
ಬೆಂಗಳೂರು (ಅ.15): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ನವರ ಪಾತ್ರ ಏನೂ ಇಲ್ಲ. ರಾತ್ರೋರಾತ್ರಿ ಪ್ರಕರಣದಲ್ಲಿ ಕೆಲ ಕಾಂಗ್ರೆಸ್ಸಿಗರ ಹೆಸರು ಸೇರಿಸಿ ವಿಚಾರಣೆಗೆ ಕರೆಸಿ ಬಿಜೆಪಿ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ. ಇದಾವುದಕ್ಕೂ ಜಗ್ಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ರೀತಿಯ ಬೆದರಿಕೆ ತಂತ್ರ ಹೆಚ್ಚುದಿನ ನಡೆಯುವುದಿಲ್ಲ. ಇಂತಹದ್ದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಮೊತ್ತ ಎಷ್ಟಿದೆ..? ಕ್ರಿಮಿನಲ್ ಕೇಸು ಇದೆ ..
ಡಿ.ಕೆ.ಶಿವಕುಮಾರ್ ಮಾತನಾಡಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ಸಿಗರ ಪಾತ್ರವಿಲ್ಲ. ಕಾಂಗ್ರೆಸ್ಸೇತರರಿಂದ ನಡೆದಿರುವ ಈ ಗಲಾಟೆ ಪ್ರಕರಣದಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ಸಿಗರ ಹೆಸರು ಸೇರಿಸಿ ವಿಚಾರಣೆಗೆ ಕರೆಸಲಾಗಿದೆ. ಆ ಮೂಲಕ ಬಿಜೆಪಿ ಸರ್ಕಾರ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು.
ಗಲಭೆ ಪ್ರಕರಣಕ್ಕೆ ಪೊಲೀಸರ ವೈಫಲ್ಯವೇ ಕಾರಣ. ಫೇಸ್ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್‌ನನ್ನು ಕೂಡಲೇ ಬಂಧಿಸಿ ಎಫ್‌ಐಆರ್ ಹಾಕಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಎಫ್‌ಐಆರ್ ಮಾಡಲು ವಿಳಂಬ ಮಾಡಿದ್ದರಿಂದ ಜನ ರೊಚ್ಚಿಗೆದ್ದು ಸ್ಥಳದಲ್ಲಿ ನಡೆಸಿದ ಘಟನೆ ಅದು. ಇದಕ್ಕೆ ಬೇರೆ ಬಣ್ಣ ಕಟ್ಟುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ನಡೆದ ಬಳಿಕ ನಮ್ಮ ಪಕ್ಷದ ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಜಮೀರ್ ಅಹ್ಮದ್ ಖಾನ್ ಅವರು ಗಲಭೆ ದಿನ ಸ್ಥಳಕ್ಕೆ ಹೋಗಿದ್ದರು ಎಂಬ ಕಾರಣಕ್ಕೆ ಎನ್‌ಐಎನವರು ಕರೆಸಿ ಹೇಳಿಕೆ ಪಡೆದಿರಬಹುದು. ಗಲಭೆಗೂ ಕಾಂಗ್ರೆಸ್ಸಿಗರಿಗೂ ಸಂಬಂಧವಿಲ್ಲ. ಗಲಭೆ ನಡೆದ ದಿನ ಆ ಇಬ್ಬರು ಶಾಸಕರಿಗೆ ಸ್ಥಳಕ್ಕೆ ಹೋಗಲು ಫೋನ್ ಮಾಡಿ ಹೇಳಿದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಸ್ಥಳಕ್ಕೆ ಹೋಗಿ ಉದ್ರಿಕ್ತ ಜನರನ್ನು ಸಮಾಧಾನ ಮಾಡಿ ಎಂದು ಕರೆ ಮಾಡಿದ್ದಕ್ಕೆ ಅವರು ಹೋಗಿದ್ದರು. ಇಲ್ಲ ಎಂದು ಬೊಮ್ಮಾಯಿ ಹೇಳಲಿ ಎಂದರು.
ಪೊಲೀಸರ ವೈಫಲ್ಯ ಕಾರಣ
ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ. ಫೇಸ್ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್‌ನನ್ನು ಕೂಡಲೇ ಬಂಧಿಸಿ ಎಫ್‌ಐಆರ್ ಹಾಕಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬೊಮ್ಮಾಯಿ ಕಳುಹಿಸಿದ್ದರು
ಗಲಭೆ ದಿನ ಇಬ್ಬರು ಶಾಸಕರಿಗೆ ಸ್ಥಳಕ್ಕೆ ಹೋಗಲು ಹೇಳಿದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಉದ್ರಿಕ್ತರನ್ನು ಸಮಾಧಾನ ಮಾಡಿ ಎಂದು ಕರೆ ಮಾಡಿದ್ದಕ್ಕೆ ಅವರು ಹೋಗಿದ್ದರು.
- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ