮಾಣಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ ಹಾಗೂ ಪರಿಶೀಲನೆ ನಂತರ ಅರ್ಜಿದಾರರು ಕರ್ನಾಟಕ ರಾಜ್ಯದ ನಿಜವಾದ ಮತ್ತು ಶಾಶ್ವತ ನಿವಾಸಿಯಾಗಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಂಡು ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಮಾಣಪತ್ರ ಪಡೆಯಲು ಅರ್ಹತೆಗಳು:

ಕರ್ನಾಟಕದಲ್ಲಿ ಜನನ-ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಜನಿಸಿರಬೇಕು. ಅರ್ಜಿದಾರರು ಅಥವಾ ಅವರ ತಂದೆ, ತಾಯಿ ಅಥವಾ ಕಾನೂನು ಬದ್ಧ ಪಾಲಕರು ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಕನಿಷ್ಠ 10 ವರ್ಷ ವಾಸವಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ/12ನೇ ತರಗತಿ ಅಥವಾ ತತ್ಸಮಾನ ಹಂತದವರಿಗೆ ಕನಿಷ್ಠ 10 ಶೈಕ್ಷಣಿಕ ವರ್ಷಗಳ ಕಾಲ ವ್ಯಾಸಂಗ ಮಾಡಿರಬೇಕು.

ಪೋಷಕರು ಅಥವಾ ಸಂಗಾತಿಯ ವಾಸಸ್ಥಳ, ಅರ್ಜಿದಾರರ ತಂದೆ, ತಾಯಿ, ಕಾನೂನುಬದ್ಧ ಪಾಲಕರು ಅಥವಾ ಪತಿ/ಪತ್ನಿಯು ಕರ್ನಾಟಕದಲ್ಲಿ ಸಾಮಾನ್ಯ ಹಾಗೂ ಶಾಶ್ವತ ನಿವಾಸಿಯಾಗಿರಬೇಕು. ವಸತಿ ಆಸ್ತಿ-ಅರ್ಜಿದಾರರು ಅಥವಾ ಅವರ ಕುಟುಂಬವು ಕರ್ನಾಟಕದಲ್ಲಿ ವಸತಿ ಅಥವಾ ಇತರೆ ಸ್ಥಿರಾಸ್ತಿಯ ಮಾಲೀಕತ್ವ ಹೊಂದಿರಬೇಕು. ಕಾನೂನುಬದ್ಧವಾದ ವಾರಸುದಾರರಾಗಿರಬೇಕು ಅಥವಾ ಬಳಸುತ್ತಿರಬೇಕು.

ಯಾವ ಸರ್ಕಾರಿ ದಾಖಲೆ ನೀಡಬೇಕು?:

ಮತದಾರರ ಪಟ್ಟಿ, ಆಧಾರ್‌, ಪಡಿತರ ಚೀಟಿ, ಕಂದಾಯ ದಾಖಲೆಗಳು ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು.

ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದು, ರಾಜ್ಯದಲ್ಲಿ ವಾಸವಿದ್ದರೆ ಸಂಬಂಧಪಟ್ಟ ದಾಖಲೆ ನೀಡಬೇಕು.

ಸಹಾಯ, ಸೌಲಭ್ಯ ಕೌಂಟರ್‌ ಸ್ಥಾಪನೆ:

ಪ್ರತಿ ಗ್ರಾಪಂ ಹಾಗೂ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ ಕಚೇರಿಯಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್‌ ಸ್ಥಾಪಿಸಬೇಕು.

ಅಟಲ್‌ ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌, ಸಿಎಸ್‌ಸಿಗಳು ಮತ್ತು ಇತರೆ ಅಧಿಕೃತ ಕೇಂದ್ರಗಳು ಅರ್ಜಿಗಳ ಪ್ರಕ್ರಿಯೆ ನಡೆಸಬೇಕು. ಆದೇಶ ಆದ ಒಂದು ವಾರದಲ್ಲಿ ಎಲ್ಲಾ ಕೌಂಟರ್‌ಗಳ ವ್ಯವಸ್ಥೆ ಆಗಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆನ್‌ಲೈನ್‌ ಅರ್ಜಿಗೆ ಅವಕಾಶ:

ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌, ಅಟಲ್‌ ಜನಸ್ನೇಹಿ ಕೆಂದ್ರ (ಎಜೆಎಸ್‌ಕೆ) ಪೋರ್ಟಲ್‌ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Umapathy srinivas gowda: ಒಕ್ಕಲಿಗರ ಸಂಘದ ಹಗರಣ: ನನ್ನ ಬಳಿ ದಾಖಲೆ ಇವೆ, ಇಂಚಿಂಚು ಬಿಚ್ಚಿಡ್ತೇನೆ
ಬೆಂಗಳೂರು-ಮಂಗಳೂರು ಚತುಷ್ಪಥ ರೈಲ್ವೆ ಮಾರ್ಗ: ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್