ಲಸಿಕೆ ಸೇವಾ ಶುಲ್ಕ 200 ರು.ಗೆ ಹೆಚ್ಚಿಸಿದ್ದಕ್ಕೆ ಸಿದ್ದು ಆಕ್ರೋಶ

By Kannadaprabha NewsFirst Published May 29, 2021, 10:24 AM IST
Highlights

* ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಸರ್ಕಾರದ ಬೆಂಬಲ
* ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕಿಳಿದ ಆರೋಗ್ಯ ಸಚಿವ ಸುಧಾಕರ್‌
* ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ? 

ಬೆಂಗಳೂರು(ಮೇ.29): ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ ಸೇವಾ ಶುಲ್ಕವನ್ನು 100 ರಿಂದ 200 ರು.ಗಳಿಗೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ? ರಾಜ್ಯದ ಜನರದ್ದೋ ಅಥವಾ ಖಾಸಗಿ ಆಸ್ಪತ್ರೆಗಳದ್ದೋ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಕಳೆದ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳು ನೀಡುವ ಲಸಿಕೆಗೆ 100 ರು. ಸೇವಾ ಶುಲ್ಕವನ್ನು ನಿಗದಿಪಡಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ದೂರುಗಳಿವೆ. ಹೀಗಿರುವಾಗಲೇ ಸರ್ಕಾರ ಸೇವಾ ಶುಲ್ಕವನ್ನು ದುಪ್ಪಟ್ಟುಗೊಳಿಸಿ ಸುಲಿಗೆಯನ್ನು ಬೆಂಬಲಿಸಿದೆ ಎಂದು ಕಿಡಿಕಾರಿದ್ದಾರೆ.

18 ಮೇಲ್ಪಟ್ಟವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಇದೆ, ಸರ್ಕಾರದ ಬಳಿ ಏಕಿಲ್ಲ: ಹೈಕೋರ್ಟ್‌ ಪ್ರಶ್ನೆ

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕಿಲ್ಲ ಎಂದು ಹೈಕೋರ್ಟ್‌ ಚಾಟಿ ಬೀಸಿದೆ. ಆದರೂ ರಾಜ್ಯದ ಬಿಜೆಪಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನು ಬೆಂಬಲಿಸುತ್ತಿರುವುದು ನಿರ್ಲಜ್ಜತನದ ಪರಮಾವ​ಧಿ. ರಾಜ್ಯದ ಜನತೆಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಕೊರೋನಾ ಲಸಿಕೆ ಸಿಗುವಂತೆ ಮಾಡಬೇಕಾಗಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌, ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಇವರು ಸಚಿವರೋ? ಖಾಸಗಿ ಆಸ್ಪತ್ರೆಗಳ ಪ್ರಚಾರಕರೋ ಎಂದು ಪ್ರಶ್ನಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!