
ಬೆಂಗಳೂರು (ಅ.20): ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿಯಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಸ್ಥಳ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿ. ಸರ್ಕಾರದ ತಪ್ಪುಗಳನ್ನು ತೋರಿಸುವ ವಿಪಕ್ಷ ನಾಯಕರ ಮೇಲೆಯೇ ಹರಿಹಾಯುವುದನ್ನು ಬಿಟ್ಟು ರೈತರ ಸಮಸ್ಯೆ ಪರಿಹರಿಸಿ ಎಂದು ವಿಪಕ್ಷನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಮಾನ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಸರ್ಕಾರದ ತಪ್ಪುಗಳನ್ನ, ಆಡಳಿತದಲ್ಲಿರುವ ನ್ಯೂನ್ಯತೆಗಳನ್ನ ಎತ್ತಿ ತೋರಿಸಿ, ಜನರ ದನಿಯನ್ನ ಸರ್ಕಾರಕ್ಕೆ ತಲುಪಿಸುವುದೇ ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದ ನಾಯಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವಿಪಕ್ಷಗಳ ಟೀಕೆ ಮಾಡಿದ ಮೇಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗುವ ಬದಲು ವಿಪಕ್ಷಗಳ ಮೇಲೆಯೇ ಹರಿಹಾಯುವುದೂ ಯಾವ ಸೀಮೆ ನ್ಯಾಯ ಸ್ವಾಮಿ?
ಇದನ್ನೂ ಓದಿ: ಮಂಗಳೂರು ರೈಲು ಹಳಿ ತಪ್ಪಿಸಲು ಕಲ್ಲು ಇಟ್ಟ ಕಿಡಿಗೇಡಿಗಳು: ಸ್ಥಳೀಯರಿಗೆ ಪಾಕ್ ಉಗ್ರರ ಆತಂಕ!
ನಿಮ್ಮ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುವುದಿರಲಿ. ಸ್ವತಃ ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಅನೇಕ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಪರ ಯಾವುದೇ ವಿಶೇಷ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಧೋರಣೆ ನೋಡಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎನಿಸುವಷ್ಟು ಬೇಸರವಾಗಿದೆ, ಎಂದು ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದರು.
ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಾಗೂ ಲೋಡ್ ಶೆಡ್ಡಿಂಗ್ ಕಣ್ಣಾಮುಚ್ಚಾಲೆಯನ್ನು ಸಹ ನಿಮ್ಮದೇ ಪಕ್ಷದ ಶಾಸಕ ಕಾಗವಾಡದ ರಾಜು ಕಾಗೆಯವರು ಈ ಹಿಂದೆ ಎಳೆ ಎಳೆಯಾಗಿ ಬಿಚ್ಟಿಟ್ಟಿದ್ದಾರೆ. ಶಾಸಕರಿಗೆ ಕನಿಷ್ಟ ಅನುದಾನ ಸಹ ಸರ್ಕಾರದಿಂದ ಲಭಿಸುತ್ತಿಲ್ಲ, ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ವಿದ್ಯುತ್ ನೀಡಿದ್ದಕ್ಕಿಂತ ತೆಗೆದದ್ದೇ ಹೆಚ್ಚು ಎಂಬುದನ್ನು ಸಹ ಒಪ್ಪಿಕೊಂಡಿದ್ದಾರೆ. ನವಲಗುಂದದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬಹುತೇಕ ರೈತರಿಗೆ ಮುಂಗಾರು ಬರ ಪರಿಹಾರವೇ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ತಮ್ಮ ಸರ್ಕಾರಕ್ಕೆ ಅರಿವಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಕೃಷಿ ಸಚಿವರಾಗಿ ತಾವು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಿ? ಯಾವ್ಯಾವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೀರಿ? ಬೆಳೆ ಹಾನಿ ಸಮೀಕ್ಷೆ ನಡೆಸಲು ಯಾವ ಕ್ರಮ ಕೈಗೊಂಡಿದ್ದೀರಿ? ಈ ಹಿಂದೆ ಅನೇಕ ಮುತ್ಸದ್ದಿಗಳು, ಹಿರಿಯರು ನಿರ್ವಹಿಸಿದ ಕೃಷಿ ಇಲಾಖೆಯ ಮಂತ್ರಿ ಆಗಿದ್ದೀರಿ. ಇಲಾಖೆಯ ಗಂಭೀರತೆ ಅರಿತು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ.
ಇದನ್ನೂ ಓದಿ: ಮುಡಾ ಕೇಸಲ್ಲಿ ಪಾಸ್ಪೋರ್ಟ್ ಜಪ್ತಿ ಮಾಡಿ: ಆರ್. ಅಶೋಕ್
ಅಭದ್ರವಾಗಿರುವ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆ ಇರಬೇಕೋ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಇರಬೇಕೋ ಎನ್ನುವ ತಳಮಳ, ಗೊಂದಲ ತಮ್ಮನ್ನ ಕಾಡುತ್ತಿದೆ ಎಂದು ಗೊತ್ತಿದೆ. ತಮಗೆ ನನ್ನ ಕಿವಿಮಾತು ಏನೆಂದರೆ ತಾವು ನಾಡಿನ ರೈತರ ಜೊತೆಗೆ ಇರಿ. ಆಗ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ರೈತರಿಗೆ ನೆರವಾಗಿ. ಅದೇ ನಿಮ್ಮನ್ನ ಕಾಪಾಡುತ್ತದೆ' ಎಂದು ಪೋಸ್ಟ್ ಮೂಲಕವೇ ಕೃಷಿ ಸಚಿವರಿಗೆ ತಿವಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ