ಈ ಬಾರಿ ಕೇವಲ 400 ಟನ್ ಕಸ ಉತ್ಪಾದನೆ| ಶಬ್ದ ಮಾಲಿನ್ಯವೂ ಕಡಿಮೆ| ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಗಣೇಶೋತ್ಸವ ಸಂಗೀತ ರಸಸಂಜೆ| ಸೆ.1ರವರೆಗೂ ನಿತ್ಯ ಸಂಜೆ 6.3ರಿಂದ ಸಂಗೀತ ಕಾರ್ಯಕ್ರಮ| ಗಣೇಶೋತ್ಸವದಲ್ಲಿ ಜನರ ಕೊರತೆ, ಅದ್ಧೂರಿಗೆ ಬ್ರೇಕ್|
ಬೆಂಗಳೂರು(ಆ.24): ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಭೀತಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವ ಸರಳವಾಗಿ ಜರುಗಿತು.
ಗಣೇಶ ಹಬ್ಬ ಬಂತೆಂದರೆ ನಗರದ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ, ಸಡಗರ, ಸಾರ್ವಜನಿಕ ಗಣೇಶೋತ್ಸವ ಸ್ಥಳಗಳಲ್ಲಿ ಇರುತ್ತಿದ್ದ ಜನ ಜಂಗುಳಿ, ಅದ್ದೂರಿ, ವೈವಿದ್ಯಮಯ ಕಾರ್ಯಕ್ರಮ ಇಲ್ಲದೇ ಮಂಕಾಗಿತ್ತು. ಮನೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಹೊರತುಪಡಿಸಿದರೆ, ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ ಹೆಚ್ಚು ಕಂಡು ಬರಲಿಲ್ಲ.
undefined
ಮನೆ, ಮನೆಯ ತಾರಸಿ, ಮನೆಯ ಆವರಣ, ಖಾಲಿ ನಿವೇಶನಗಳಲ್ಲಿ ಗೌರಿ-ಗಣೇಶಮೂರ್ತಿ ಪ್ರತಿಷ್ಠಾಪಿಸಿ ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರು ಒಟ್ಟಾಗಿ ಭಕ್ತಭಾವದಿಂದ ಪೂಜಿಸಿದರು. ಕಡುಬು, ಕಾಯಿಹಾಲು, ವಡೆ, ಚಕ್ಕುಲಿ, ಕಜ್ಜಾಯ ಸೇರಿದಂತೆ ವೈವಿಧ್ಯಮಯ ತಿನಿಸುಗಳು, ಫಲ-ಪುಷ್ಪಗಳನ್ನು ಎಡೆ ಇರಿಸಿ ಮೋದಕ ಪ್ರಿಯನಲ್ಲಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಕೊನೆಗೂ ಗೆದ್ದ ಧರ್ಮ: ಕಲಾವಿದನ ಸಂಕಷ್ಟಕ್ಕೆ ಅನಿವಾಸಿ ಭಾರತೀಯರ ಸ್ಪಂದನೆ..!
ಗಣೇಶ ಮೂರ್ತಿಯನ್ನು ಮೂರು, ಐದು ದಿನಗಳ ಕಾಲ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದ ಅನೇಕ ಕುಟುಂಬಗಳು ಒಂದೇ ದಿನಕ್ಕೆ ವಿಸರ್ಜನೆ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು. ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ನಿರ್ಬಧ ಹೇರಿದ್ದರಿಂದ ಪಾಲಿಕೆಯ ಮೊಬೈಲ್ ಟ್ಯಾಂಕರ್‌ಗಳಲ್ಲೇ ಗೌರಿ-ಗಣೇಶಮೂರ್ತಿಗಳನ್ನು ವಿಸರ್ಜಿಸಲಾಯಿತು. ಇನ್ನು ಕೆಲವರು ತಮ್ಮ ಮನೆಗಳಲ್ಲೇ ದೊಡ್ಡ ಪಾತ್ರೆ ಇರಿಸಿ ಗಣೇಶಮೂರ್ತಿ ವಿಸರ್ಜಿಸಿದರು. ಬಿಬಿಎಂಪಿ ಮೈದಾನಗಳು ಹಾಗೂ ದೊಡ್ಡ ವೃತ್ತಗಳಲ್ಲಿ ಈ ಮೊಬೈಲ್ ಟ್ಯಾಂಕರ್ ನಿಲ್ಲಿಸಿಕೊಂಡು ಗಣೇಶಮೂರ್ತಿ ವಿಸರ್ಜಿಸಲಾಯಿತು.
ಮಾಹಿತಿ ಗೊಂದಲ: ವಿಸರ್ಜನೆಗೆ ಪರದಾಟ
ಗಣೇಶ ಮೂರ್ತಿ ವಿಸರ್ಜನೆಗೆ ಅನೇಕರು ಪರದಾಡಿದ ದೃಶ್ಯ ಶನಿವಾರ ನಗರದಾದ್ಯಂತ ಕಂಡುಬಂತು. ಮೂರ್ತಿಗಳ ವಿಸರ್ಜನೆಗೆ ಸಂಚಾರಿ ಕಲ್ಯಾಣಿಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ, ನಗರದಲ್ಲಿ ಎಲ್ಲ ಕಡೆಯೂ ಮೊಬೈಲ್ ಕಲ್ಯಾಣಿಗಳ ವ್ಯವಸ್ಥೆ ಕಲ್ಪಿಸಿರಲಿಲ್ಲ. ಎಲ್ಲಿ, ಹೇಗೆ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಕೊರತೆಯಿಂದ ಜನರಲ್ಲಿ ಗೊಂದಲ ಉಂಟಾಗಿತ್ತು. ಇನ್ನೊಂದೆಡೆ ವಾರ್ಡ್‌ವಾರು ಒಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಬಿಬಿಎಂಪಿ ಸೂಚಿಸಿತ್ತು. ಆದರೆ, ಅದಕ್ಕೂ ಪೂರಕವಾದ ವ್ಯವಸ್ಥೆ ಇರಲಿಲ್ಲ. ಪ್ರದೇಶವಾರು ಸಹಸ್ರಾರು ಸಂಖ್ಯೆಯಲ್ಲಿ ಕೂರಿಸಿದರೆ, ಮನೆಗಳಲ್ಲಿ ಲಕ್ಷಾಂತರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು. ಉತ್ಸವಗಳಲ್ಲಿ ತುಸು ಎತ್ತರದ ಮೂರ್ತಿಗಳನ್ನು ಕೂರಿಸಿದವರು ಹೊರಗಡೆ ಮೂರ್ತಿ ವಿಸರ್ಜನೆ ವ್ಯವಸ್ಥೆ ಇಲ್ಲದೆ ಪರದಾಡಿದರು. ಕೆಲವರು ಗಣೇಶನ ವಿಸರ್ಜನೆಗೆ ಬಿಬಿಎಂಪಿಯಿಂದ ಅನುಮತಿ ಪಡೆದು, ಅದಕ್ಕಾಗಿ ಕಾಯುತ್ತ ಕೂರುವುದು ಕಷ್ಟವೆಂದು ಭಾವಿಸಿ, ಮಂದಿರದ ಹಿಂಭಾಗದಲ್ಲೇ ದೊಡ್ಡ ಗಾತ್ರದ ಡ್ರಮ್ ಇಟ್ಟು ಅದರಲ್ಲೇ ಶನಿವಾರವೇ ಮೂರ್ತಿ ವಿಸರ್ಜನೆ ಮಾಡಿದರು.
ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ
ನಗರದ ವಿವಿಧ ದೇವಸ್ಥಾನಗಳಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು. ಜೆಪಿ ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಈ ಬಾರಿ ಸರಳತೆಗೆ ಒತ್ತು ನೀಡಲಾಗಿತ್ತು. ದೇವಸ್ಥಾನವನ್ನು ಹಣ್ಣುಗಳಿಂದ ಅಲಂಕರಿಸಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಬಹುತೇಕರು ಮನೆಯಲ್ಲೇ ಅರಿಶಿಣದಿಂದ ಗಣೇಶ ಮೂರ್ತಿ ರೂಪಿಸಿದ್ದರು. ಕೆಲವರು ಮಣ್ಣಿನ ಗಣೇಶ ಖರೀದಿಸಿ ಪ್ರತಿಸ್ಥಾಪಿಸಿ ಪೂಜಿಸಿದರು. ಇನ್ನು ಕೆಲವೆಡೆ ಒಣ ಹಣ್ಣುಗಳು, ಹಣ್ಣುಗಳಿಂದ ಅಲಂಕರಿಸಿ ಪೂಜಿಸಿದ್ದು ವಿಶೇಷವಾಗಿತ್ತು.
ಹಿಂದು ಸಂಘಟನೆ, ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ: ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ
ರಾಜ್ಯದಲ್ಲಿ 400 ಕೋಟಿಗೂ ಹೆಚ್ಚು ವಹಿವಾಟಿಗೆ ಬ್ರೇಕ್!
ಕೊರೋನಾ ಸೋಂಕಿನ ಭೀತಿ ಗಣೇಶೋತ್ಸವಕ್ಕೆ ಹೊಡೆತ ನೀಡಿದ್ದು, ರಾಜ್ಯದಲ್ಲಿ ಸುಮಾರು ಅಂದಾಜು .400 ಕೋಟಿಗೂ ಹೆಚ್ಚು ವಹಿವಾಟು ನಷ್ಟವುಂಟಾಗಿದೆ. ಪ್ರತಿ ವರ್ಷ ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸುಮಾರು 350 ಕೋಟಿಗೂ ಹೆಚ್ಚು ಮೌಲ್ಯದ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೋನಾದಿಂದ ಉತ್ಸವ ಕಳೆಕುಂದಿತ್ತು.
ಪ್ರತಿ ವರ್ಷ ದೊಡ್ಡ ಗಾತ್ರದ ಗಣೇಶ ಮೂರ್ತಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ, ಈ ವರ್ಷ ರೋಗ ಹರಡುವ ಭಯದಲ್ಲಿ ಸಾರ್ವಜನಿಕ ಆಚರಣೆ ನಿರ್ಬಂಧಿಸಿದ್ದರಿಂದ ಹಾಗೂ 4 ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡದ ಹಿನ್ನೆಲೆ ಮೂರ್ತಿಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ. ನಗರದ ಕೆಲ ವ್ಯಾಪಾರಿಗಳು ಸರ್ಕಾರದ ಆದೇಶ ಧಿಕ್ಕರಿಸಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಆದರೆ, ಬೃಹತ್ ಗಣೇಶ ಮೂರ್ತಿಗಳು ವ್ಯಾಪಾರವಾಗದೆ ಮೂರ್ತಿ ತಯಾರಕರಿಗೆ ಭಾರಿ ನಷ್ಟವುಂಟಾಗಿದೆ. ಜತೆಗೆ ಹೂವು, ಹಣ್ಣು, ಬ್ಯಾಂಡ್ ಸೆಟ್, ಪೂಜಾ ಸಾಮಗ್ರಿಗಳು, ಅಲಂಕಾರಿ ವಸ್ತುಗಳು, ಬಟ್ಟೆಅಂಗಡಿ ಸೇರಿದಂತೆ ವಿವಿಧ ವ್ಯವಹಾರಕ್ಕೆ ಕತ್ತರಿ ಬಿದ್ದಿದ್ದು, ಇದರಿಂದಾಗಿ ಸುಮಾರು .400 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.
ಶನಿವಾರ 3,620 ಗಣೇಶಮೂರ್ತಿ ವಿಸರ್ಜನೆ
ಬಿಬಿಎಂಪಿಯು ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ, ಪಶ್ಚಿಮ, ದಕ್ಷಿಣ, ದಾಸರಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ರಾಜರಾಜೇಶ್ವರಿನಗರ ಮತ್ತು ಯಲಂಹಕ ವಲಯದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಇರಲಿಲ್ಲ. ಆರು ವಲಯಗಳ ಪೈಕಿ ಶನಿವಾರ ರಾತ್ರಿ ಸುಮಾರು 3,620 ಗಣೇಶಮೂರ್ತಿಗಳನ್ನು ಈ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲಾಗಿದೆ.
ಗಣೇಶಮೂರ್ತಿ ವಿಸರ್ಜನೆ ಮಾಹಿತಿ
ವಲಯ ಸಂಖ್ಯೆ
ಪೂರ್ವ 646
ದಕ್ಷಿಣ 1,955
ದಾಸರಹಳ್ಳಿ 131
ಮಹದೇವಪುರ 196
ಬೊಮ್ಮನಹಳ್ಳಿ 342
ಪಶ್ಚಿಮ 350
ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್: ಕಡಿಮೆಯಾದ ತ್ಯಾಜ್ಯ ಉತ್ಪಾದನೆ!
ರಾಜಧಾನಿಯಲ್ಲಿ ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದ್ದರಿಂದ ತ್ಯಾಜ್ಯ ಉತ್ಪಾದನೆ ಹಾಗೂ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಈ ಹಿಂದೆ ಗಣೇಶ ಚತುರ್ಥಿ ಮರುದಿನ ನಗರದಲ್ಲಿ ಸಾಮಾನ್ಯ ದಿನಕ್ಕಿಂತ ಒಂದು ಸಾವಿರ ಟನ್‌ಗೂ ಅಧಿಕ ಕಸ ಉತ್ಪಾದನೆಯಾಗುತ್ತಿತ್ತು. ಈ ಬಾರಿ ಆ ಪ್ರಮಾಣ 400 ಟನ್‌ಗೆ ಇಳಿಕೆಯಾಗಿದೆ. ಈ ಬಾರಿ ವಾರ್ಡ್‌ಗೆ ಒಂದು ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅನುಮತಿ ನೀಡಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಮೂರ್ತಿ ಬಳಿ 20ಕ್ಕಿಂತ ಹೆಚ್ಚು ಮಂದಿ ಗುಂಪು ಗೂಡುವುದನ್ನು ನಿರ್ಬಂಧಿಸಿರುವುದು, ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಈ ಬಾರಿ ಅದ್ಧೂರಿ ಆಚರಣೆಗಳು ಇಲ್ಲದಿರುವುದರಿಂದ ತ್ಯಾಜ್ಯ ಉತ್ಪಾದನೆ ಕಡಿಮೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಹಸಿ ಮತ್ತು ಒಣ ಕಸ ಸೇರಿ ಸುಮಾರು 5 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಚೌತಿ ಮಾರನೇ ದಿನ ಈ ಬಾರಿ 400 ಟನ್ ತ್ಯಾಜ್ಯ ಉತ್ಪಾದನೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ:
ಪ್ರತಿ ವರ್ಷ ಸಾಮಾನ್ಯವಾಗಿ ಗಣೇಶ ಹಬ್ಬಕ್ಕೆ ಕನಿಷ್ಠ ಎ ಲಕ್ಷ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಆಚರಣೆಗೆ ಕೊರೋನಾ ಅಡ್ಡಿಯಾಗಿರುವುದರಿಂದ ಒಂದು ಲಕ್ಷಕ್ಕೂ ಕಡಿಮೆ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸಾಧ್ಯತೆಯಿದೆ. ಹೀಗಾಗಿ ನೀರಿನ ಮಾಲಿನ್ಯ ತಪ್ಪಿದೆ. ಇನ್ನು ಧ್ವನಿವರ್ಧಕಗಳ ಅಬ್ಬರವೂ ತಗ್ಗಿದೆ.
ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಗಣೇಶೋತ್ಸವ ಸಂಗೀತ ರಸಸಂಜೆ
ಕಳೆದ ಐದು ದಶಕಗಿಂತ ಹೆಚ್ಚು ಕಾಲದಿಂದ ನಿರಂತರವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ‘ಬೆಂಗಳೂರು ಗಣೇಶೋತ್ಸವ ಸಮಿತಿ’ ಕೊರೋನಾ ಭೀತಿಯ ನಡುವೆಯೂ ಪ್ರಖ್ಯಾತ ಕಲಾವಿದರಿಂದ ವೈವಿಧ್ಯಮ ಸಂಗೀತ ಧಾರೆಯನ್ನು ಸಂಗೀತ ಪ್ರಿಯರಿಗೆ ಮನೆಯಲ್ಲಿ ಉಣಬಡಿಸುತ್ತಿದೆ.
ಆ.22ರಿಂದ ಸೆ.1ರ ವರೆಗೆ ಬಸವನಗುಡಿ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ 58ನೇ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆ.31ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಖ್ಯಾತ ಗಾಯಕರಿಂದ ಚಿತ್ರಗೀತೆ, ಭಕ್ತಿ ಪ್ರದಾನ, ಜಾನಪದ, ಹಿಂದಿಯ ಹಳೆಯ ಹಾಡುಗಳು, ಶಾಸ್ತ್ರೀಯ ಸಂಗೀತ, ಭಾವಗೀತೆಗಳು, ಫೋಕ್-ರಾಕ್ ಮ್ಯೂಸಿಕ್, ಡ್ರಮ್ಸ್ ಕಲೆಕ್ಟಿವ್ ಸೇರಿದಂತೆ ಸಂಗೀತದ ಎಲ್ಲ ಕಾರ್ಯಕ್ರಮಗಳನ್ನು ಫೇಸ್‌ಬುಕ್ ಲೈವ್ ಹಾಗೂ ಬೆಂಗಳೂರು ಗಣೇಶ ಉತ್ಸವ ಯೂಟ್ಯೂಬ್ ಮೂಲಕ ಲೈವ್ ಮಾಡಲಾಗುತ್ತಿದ್ದು, ಕುಳಿತಲ್ಲಿಯೇ ಆನಂದಿಸಬಹುದು.
ಆ.25ರಂದು ಸಂಜೆ 6.30ಕ್ಕೆ ಚಕ್ರಫೋನಿಕ್ಸ್ ಫä್ಯಷನ್ ಸಂಗೀತ ಸಂಜೆ ನಡೆಯಲಿದೆ. ಆ.26ರಂದು ಖ್ಯಾತ ಹಿಂದಿ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಅವರಿಗೆ ಹಾಡುಗಳ ಗಾಯನ. ಆ.27ರಂದು ಸ್ಫೂರ್ತಿ ರಾವ್ ಮತ್ತು ರಾಹುಲ್ ವೆಲ್ಲಾಲ್ ಅವರಿಂದ ಕ್ಲಾಸಿಕಲ್ ಮತ್ತು ಭಕ್ತಿಪ್ರಧಾನ ಗೀತೆಗಳ ಗಾಯನ, ಆ.28ರಂದು ಶುಕ್ರವಾರ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಂದ ‘ಫೋಕ್-ರಾಕ್ ಮ್ಯೂಸಿಕಲ್ ಕಾನ್‌ಸರ್ಟ್’ ನಡೆಯಲಿದೆ. ಆ.29ರಂದು ‘ಮಂಜು ಡ್ರಮ್ಸ್ ಕಲೆಕ್ಟೀವ್’ ನಡೆಯಲಿದೆ.