ಪಡಿತರ ಅಕ್ಕಿ ಕಡಿತ: ಸರ್ಕಾರದ ಚಿಂತನೆಗೆ ಸಿದ್ದರಾಮಯ್ಯ ಗರಂ| 2.4 ಲಕ್ಷ ಕೋಟಿ ಬಜೆಟ್ಟಿದೆ, 4000 ಕೋಟಿ ಖರ್ಚು ಕಷ್ಟವೇ?| ನೆರೆ ಇದ್ದರೂ ಜನ ಗುಳೆ ಹೋಗದಿರುವುದಕ್ಕೆ ಅನ್ನಭಾಗ್ಯ ಕಾರಣ
ನವದೆಹಲಿ[ಜ.16]: ಆಹಾರ ಇಲಾಖೆಯು ಪಡಿತರದಾರರಿಗೆ ನೀಡುವ ಅಕ್ಕಿ ಪ್ರಮಾಣವನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಕಡಿತ ಮಾಡಲು ಚಿಂತನೆ ನಡೆಸಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2.40 ಲಕ್ಷ ಕೋಟಿ ರು. ಬಜೆಟ್ ಹೊಂದಿರುವ ಕರ್ನಾಟಕದಲ್ಲಿ ಅಕ್ಕಿ ವಿತರಣೆಗೆ 4 ಸಾವಿರ ಕೋಟಿ ರು. ವೆಚ್ಚ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಮರಳಿ ಅಧಿಕಾರಕ್ಕೆ ಬಂದಿದ್ದರೆ 10 ಕೆ.ಜಿ. ಅಕ್ಕಿ ಕೊಡುತ್ತಿದ್ದೆವು ಎಂದು ತಿಳಿಸಿದರು.
ಸಿದ್ದು ಸರ್ಕಾರದ ಯೋಜನೆಗೆ ಕತ್ತರಿ: BPL ಕುಟುಂಬ ಸದಸ್ಯರಿಗೆ ಸಂಕ್ರಾಂತಿ ಶಾಕ್!
ರಾಜ್ಯದಲ್ಲಿ ಪ್ರವಾಹ ಬಂದಿದ್ದರೂ ಬಡವರು ಗುಳೆ ಹೋಗದಿರಲು ಅನ್ನಭಾಗ್ಯ ಅಕ್ಕಿಯೇ ಕಾರಣ. ಅಕ್ಕಿ ಕೊಡದಿದ್ದರೆ ಬಡವರು ತಿರುಗಿ ಬೀಳುತ್ತಾರೆ. ಇದು ಬಡವರಿಗೆ ಕೊಡುವ ಅಕ್ಕಿ ಎಂದು ಹೇಳಿದರು.
ಆಹಾರ ಇಲಾಖೆಯು ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿ ಪ್ರಮಾಣವನ್ನು ಏಳು ಕೆ.ಜಿ.ಯಿಂದ ಐದು ಕೆ.ಜಿ.ಗೆ ಕಡಿತ ಮಾಡಿ ಇದಕ್ಕೆ ಬದಲಾಗಿ ಗೋಧಿ ಅಥವಾ ರಾಗಿ, ತೊಗರಿ ಬೇಳೆ, ಅಡುಗೆ ಎಣ್ಣೆ ನೀಡುವ ಕುರಿತು ಉಪ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಮತ್ತೆ ಚರ್ಚೆಗೆ ಬಂದಿದೆ. ಈ ಪ್ರಸ್ತಾವನೆ ಬಗ್ಗೆ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ‘ಕನ್ನಡಪ್ರಭ’ ಬುಧವಾರ ವರದಿ ಮಾಡಿತ್ತು.