
ಬೆಂಗಳೂರು (ಜು.27): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆ.31ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಅಧಿಕೃತವಾಗಿ ಆರಂಭವಾಗಲಿದೆ. ಇದಾದ ಕೆಲವೇ ದಿನಗಳಲ್ಲಿ ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಸಚಿವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಸ್ಟ್ 31ರಿಂದ ವಿಮಾನ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಅಂದು ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಗಲಿದೆ. ಈ ಮುಂಚೆ ಆಗಸ್ಟ್ 11ರಿಂದ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದ 31ಕ್ಕೆ ಹೋಗಿದ್ದು ಇಂಡಿಗೊ ಏರ್ ಲೈನ್ಸ್ ತನ್ನ ಬುಕ್ಕಿಂಗ್ ಅನ್ನು ಆರಂಭಿಸಿದೆ. ಈ ವಿಮಾನಯಾನ ಸೇವೆಯಿಂದ ಮಲೆನಾಡು ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್ ಬುಕಿಂಗ್ ಆರಂಭ: ಟಿಕೆಟ್ ದರ 3,999 ರೂ.
ಗೋವಾ, ತಿರುಪತಿಗೂ ಸಂಪರ್ಕ: ಇನ್ನು ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ. ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ಈ ರಹದಾರಿಗಳಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯ ವಿಮಾನ ಸಂಚಾರ ಮಾತ್ರ ಇರುತ್ತದೆ. ರಾತ್ರಿ ವೇಳೆ ಲ್ಯಾಂಡಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಮುಗಿಯಲಿದೆ ಎಂದು ಅವರು ವಿವರಿಸಿದ್ದಾರೆ.
ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ವಿಮಾನಯಾನ ಸಂಸ್ಥೆಗಳೂ ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಸಿಕ್ಕ ನಂತರ ಅವೂ ಕಾರ್ಯಾಚರಣೆ ನಡೆಸಲಿವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ