ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಕೇವಲ ಕಟ್ಟುಕಥೆ!: ಮಾಜಿ ಸಿಎಂಗೆ ಕ್ಲೀನ್ ಚಿಟ್ ಕೊಟ್ಟ ಸಿಸಿಬಿ!

Published : Oct 29, 2026, 04:14 PM IST
Siddaramaiah Sting Operation Clean Chit

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ 'ಸ್ಟಿಂಗ್ ಆಪರೇಷನ್' ವಿಡಿಯೋ ಸಂಪೂರ್ಣ ನಕಲಿ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 2011ರ ಘಟನೆಗೆ 2023ರಲ್ಲಿ ವಿಡಿಯೋ ಸೃಷ್ಟಿಸಿ, ದೆಹಲಿಯಿಂದ ಅಪ್‌ಲೋಡ್ ಮಾಡಿದ ಓರ್ವನನ್ನು ಬಂಧಿಸಲಾಗಿದೆ. ಗಣ್ಯರ ತೇಜೋವಧೆ ಮಾಡಲು ರೂಪಿಸಿದ ವ್ಯವಸ್ಥಿತ ಸಂಚು ಇದಾಗಿದೆ ಎಂದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರು (ಅ.29): ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತ 'ಸ್ಟಿಂಗ್ ಆಪರೇಷನ್' ಹೆಸರಿನ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ಮತ್ತು ಕಟ್ಟುಕಥೆಯಾಗಿದೆ. ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಷಡ್ಯಂತ್ರ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ತನಿಖಾ ವರದಿಯ ಮುಖ್ಯಾಂಶಗಳು ಹೀಗಿವೆ:

ಯಾವುದೇ ಘಟನೆ ನಡೆದಿಲ್ಲ: ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ದಾಖಲಾದ ಹೇಳಿಕೆಗಳ ಪ್ರಕಾರ, ವಿಡಿಯೋದಲ್ಲಿ ತೋರಿಸಿರುವ ರೀತಿಯಲ್ಲಿ ಯಾವುದೇ ನೈಜ ಘಟನೆ ನಡೆದಿಲ್ಲ.

ಆರೋಪಗಳು ಸುಳ್ಳು: ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೆ ಒಳಪಡಿಸಲಾಗಿದ್ದು, ವಿಡಿಯೋದಲ್ಲಿ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಮೊಬೈಲ್ ಜಪ್ತಿ, ಎಫ್‌ಎಸ್‌ಎಲ್ ಪರೀಕ್ಷೆ: ವಿಡಿಯೋ ಚಿತ್ರೀಕರಿಸಲು ಬಳಸಲಾದ ಮೂಲ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.

2011ರ ಘಟನೆಗೆ 2023ರಲ್ಲಿ ಶೂಟಿಂಗ್?

ಪ್ರಕರಣದಲ್ಲಿ ಅತಿ ಮುಖ್ಯ ಅಂಶವೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬರೋಬ್ಬರಿ 12 ವರ್ಷಗಳ ನಂತರ, ಅಂದರೆ 2023ರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇಷ್ಟು ವರ್ಷಗಳ ನಂತರ ಯಾವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಲಾಯಿತು ಮತ್ತು ಇದನ್ನು ಕೃತಕವಾಗಿ ತಿರುಚಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ದೆಹಲಿಯಲ್ಲಿ ಆರೋಪಿ ಬಂಧನ: ರಾಜಕೀಯ ನಂಟು ಬಯಲು?

ಅನಾಮಧೇಯ ತಂತ್ರಜ್ಞಾನದ ಬಳಕೆ: ಯೂಟ್ಯೂಬ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಲು ವಿಪಿಎನ್ (VPN), ನಕಲಿ ಐಪಿ (IP) ವಿಳಾಸ ಹಾಗೂ ವರ್ಚುವಲ್ ನಂಬರ್‌ಗಳನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೆಹಲಿಯಿಂದ ಮೊಬೈಲ್ ಖರೀದಿ: ಯೂಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡಲು ಬಳಸಲಾದ ಮೊಬೈಲ್ ಅನ್ನು ದೆಹಲಿಯ ಹಳೆಯ ಮೊಬೈಲ್ ಅಂಗಡಿಯಿಂದ ಖರೀದಿಸಲಾಗಿತ್ತು.

ಒಬ್ಬನ ಬಂಧನ: ದೆಹಲಿ ಎನ್‌ಸಿಆರ್ (NCR) ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸೈಬರ್ ಪೊಲೀಸರು, ಮೊಬೈಲ್ ಖರೀದಿಗೆ ಸಂಬಂಧಿಸಿದಂತೆ ಸ್ವತಂತ್ರ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ (Freelance Content Creator) ಆಗಿ ಕೆಲಸ ಮಾಡುತ್ತಿದ್ದ ಓರ್ವ ಆರೋಪಿಯನ್ನು ಅಕ್ಟೋಬರ್ 24 ರಂದು ಬಂಧಿಸಿದ್ದಾರೆ.

ಪ್ರಭಾವಿಗಳ ಸಂಪರ್ಕ: ಪ್ರಾಥಮಿಕ ತನಿಖೆಯಲ್ಲಿ, ಈತನಿಗೆ ನವದೆಹಲಿಯಲ್ಲಿರುವ ಕೆಲ ಪ್ರಭಾವಿ ರಾಜಕೀಯ ಸಂಪರ್ಕಗಳು ಇರುವುದು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.

ತೇಜೋವಧೆ ಮಾಡುವ ವ್ಯವಸ್ಥಿತ ಸಂಚು:

ರಾಜ್ಯದಲ್ಲಿ ಸಾಂವಿಧಾನಿಕ ಹಾಗೂ ಉನ್ನತ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಗಣ್ಯ ವ್ಯಕ್ತಿಗಳ ತೇಜೋವಧೆ ಮಾಡಲು, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರಲು ಹಾಗೂ ರಾಜಕೀಯ ವಿವಾದ ಸೃಷ್ಟಿಸುವ ದುರುದ್ದೇಶದಿಂದಲೇ ಈ ವಿಡಿಯೋವನ್ನು ವ್ಯವಸ್ಥಿತವಾಗಿ ರೂಪಿಸಿ ಹಂಚಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಚಿನಲ್ಲಿ ಭಾಗಿಯಾಗಿರುವ ಹಲವರಿಗೆ ಈಗಾಗಲೇ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.

ಪೊಲೀಸರ ಮನವಿ:

ಯಾವುದೇ ದೃಢೀಕರಿಸದ ಆರೋಪಗಳು ಹಾಗೂ ಸುಳ್ಳು ವಿಡಿಯೋಗಳನ್ನು ಸಾರ್ವಜನಿಕರು ಮತ್ತು ಮಾಧ್ಯಮಗಳು ಪ್ರಸಾರ ಮಾಡಬಾರದು ಹಾಗೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವ ಮುನ್ನ ಸಂಯಮ ವಹಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC, ಪಿಯುಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಜನಗಣತಿ ಇದ್ದರೂ ಮುಂದೂಡಿಕೆ ಇಲ್ಲ!
Karnataka News Live: ಸಚಿವ ಯತೀಂದ್ರ ಸಿದ್ದರಾಮಯ್ಯ ಜಂಬದ ಕೋಳಿಯಂತೆ ಮಾತನಾಡಬಾರದು - ಹೆಚ್. ವಿಶ್ವನಾಥ್