ಕರ್ನಾಟಕಕ್ಕೆ 9018 ಕೋಟಿ ರು. ಸಾಲ

By Kannadaprabha NewsFirst Published Oct 15, 2020, 10:03 AM IST
Highlights

ಮುಕ್ತ ಮಾರುಕಟ್ಟೆ ಸಾಲದ ಮೂಲಕ ಹೆಚ್ಚುವರಿಯಾಗಿ 68,825 ಕೋಟಿ ರು.ಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ 20 ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ಇದರಿಂದಾಗಿ ಕರ್ನಾಟಕಕ್ಕೆ 9,018 ಕೋಟಿ ರು. ಹೆಚ್ಚುವರಿ ಸಾಲ ದೊರೆಯಲಿದೆ.

ನವದೆಹಲಿ (ಅ.15):  ಕೊರೋನಾ ಪಿಡುಗಿನಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಖೋತಾ ಆಗಿರುವ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆ ಸಾಲದ ಮೂಲಕ ಹೆಚ್ಚುವರಿಯಾಗಿ 68,825 ಕೋಟಿ ರು.ಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ 20 ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ಇದರಿಂದಾಗಿ ಕರ್ನಾಟಕಕ್ಕೆ 9,018 ಕೋಟಿ ರು. ಹೆಚ್ಚುವರಿ ಸಾಲ ದೊರೆಯಲಿದೆ.

ನಷ್ಟಪರಿಹಾರ ಕುರಿತು ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆ ಯಾವುದೇ ಒಮ್ಮತಕ್ಕೆ ಬರಲು ವಿಫಲವಾದ ಬೆನ್ನಲ್ಲೆ ಸರ್ಕಾರ ಈ ಅನುಮತಿ ನೀಡಿದೆ. ರಾಜ್ಯ ಸರ್ಕಾರಗಳು ತಮ್ಮ ಒಟ್ಟಾರೆ ಜಿಡಿಪಿಯ ಶೇ.0.5ರಷ್ಟುಹೆಚ್ಚುವರಿ ಸಾಲವನ್ನು ಪಡೆಯಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂಬ ಷರತ್ತಿಗೆ ವಿನಾಯ್ತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಸಾಲ ಏಕೆ?

ಜಿಎಸ್‌ಟಿ ನಷ್ಟಭರಿಸಿಕೊಳ್ಳಲು ರಾಜ್ಯ ಸರ್ಕಾರಗಳ ಮುಂದೆ ಕೇಂದ್ರ ಸರ್ಕಾರ 2 ಆಯ್ಕೆಗಳನ್ನು ಆಗಸ್ಟ್‌ ಅಂತ್ಯದಲ್ಲಿ ನೀಡಿತ್ತು. ಆರ್‌ಬಿಐನ ವಿಶೇಷ ಗವಾಕ್ಷಿ ಮೂಲಕ 97 ಸಾವಿರ ಕೋಟಿ ರು.ಗಳನ್ನು ಸರ್ಕಾರದ ಬಡ್ಡಿ ಸಹಾಯದೊಂದಿಗೆ ಸಾಲವಾಗಿ ಪಡೆಯುವುದು ಅಥವಾ ಮುಕ್ತ ಮಾರುಕಟ್ಟೆಯಿಂದ ರಾಜ್ಯಗಳೇ 2.35 ಲಕ್ಷ ಕೋಟಿ ರು.ನಷ್ಟವನ್ನು ಸಾಲದ ಮೂಲಕ ಸಂಗ್ರಹಿಸುವುದು ಎಂಬ ಎರಡು ಆಯ್ಕೆಗಳನ್ನು ಕೊಟ್ಟಿತ್ತು. ಈ ಪೈಕಿ 20 ರಾಜ್ಯ ಸರ್ಕಾರಗಳು ಮೊದಲ ಆಯ್ಕೆಯನ್ನು ಒಪ್ಪಿವೆ. ಈ ಮಧ್ಯೆ ಕೊರೋನಾ ಹಿನ್ನೆಲೆಯಲ್ಲಿ ಒಟ್ಟಾರೆ ಜಿಡಿಪಿಯ ಶೇ.2ರಷ್ಟುಸಾಲ ಪಡೆಯಲು ಸರ್ಕಾರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮೇ ತಿಂಗಳಿನಲ್ಲಿ ಅನುಮತಿ ಕೊಟ್ಟಿತ್ತು. ಆದರೆ ಆ ಪೈಕಿ ಶೇ.0.5ರಷ್ಟುಸಾಲವನ್ನು ಪಡೆಯುವಾಗ ಕೇಂದ್ರ ಸರ್ಕಾರ ಸೂಚಿಸಿದ 4ರ ಪೈಕಿ 3 ಸುಧಾರಣೆ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿತ್ತು. ಇದೀಗ ತನ್ನ ಆಯ್ಕೆ-1 ಅನ್ನು ಬಳಸಿಕೊಳ್ಳಲು ಮುಂದೆ ಬಂದಿರುವ ರಾಜ್ಯಗಳಿಗೆ ಆ ಷರತ್ತಿನಿಂದ ವಿನಾಯ್ತಿ ನೀಡಿ ಜಿಡಿಪಿಯ ಶೇ.0.5ರಷ್ಟುಸಾಲ ಸಂಗ್ರಹಿಸಲು ಒಪ್ಪಿಗೆ ನೀಡಿದೆ.

'ಚಕ್ರ​ಬಡ್ಡಿ ಹೊರ​ತಾದ ವಿನಾಯ್ತಿ ಅಸಾ​ಧ್ಯ, ಆರ್ಥಿ​ಕ​ತೆಗೆ ಧಕ್ಕೆ' ...

ಯಾರಿಗೆ ಎಷ್ಟು?:

ಅದರಂತೆ 15,394 ಕೋಟಿ ರು. ಸಾಲ ಮಹಾರಾಷ್ಟ್ರಕ್ಕೆ ಸಿಗಲಿದ್ದರೆ, 9703 ಕೋಟಿ ರು. ಸಾಲದ ಅರ್ಹತೆಯೊಂದಿಗೆ ಉತ್ತರಪ್ರದೇಶ 2ನೇ ಸ್ಥಾನದಲ್ಲಿದೆ. 9018 ಕೋಟಿ ರು.ನೊಂದಿಗೆ ಕರ್ನಾಟಕ, 8704 ಕೋಟಿ ರು.ನೊಂದಿಗೆ ಗುಜರಾತ್‌, 5051 ಕೋಟಿ ರು.ನೊಂದಿಗೆ ಆಂಧ್ರ ನಂತರದ ಸ್ಥಾನದಲ್ಲಿವೆ.

click me!