
ಬೆಂಗಳೂರು(ಆ.24): ಕಾವಲ್‌ಭೈರಸಂದ್ರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿ ಮೊಹಮ್ಮದ್ ಜಾವೀದ್ ಹಾಗೂ ಈತನ ಸಹಚರ ಇರ್ಷಾದ್ ಬಂಧಿತರು.
ಜಾವೀದ್, ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟದ ಆರೋಪಿ ಆಫ್ರಿದಿಯ ಬಾಮೈದ ಎಂದು ಗೊತ್ತಾಗಿದೆ. ಶನಿವಾರವೇ ಜಾವೀದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಟೋ ಚಾಲಕನಾಗಿರುವ ಮೊಹಮ್ಮದ್ ಜಾವೀದ್ ಎಸ್‌ಡಿಪಿಐ ಸಕ್ರೀಯ ಕಾರ್ಯಕರ್ತ. ಆ.11ರಂದು ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ಈತ ಹೆಗಡೆ ನಗರದಿಂದ ಯುವಕರ ಗುಂಪನ್ನು ಕರೆದೊಯ್ದಿದ್ದ. ಗಲಭೆ ನಡೆದಾಗ ಡಿ.ಜೆ.ಹಳ್ಳಿಯಲ್ಲಿ ಓಡಾಡಿರುವ ಬಗ್ಗೆ ಮೊಬೈಲ್ ಕರೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳು ಕೂಡ ಲಭ್ಯವಾಗಿದೆ. ಗಲಭೆಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
'ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಬಿಜೆಪಿಯ ಕುಮ್ಮಕ್ಕೇ ಕಾರಣ'
ಆರೋಪಿ ಜಾವೀದ್, ತನ್ನ ಸ್ನೇಹಿತರೊಂದಿಗೆ ಗಲಭೆಯಲ್ಲಿ ಭಾಗಿಯಾದ ಉದ್ದೇಶವೇನು ಎಂಬುದು ಗೊತ್ತಿಲ್ಲ. ಆತನಿಗೆ ಉಗ್ರ ಸಂಘಟನೆ ನಂಟು ಇದೆಯಾ ಎಂಬುದು ತನಿಖೆಯಿಂದ ತಿಳಿಯಬೇಕು. ಈತನ ಜೊತೆ ಒಡನಾಟವಿಟ್ಟುಕೊಂಡಿದ್ದ ಮತ್ತಷ್ಟುಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಚರ್ಚ್‌ಸ್ಟ್ರೀಟ್ ಸ್ಫೋಟದ ಆರೋಪಿಯ ಸಂಬಂಧಿ!
2014ರಲ್ಲಿ ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಬಂಧಿತ ಆರೋಪಿ ಆಫ್ರಿದಿ ಮತ್ತು ಜಾವೀದ್ ಸಂಬಂಧಿಕರಾಗಿದ್ದಾರೆ. ಜಾವೀದ್‌ನ ಸಹೋದರಿಯನ್ನು ಆಫ್ರಿದಿ ವಿವಾಹವಾಗಿದ್ದಾನೆ. ಸ್ಫೋಟ ಪ್ರಕರಣದಲ್ಲಿ ಜೈಲಿನಲ್ಲಿರುವ ಆಫ್ರಿದಿ ಜತೆ ಜಾವೀದ್ ನಿರಂತರ ಸಂಪರ್ಕದಲ್ಲಿದ್ದ. ಆಫ್ರಿದಿಗೆ ಊಟ ಕೊಡಲು ಹಲವು ಭಾರಿ ಜೈಲಿಗೆ ಹೋಗಿ, ಆತನನ್ನು ಭೇಟಿಯಾಗಿ ಬಂದಿದ್ದಾನೆ. ಇದೀಗ ಗಲಭೆಯಲ್ಲಿ ಪಾಲ್ಗೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಎಲ್ಲ ಆಯಮಾಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ