
ಪುತ್ತೂರು (ಅ.21): ಸಮ ಸಮಾಜ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಉಳ್ಳವರು ಇಲ್ಲದವರಿಗೆ ಹಂಚಬೇಕು ಇದನ್ನು ೧೨ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ದಾಸೋಹ ಮೂಲಕ ತಿಳಿಸಿದ್ದು, ಉತ್ಪಾದಿಸಿದ್ದನ್ನು ಹಂಚಿಕೊಂಡು ತಿನ್ನಬೇಕು. ಇದು ಸಮ ಸಮಾಜಕ್ಕೆ ಪೂರಕಾವಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಜನಮನ ಕಾರ್ಯಕ್ರಮದ ಮೂಲಕ ಈ ಕಾರ್ಯ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಆ್ಯಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸೋಮವಾರ ದೀಪಾವಳಿ ಪ್ರಯುಕ್ತ ಆಯೋಜಿಸಲಾದ ‘ಅಶೋಕ ಜನಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯ ಸಾಕಷ್ಟಿದೆ. ಸಂವಿಧಾನ ಎಲ್ಲರಿಗೂ ಅರ್ಥವಾದಾಗ ಸಮ ಸಮಾಜ ನಿರ್ಮಾಣ ಸಾಧ್ಯವಿದೆ. ಅದಕ್ಕಾಗಿ ಪ್ರತಿಯೊಂದು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಮಾಡಲಾಗುತ್ತಿದೆ ಎಂದರು. ಯಾವುದೇ ಧರ್ಮವೂ ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮವು ಪ್ರತಿಯೊಬ್ಬರನ್ನು ಪ್ರೀತಿಸಲು ತಿಳಿಸುತ್ತದೆ. ನಮ್ಮಲ್ಲಿರುವ ಅಸಮಾನತೆಗಳ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕುವೆಂಪು ಅವರು ಹೇಳುವ ಸರ್ವ ಜನಾಂಗದ ಶಾಂತಿಯ ತೋಟವಾಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯ ಕುರಿತು ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿದಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ವಯವಿದೆ ಎಂದು ಹೇಳಿದರು.
ಇದನ್ನೂ ಓದಿ: ನಾವು ಆರ್‌ಎಸ್‌ಎಸ್‌ಗೆ ನಿಷೇಧ ಹೇರಿಲ್ಲ, ಅದರ ಉಲ್ಲೇಖವೇ ಇಲ್ಲ: ಸಿಎಂ ಸ್ಪಷ್ಟನೆ
ಜಾತಿ-ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸುವುದರಲ್ಲಿ ದ.ಕ. ಜಿಲ್ಲೆ ನಂಬರ್ ೧ ಆಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಗೆ ದಕ್ಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಮಸೂದೆ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಜಿಎಸ್‌ಟಿ ಇಳಿಕೆಯಿಂದ ರಾಜ್ಯಕ್ಕೆ ನಷ್ಟ:
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಪಕ್ಷಗಳ ಹೇಳಿಕೆಯಲ್ಲಿ ನಿಜವಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಖರ್ಚು ಮಾಡಿದೆ. ಆದರೆ ಇದರಿಂದಾಗಿ ಸರ್ಕಾರ ದಿವಾಳಿಯಾಗಿಲ್ಲ. ನುಡಿದಂತೆ ನಡೆದ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ನಾನು ಮುಖ್ಯಮಂತ್ರಿಯಾಗಿರುವ ತನಕ ಬಡವರ ಕೆಲಸ ನಿಲ್ಲಿಸುವುದಿಲ್ಲ ಎಂದ ಅವರು, ವಿರೋಧ ಪಕ್ಷಗಳು ಇದೀಗ ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆಯುವ ಕೆಲಸ ಮಾಡುತ್ತಿದೆ. ಜಿಎಸ್‌ಟಿ ಜಾರಿಗೊಳಿಸಿ ೮ ವರ್ಷಗಳ ಕಾಲ ತೆರಿಗೆ ಸಂಗ್ರಹಿಸಿದ ಕೇಂದ್ರ ಸರ್ಕಾರ, ಇದೀಗ ಇಳಿಕೆ ಮಾಡಿ ಅದನ್ನು ದೀಪಾವಳಿ ಗಿಫ್ಟ್ ಎಂದು ಬಿಂಬಿಸುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ೧೫ ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದರು.
ಬಡವರ ಮಕ್ಕಳನ್ನು ಸಾಯಿಸುವ ಕೆಲಸ ಮಾಡಬಾರದು:
ಸಮ ಸಮಾಜ ನಿರ್ಮಾಣವಾಗಬೇಕಾದರೆ, ಅಸಮಾನತೆಯನ್ನು ಹೋಗಲಾಡಿಸುವ ಕೆಲಸ ಆಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮನುಷ್ಯನಾಗಲು ಪ್ರಯತ್ನಿಸಬೇಕು. ಬಡವರ ಮಕ್ಕಳನ್ನು ಸಾಯಿಸುವ ಕೆಲಸ ಮಾಡಬಾರದು. ಜನರನ್ನು ಎತ್ತಿ ಕಟ್ಟುವ ಮೇಲ್ಜಾತಿ ಮತ್ತು ಶ್ರೀಮಂತರ ಮಕ್ಕಳು ಜೈಲಿಗೆ ಹೋಗುವುದಿಲ್ಲ. ಇಂತಹ ಸೂಕ್ಷ್ಮತೆಗಳನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜು ಮಾಡಿಯೇ ಸಿದ್ಧ:
ಸರ್ಕಾರಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಯಾರು ಏನೇ ಹೇಳಿದರೂ, ಎಷ್ಟೇ ಖರ್ಚಾದರೂ ಮಾಡಿಯೇ ಸಿದ್ಧ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದ ಸಿದ್ದರಾಮಯ್ಯ, ಮೆಡಿಕಲ್ ಕಾಲೇಜಿಗೆ ಬೇಕಾದ ಆಸ್ಪತ್ರೆಯನ್ನು ಮಾಡಿಸಿಕೊಳ್ಳಿ ಎಂದು ಶಾಸಕ ಅಶೋಕ್ ರೈಗೆ ಸೂಚಿಸಿದರು. ಎಲ್ಲ ಜಿಲ್ಲೆಯಲ್ಲಿಯೂ ಒಂದು ಮೆಡಿಕಲ್ ಕಾಲೇಜು ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎನ್ನುವುದು ನಮ್ಮ ಇಂಗಿತ. ಈ ತನಕ ೨೨ ಜಿಲ್ಲೆಗಳಲ್ಲಿ ಈ ಕಾರ್ಯ ಮಾಡಿದ್ದೇವೆ. ನಾವು ಕೊಟ್ಟ ಮಾತನ್ನು ತಪ್ಪುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನರ ನಡುವೆ ಪ್ರೀತಿ ಮತ್ತು ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು, ಗೆಲ್ಲಿಸಿದ ಜನತೆಯ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎನ್ನುವ ಅಶೋಕ್ ರೈ ಅವರ ಛಲ ಅದಕ್ಕಾಗಿ ಅವರು ನಡೆಸುತ್ತಿರುವ ಪ್ರಯತ್ನಗಳು ಅವರ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 'ಗಾಂಧಿ ಕುಟುಂಬದಿಂದಲೇ ಆರೆಸ್ಸೆಸ್ ನಿಷೇಧಿಸಲಾಗಿಲ್ಲ, ಇನ್ನ ಈ ಕುನ್ನಿ..' ಖರ್ಗೆ ವಿರುದ್ಧ ಈಶ್ವರಪ್ಪ ಕಿಡಿ
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಪುತ್ತೂರು ಮಾಯ್ ದೇ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಡಿಸೋಜ, ಸುನ್ನಿ ವಿದ್ವಾಂಸ ಎಸ್.ಬಿ. ದಾರಿಮಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಇನಾಯತ್ ಅಲಿ, ಪದ್ಮರಾಜ ಪೂಜಾರಿ, ರಕ್ಷಿತ್ ಶಿವರಾಂ, ಭರತ್ ಮುಂಡೋಡಿ, ಮಮತಾಗಟ್ಟಿ, ಮಲ್ಲಿಕಾ ಪಕ್ಕಳ, ಎಂ.ಎಸ್. ಮಹಮ್ಮದ್, ಉಮಾನಾಥ ಶೆಟ್ಟಿ ಪೆರ್ನೆ, ಲಾವಣ್ಯ ಬಳ್ಳಾಲ್, ಚಂದ್ರಹಾಸ ಶೆಟ್ಟಿ, ಡಾ. ರಾಜಾರಾಂ ಕೆ.ಬಿ., ಸುಮಾ ಅಶೋಕ್ ರೈ ಮತ್ತಿತರರು ಉಪಸ್ಥಿತರಿದ್ದರು.ರೈ ಎಸ್ಟೇಟ್ ಆ್ಯಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೇಶ್ ಆರ್. ಶೆಟ್ಟಿ ಸ್ವಾಗತಿಸಿದರು. ಪ್ರವರ್ತಕ ಶಾಸಕ ಅಶೋಕ್ ಕುಮಾರ್ ರೈ ಪ್ರಾಸ್ತಾವಿಕ ಮಾತನಾಡಿದರು. ಮಹಮ್ಮದ್ ಬಡಗನ್ನೂರು ನಿರೂಪಿಸಿದರು. ಟ್ರಸ್ಟಿ ನಿಹಾಲ್ ಶೆಟ್ಟಿ ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ