
ವಿಜಯನಗರ(ಫೆ.11): ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ಹಾಗೂ ಹೈಕಮಾಂಡ್ ಭೇಟಿಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವ ಜಮೀರ್ ಅಹಮ್ಮದ್ ಖಾನ್ ಇಂದು ಹಂಪಿಯಲ್ಲಿ ಭಾರೀ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. '2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯಲಿದೆ' ಎಂದು ಜಮೀರ್ ಸ್ಪಷ್ಟಪಡಿಸಿದರು.
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮ್ಮದ್, ಸಿಎಂ ಬದಲಾವಣೆ ವಿಚಾರಕ್ಕೆ ನೇರವಾಗಿಯೇ ಬ್ರೇಕ್ ಹಾಕಿದರು. 'ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನೇ ನಿರ್ಧಾರ ತಗೊಂಡ್ರೂ ನಾವು ಬದ್ಧರಾಗಿರುತ್ತೇವೆ. ಒಂದು ವೇಳೆ ಬೀದಿಯಲ್ಲಿ ಹೋಗೋ ದಾಸಯ್ಯನನ್ನು ತಂದು ಸಿಎಂ ಮಾಡಿದ್ರೂ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸದ್ಯಕ್ಕೆ 2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ' ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದರು.
ಸಿಎಂ ಸಿದ್ದರಾಮಯ್ಯ ಅವರನ್ನು 'ಹೇಡಿ' ಎಂದು ಕರೆದಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಜಮೀರ್ ತೀವ್ರವಾಗಿ ಕಿಡಿಕಾರಿದರು. ಜನಾರ್ದನ ರೆಡ್ಡಿ ಯಾವ ಕಡೆ ಯಾವಾಗ ವಾಲುತ್ತಾರೋ ಗೊತ್ತಿಲ್ಲ. ಅವರು ಸಮಯ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾರೆ. ಅವರಿಗೆ ಯಾವುದೇ ರಾಜಕೀಯ ಬದ್ಧತೆ ಇಲ್ಲ. ಅವರು ರಾಜಕಾರಣಿಯಲ್ಲ, ಕೇವಲ ಒಬ್ಬ ಉದ್ಯಮಿ. ಅವರ ಮಾತುಗಳಿಗೆ ನಾವು ಹೆಚ್ಚು ಮಹತ್ವ ನೀಡೋದಿಲ್ಲ' ಎಂದು ಲೇವಡಿ ಮಾಡಿದರು.
ಡಿಕೆಶಿ ಹೈಕಮಾಂಡ್ ಭೇಟಿ ವಿಚಾರಕ್ಕೆ ಕ್ಲಾರಿಟಿ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಓಡಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಮೀರ್, ನಮ್ಮ ಹೈಕಮಾಂಡ್ ನಾಯಕರು ಎಲ್ಲರಿಗೂ ಲಭ್ಯವಿರುತ್ತಾರೆ. ಡಿಕೆಶಿ ಅವರು ಹೈಕಮಾಂಡ್ ಭೇಟಿಯಾಗಲು ಯಾವುದೇ ರೀತಿ ತಡಕಾಡುತ್ತಿಲ್ಲ. ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಭೇಟಿ ಮಾಡುವುದು ಸಹಜ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ