ಮುಖ್ಯಮಂತ್ರಿ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ಗರಂ

By Web DeskFirst Published Jul 16, 2018, 2:02 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕುಮಾರಸ್ವಾಮಿ ಅವರ ವಿಷಕಂಠ ಹೇಳಿಕೆಯಿಂದ ಕಾಂಗ್ರೆಸ್ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆಗಳು ಮೂಡಿತ್ತದೆ. ಇದು ಲೋಕಸಭಾ ಚುನಾವಣೆ ಮೇಲೂ ಕೂಡಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. 

ಬೆಂಗಳೂರು : ವಿಷ ಕಂಠನಂತೆ ನೋವು ನುಂಗುತ್ತಿದ್ದೇನೆ ಎಂಬ ಸಿಎಂ ಕುಮಾರಸ್ವಾಮಿ  ಹೇಳಿಕೆಗೆ  ಮಲ್ಲಿಕಾರ್ಜುನ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಗರಂ ಆಗಿದ್ದಾರೆ. 

ಸಿಎಂ ಕುಮಾರಸ್ವಾಮಿ  ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಪ್ಪ‌‌ ಮಕ್ಕಳದ್ದು ಬರೀ ಇದೆ ಆಯ್ತು ಎಂದು ಆಪ್ತರ ಬಳಿ ಈ ಹೇಳಿಕೆ ಬಗ್ಗೆ ಲೇವಡಿ ಮಾಡಿದ್ದಾರೆ.  ಅಲ್ಲದೇ ಕುಮಾರಸ್ವಾಮಿ ಅವರಿಗೆ ಕಣ್ಣೀರಿಡುವಂತಹದ್ದು ಏನಾಗಿದೆ. ತಾವು ವಿಷ ನುಂಗುತ್ತಿದ್ದೇನೆ ಎಂದು ಕಾಂಗ್ರೆಸ್ ಮೇಲೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. 

ಈ ಹೇಳಿಕೆಯಿಂದ ಸಾರ್ವಜನಿಕರಲ್ಲಿ  ಕಾಂಗ್ರೆಸ್  ಕುಮಾರಸ್ವಾಮಿ ಅವರಿಗೆ ಸಹಕಾರ ನೀಡುತ್ತಿಲ್ಲ ಎನ್ನುವ ಭಾವನೆ ಮೂಡುವಂತಾಗುತ್ತದೆ.  ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  

ಅಲ್ಲದೇ ಕರ್ನಾಟಕದಲ್ಲಿ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಗೆ ಸಮಸ್ಯೆ ತರಬೇಕು ಎನ್ನುವುದೇ ಕುಮಾರಸ್ವಾಮಿ ಹಾಗೂ ದೇವೇಗೌಡರ ಉದ್ದೇಶವೇ ಎಂದು ಪ್ರಶ್ನೆ ಮಾಡಿದ್ದಾರೆ.  ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ ಎನ್ನುವ ಸಂದೇಶ ರವಾನೆಯಾದಂತಾಗುತ್ತದೆ ಎಂದು ಹೇಳಿದ್ದಾರೆ. 

ಇನ್ನು ಈ ವಿಚಾರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರ ಗಮನಕ್ಕೂ ಕೂಡ ತರಲಾಗಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೇರವಾಗಿ ಪ್ರಶ್ನೆ ಮಾಡಲು ತೀರ್ಮಾನಿಸಿದ್ದಾರೆ.

click me!