
ಚಾಮರಾಜನಗರ (ನ.20): 'ಏ ಜನ ಎಲ್ಲಾ ಖಾಲಿ ಆಗೋದ್ರು, ಇನ್ನೇನ್ ಭಾಷಣ ಮಾಡೋದು? ಯಾರಿಗೆ ಭಾಷಣ ಮಾಡೋದು?. ಏ ಹಿಂದಿ ತಿರುಗಿ ನೋಡ್ರಯ್ಯ. ಹಾಲ್ ಕರಿಯೋದು 4 ಗಂಟೆ ಮೇಲೆ. ಇಷ್ಟೊತ್ತಿಗೆ ಹೋಗಿ ಏನ್ ಮಾಡ್ತೀರಿ? ನಿಲ್ಲಿಸಿಬಿಡಲೇನಯ್ಯ ಜಿಟಿಡಿ..' ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
'ಊಟದ ಸಮಯ, ಈಗಾಗಲೇ 50 ಭಾಗದಷ್ಟು ಜನ ಖಾಲಿ ಆಗಿದ್ದಾರೆ. ನೀವೆಲ್ಲ ಊಟ ಮಾಡದೆ ಕುಳಿತಿದ್ದೀರಿ. ನಿಮಗೆಲ್ಲ ಧನ್ಯವಾದಗಳು. ನಾವು ಕೂಡ ನಿಮ್ಮ ರೀತಿಯಲ್ಲೇ ಇನ್ನೂ ಊಟ ಮಾಡಿಲ್ಲ. ಚಾಮರಾಜನಗರಕ್ಕೆ ಅನೇಕ ಬಾರಿ ಬಂದಿದ್ದೇನೆ. ಬಹಳ ಜನ ಈ ಜಿಲ್ಲೆಗೆ ಹೋದರೆ ಮಂತ್ರಿ ಸ್ಥಾನ ಹೋಗುತ್ತೆ ಎನ್ನುತ್ತಿದ್ದರು. ನಾನು 20 ಬಾರಿ ಈ ಜಿಲ್ಲೆಗೆ ಬಂದಿದ್ದೇನೆ. ನಾನು ಇಲ್ಲಿಗೆ ಬಂದು ಬರಿ ನನ್ನ ಕುರ್ಚಿ ಗಟ್ಟಿಯಾಗೋದಲ್ಲ, ನಮ್ಮ ಸರ್ಕಾರನೇ ಗಟ್ಟಿಯಾಗಿದೆ. ಯಾವಾಗ ಕರೆದರೂ ನಾನು ಚಾಮರಾಜನಗರಕ್ಕೆ ಬಂದೇ ಬರುತ್ತೇನೆ. ರಾಜಣ್ಣ ರಾಜೀನಾಮೆ ಕೊಟ್ಟ ಮೇಲೆ ನಾನು ಸಹಕಾರ ಮಂತ್ರಿ ಆಗಿದ್ದೇನೆ. ರಾಜಣ್ಣ ಇದ್ದಿದ್ರೆ ನಾನು ಸಹಕಾರ ಮಂತ್ರಿ ಆಗುತ್ತಿರಲಿಲ್ಲ. ಚಾಮರಾಜನಗರ ಕೂಡ ನಮ್ಮ ಜಿಲ್ಲೆನೇ. ಮೊದಲು ಮೈಸೂರು ಜಿಲ್ಲೆ ಜೊತೆಯಲ್ಲೇ ಇತ್ತು. ಜೆ.ಹೆಚ್.ಪಟೇಲ್ ಕಾಲದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಚಾಮರಾಜನಗರ ಜಿಲ್ಲೆ ಉದ್ಘಾಟನೆ ಮಾಡಲಾಯಿತು ಎಂದು ಹೇಳಿದರು.
ರಾಜ್ಯದಲ್ಲಿ ನಿತ್ಯ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಾವು ನಿತ್ಯ ರೈತರಿಗೆ 5 ಕೋಟಿ ಸಹಾಯಧನ ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಹಾಲಿನ ದರ ಏರಿಸಿದ್ದೇವೆ. ಆ ಹಣ ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಿಂದಲೂ ಯೂನಿಯನ್ ಮಾಡಿಕೊಡಿ ಎಂದು ಬೇಡಿಕೆ ಬರುತ್ತಿದೆ. 31 ಜಿಲ್ಲೆಗಳಲ್ಲೂ ಮಿಲ್ಕ್ ಯೂನಿಯನ್ ಮಾಡುತ್ತೇವೆ. ಆರ್ಥಿಕವಾಗಿ ಬೆಳವಣಿಗೆ ಆಗಲು ಇದು ಉಪ ಕಸುಬು. ಸಹಕಾರ ಇಲಾಖೆ ನೇಮಕಾತಿಯಲ್ಲಿ ಡಿಗ್ರಿ ಹಾಗೂ ಡಿಪ್ಲೋಮಾ ಮಾಡಿದರಿಗೆ ಆದ್ಯತೆ ನೀಡಲಾಗುತ್ತೆ. ಪಠ್ಯ ಪುಸ್ತಕಗಳಲ್ಲೂ ಸಹಕಾರ ವಿಷಯವನ್ನ ಸೇರಿಸಲಾಗುತ್ತದೆ ಎಂದು ಹೇಳಿದರು.
ದೇಶ ಉದ್ದಾರ ಆಗಲು ಪ್ರತಿ ಗ್ರಾಮದಲ್ಲೂ ಸಹಕಾರ ಬ್ಯಾಂಕ್, ಶಾಲೆ, ಗ್ರಾಮ ಪಂಚಾಯತಿ ಇರಬೇಕು ಎಂದು ಜವಹರಲಾಲ್ ನೆಹರು ಅವರು ಹೇಳುತ್ತಿದ್ದರು. ಇದರ ಅಂಗವಾಗಿಯೇ ಅವರ ಹುಟ್ಟು ಹಬ್ಬದ ದಿನವೇ ಸಹಕಾರ ಸಪ್ತಾಹ ನಡೆಯುತ್ತದೆ ಎಂದರು.
ನಾನು ಜಿಟಿ.ದೇವೇಗೌಡ ಒಂದೇ ಕ್ಷೇತ್ರದವರು. 2006ರ ವರೆಗೆ ಜೊತೆಲಿದ್ದು, ನಂತರ ಬೇರೆ ಆದರು. ನನ್ನ ಪಕ್ಷದಿಂದ ತೆಗೆದು ಹಾಕಿದ್ದರು. ಈ ಆಸಾಮಿ ಅಲ್ಲೆ ಉಳಿದುಕೊಂಡ. ತೆಗೆದು ಹಾಕಿದ ಮೇಲೆ ನಾನು ಅಹಿಂದ ಸಂಘಟನೆ ಹುಟ್ಟು ಹಾಕಿದೆ. ಆಗ ಕಾಂಗ್ರೆಸ್ ನಿಂದ ಕರೆ ಬಂತು. ನಾನು ಕಾಂಗ್ರೆಸ್ ಸೇರಿದೆ. ನಾನು ಲೋಕದಳಕ್ಕೂ ಹೋಗಿದ್ದೆ. ಆರ್‌ಎಸ್‌ಎಸ್ ನವರೂ ಅಲ್ಲಿದ್ದರು. ನಾನು ಜಾರ್ಜ್ ಫರ್ನಾಂಡೀಸ್ ಫಾಲೋ ಮಾಡ್ತಿದ್ದೆ. ಅವರು ಸಮಾಜವಾದಿಗಳು, ಅವರನ್ನು ಫಾಲೋ ಮಾಡ್ತಿದ್ದೆ. ಜನತಾದಳ, ಲೋಕದಳ ನಂತರ ಕಾಂಗ್ರೆಸ್‌ಗೆ ಬಂದೆ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಿಂದ ಎರಡು ಬಾರಿ ಮುಖ್ಯಮಂತ್ರಿ ಆದೆ. ಆದರೆ ಜೆಡಿಎಸ್‌ನಲ್ಲಿ ಇದ್ದಿದ್ರೆ ಮುಖ್ಯಮಂತ್ರಿ ಆಗ್ತಿರಲಿಲ್ಲ. ದೇವೇಗೌಡರು, ಅವರ ಮಕ್ಕಳು ನನ್ನನ್ನ ಮುಖ್ಯಮಂತ್ರಿ ಆಗಲು ಬಿಡುತ್ತಿರಲಿಲ್ಲ. ಇವತ್ತಿಗೆ ನಾನು ಸಿಎಂ ಆಗಿ ಎರಡೂವರೆ ವರ್ಷ. ಒಂದು ರೀತಿಯಲ್ಲಿ ಎರಡೂವರೆ ವರ್ಷದ ದಿನಾಚರಣೆ ಕೂಡ ಇಲ್ಲೇ ನಡೆಯುತ್ತಿದೆ. ಸಿಎಂ ಆಗಿದ್ದೇನೆ ಬಡವರ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಮುಂದೆಯೂ ಮಾಡುತ್ತೇನೆ. 2023ರಲ್ಲಿ ಗ್ಯಾರಂಟಿ ಯೋಜನೆ ಮೂಲಕ ಸಮಾಜದ ಅಸಮಾನತೆ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ. ಅದರಿಂದ ಜಾತಿ ವ್ಯವಸ್ಥೆ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟ್ಟರಂಗಶೆಟ್ಟಿ ಅವರನ್ನ ಮಂತ್ರಿ ಮಾಡಿದ್ದೆ. ಮುಂದೆ ಅವರಿಗೆ ಉತ್ತಮ ಅವಕಾಶ ಇದೆ. ಈ ಜಿಲ್ಲೆ ಜನ ಸದಾ ನನಗೆ ಸಹಕಾರ ಕೊಟ್ಟಿದ್ದೀರಿ. ನಾನು ಚಾಮರಾಜನಗರ ಜಿಲ್ಲೆಯನ್ನ ಮರೆಯಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ