ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಮೇಲಿನ ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯಲ್ಲಿ ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದಕ್ಕೆ ವೈದ್ಯಕೀಯ ನಿಖರತೆಗಳು ಕಾಣಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.
ಚಿತ್ರದುರ್ಗ (ಜ.05): ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಮೇಲಿನ ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯಲ್ಲಿ ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದಕ್ಕೆ ವೈದ್ಯಕೀಯ ನಿಖರತೆಗಳು ಕಾಣಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಸಂತ್ರಸ್ತ ಬಾಲಕಿಯರಿಗೆ ತಲೆಯಿಂದ ಪಾದದವರೆಗೆ ಯಾವುದೇ ಗಾಯಗಳಾಗಿಲ್ಲ, ಬಟ್ಟೆಯಲ್ಲಿ ರಕ್ತ ಅಥವಾ ವೀರ್ಯದ ಕಲೆಗಳಾಗಲಿ ಇಲ್ಲ. ಕನ್ಯಾಪೊರೆಗೆ ಹಾನಿ ಆಗಿಲ್ಲ ಎಂದು ವರದಿಯಲ್ಲಿ ದೃಢಪಡಿಸಲಾಗಿದೆ.
ಜಿಲ್ಲಾಸ್ಪತ್ರೆಯ ಹಿರಿಯ ತಜ್ಞೆ ಡಾ.ಉಮಾ ಅವರು ಪರೀಕ್ಷೆ ನಡೆಸಿ ವೈದ್ಯಕೀಯ ವರದಿ ನೀಡಿದ್ದಾರೆ. ಸ್ವಾಮೀಜಿಯವರು ನಮ್ಮ ಅಂಗಾಂಗ ಸ್ಪರ್ಶಿಸುತ್ತಿದ್ದರು. ಆದರೆ ನಮ್ಮೊಂದಿಗೆ ದೈಹಿಕ ಸಂಪರ್ಕ ಮಾಡಿರಲಿಲ್ಲವೆಂದು ಸಂತ್ರಸ್ತ ಬಾಲಕಿಯರು ವೈದ್ಯಕೀಯ ತಪಾಸಣೆ ವೇಳೆ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅ.27ರಂದು ಚಿತ್ರದುರ್ಗ ಪೋಕ್ಸೋ ನ್ಯಾಯಾಲಯಕ್ಕೆ ಗ್ರಾಮಾಂತರ ಠಾಣೆ ತನಿಖಾಧಿಕಾರಿ ಸಲ್ಲಿಸಿರುವ ಆರೋಪ ಪಟ್ಟಿಜತೆಗೆ ಈ ಮೆಡಿಕಲ್ ರಿಪೋರ್ಟ್ ಸಲ್ಲಿಸಲಾಗಿದೆ.
ಬೀದರ್‌ನಲ್ಲಿ ಇಂದು 2ನೇ ಹಂತದ ಪಂಚರತ್ನ ಯಾತ್ರೆ ಆರಂಭ: ಎಚ್.ಡಿ.ಕುಮಾರಸ್ವಾಮಿ
ಮುರುಘಾ ಶರಣರ ವಿರುದ್ಧ ಫೋಕ್ಸೋ ಕೇಸ್ ದಾಖಲಾದ ಬಳಿಕ ಆ.28ರಂದು ಸಂತ್ರಸ್ತ ಬಾಲಕಿಯರ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಅದರಂತೆ ಸಂತ್ರಸ್ತ ಬಾಲಕಿಯರ ಉಗುರು, ಬಟ್ಟೆ, ಬ್ಲಡ್ ಗ್ರೂಪ್ ಸೇರಿದಂತೆ ಎಲ್ಲವನ್ನೂ ಸಂಗ್ರಹಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ನಡೆದಿದೆ ಎಂಬುದಕ್ಕೆ ನಿಖರ ಅಂಶಗಳು ಲಭ್ಯವಾಗಿಲ್ಲ. ಅಂತಿಮವಾಗಿ ಫೋರೆನ್ಸಿಕ್ ವರದಿ ನಿರೀಕ್ಷಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುರುಘಾ ಶರಣರ ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣ ಇದಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದರು. ಅವರ ವೈದ್ಯಕೀಯ ಪರೀಕ್ಷೆ ವರದಿ ಇದಾಗಿದೆ.
2ನೇ ಕೇಸ್ ಚಾಜ್‌ರ್‍ಶೀಟ್ ಸಲ್ಲಿಸಿಲ್ಲ: ಮುರುಘಾಶ್ರೀ ಮೇಲಿನ 2ನೇ ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಇನ್ನೂ ಆರೋಪ ಪಟ್ಟಿಸಲ್ಲಿಸಿಲ್ಲ. ವಾರದೊಳಗೆ ಚಾಜ್‌ರ್‍ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ. ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಶ್ರೀಗಳು ಇನ್ನೂ ಜೈಲುವಾಸ ಅನುಭವಿಸುತ್ತಿದ್ದಾರೆ. ಇನ್ನು ಮುರುಘಾಶ್ರೀ ಮೇಲೆ ಪೋಕ್ಸೋ ಪ್ರಕರಣ ದಾಖಲಿಸುವಲ್ಲಿ ಪಿತೂರಿ ನಡೆಸಿದರು ಎಂಬ ಆರೋಪದಡಿ ಬಂಧಿತ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಪತ್ನಿಸೌಭಾಗ್ಯ ಬಸವರಾಜನ್ ಅವರಿಗೆ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ.
ಪ್ರಕೃತಿ ಎದುರಿನ ಸಂಘರ್ಷದಲ್ಲಿ ಮನುಷ್ಯ ಸೋಲಬೇಕು: ರಿಷಬ್ ಶೆಟ್ಟಿ
ಏನಿದು ಪ್ರಕರಣ?: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಮಠದ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವರದಿಯನ್ನು ಆರೋಪಪಟ್ಟಿಯ ಜೊತೆ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಮುರುಘಾ ಶರಣರು ಜೈಲಿನಲ್ಲಿದ್ದಾರೆ. ನಂತರ ಇನ್ನೂ ಇಬ್ಬರು ಬಾಲಕಿಯರು ತಮ್ಮ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ್ದಾರೆ. ಆ ಪ್ರಕರಣದ ವೈದ್ಯಕೀಯ ವರದಿ ಇನ್ನೂ ಬಂದಿಲ್ಲ.