ಶಿವಮೊಗ್ಗಕ್ಕೆ ಬ್ರಹ್ಮ ಬಂದರೂ ಬಂಡಾಯ ಸ್ಪರ್ಧೆ ವಾಪಸ್ ಪಡೆಯೊಲ್ಲ; ಕೆ.ಎಸ್. ಈಶ್ವರಪ್ಪ

By Sathish Kumar KH  |  First Published Mar 23, 2024, 1:57 PM IST

ಶಿವಮೊಗ್ಗಕ್ಕೆ ಬ್ರಹ್ಮ ಬಂದರೂ ಬಂಡಾಯ ವಾಪಸ್ ಪಡೆಯುವುದಿಲ್ಲ. ಕೇವಲ ಬಂಡಾಯ ಅಲ್ಲ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು.


ಶಿವಮೊಗ್ಗ (ಮಾ.23): ಬ್ರಹ್ಮ ಬಂದರೂ ಬಂಡಾಯ ವಾಪಸ್ ಪಡೆಯುವುದಿಲ್ಲ. ಕೇವಲ ಬಂಡಾಯ ಅಲ್ಲ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಇದೇ 28ರಂದು ಬೆಳಗ್ಗೆ ನನ್ನ ಚುನಾವಣಾ ಪ್ರಚಾರದ ಕಾರ್ಯಾಲಯ ಉದ್ಘಾಟನೆ ಮಾಡುತ್ತೇನೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬ್ರಹ್ಮ ಬಂದರೂ ಬಂಡಾಯ ವಾಪಸ್ ಪಡೆಯುವುದಿಲ್ಲ. ಕೇವಲ ಬಂಡಾಯ ಅಲ್ಲ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮನೆಯಲ್ಲಿ ಒಬ್ಬರು ಕೇಂದ್ರ ಚುನಾವಣಾ ಸಮಿತಿ ಸದಸ್ಯರು (ಬಿ.ಎಸ್.ಯಡಿಯೂರಪ್ಪ), ಒಬ್ಬ ಎಂಪಿ (ಬಿ.ವೈ. ರಾಘವೇಂದ್ರ) ಹಾಗೂ ಮತ್ತೊಬ್ಬ ಎಂಎಲ್ಎ (ಬಿ.ವೈ. ವಿಜಯೇಂದ್ರ). ಜೊತೆಗೆ, ಆರು ತಿಂಗಳು ಹಠ ಹಿಡಿದು ಮಗನನ್ನು ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಮಾಡಿದರು. ರಾಜ್ಯದಲ್ಲಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಹಾಗೂ ಸದಾನಂದ ಗೌಡ ಎಲ್ಲರಿಗೂ ಅಪಮಾನ ಮಾಡಿದ್ದಾರೆ. ಬಿ ವೈ ವಿಜೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದು ಕಿಡಿಕಾರಿದರು.

Tap to resize

Latest Videos

undefined

ಕಾವೇರಿ ನೀರು ತಮಿಳುನಾಡು ಹಕ್ಕಿನಂತಾಗಿದೆ; ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದ್ಯಾ? ಆರ್. ಅಶೋಕ್ ಕಿಡಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಬಿಜೆಪಿ ನಿಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಕಾಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವೂ ಸಿಗುತ್ತಿದೆ. ಬಂಡಾಯ ಸ್ಪರ್ಧೆ ಮಾಡಿ ಗೆದ್ದು ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ. ಇದೇ 28ರಂದು ಬೆಳಗ್ಗೆ ನನ್ನ ಚುನಾವಣಾ ಪ್ರಚಾರದ ಕಾರ್ಯಾಲಯ ಉದ್ಘಾಟನೆ ಮಾಡುತ್ತೇನೆ. ದಿನೇ ದಿನೇ ಗೆಲುವಿನತ್ತ ಈಶ್ವರಪ್ಪ ಹೋಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಮಾ.26ರಂದು ಶಿವಮೊಗ್ಗ ಮತ್ತು ಶಿವಮೊಗ್ಗ  ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ. ನರ್ಮದಾ ನದಿ ದಡದಲ್ಲಿರುವ ಶಂಕರಾಚಾರ್ಯ ಮಠಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಭಯೋತ್ಪಾದಕರು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ದೊಡ್ಡ ದುಷ್ಕೃತ್ಯವಾಗಿದೆ ಎಂದು ತಿಳಿಸಿದರು. 

ರಾಜ್ಯ ಬಿಜೆಪಿಯಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ. ಬಿಎಸ್ ಯಡಿಯೂರಪ್ಪ ನನ್ನ ಮಗನಿಗೆ ಹಾವೇರಿ ಟಿಕೆಟ್ ಕೊಡಿಸುತ್ತೇನೆ ಪ್ರವಾಸ ಮಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಟಿಕೆಟ್ ಘೋಷಣೆಗೂ ಮುನ್ನ ರಾಘವೇಂದ್ರ ಅವರು ಕಾಂತೇಶ್ ಅವರಿಗೆ ಫೋನ್ ಮಾಡಿ ದೇವರಾಣೆಗೂ ನಿನಗೆ ಟಿಕೆಟ್ ಸಿಗುತ್ತೆ ಎಂದಿದ್ದರು. ಯಡಿಯೂರಪ್ಪ ನನ್ನ ಮೊಬೈಲ್ ಗೆ ಕರೆ ಮಾಡಿ, ದೆಹಲಿಗೆ ಹೋಗೋಣ ಬಾ ಎಂದರು. ನಾನು ಬರಲ್ಲ ಶೋಭಾನ ಕರೆದುಕೊಂಡು ಹೋಗಿ ಎಂದಿದ್ದೆ. ಕೇಂದ್ರ ಚುನಾವಣಾ ಸಮಾಚಾರ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಹೇಳಿದ್ದರು. ಈಗ ನೀರಿಗಿಳಿದ ಮೇಲೆ ಮಳೆಯೇನು? ಚಳಿಯೇನು? ನೇರವಾಗಿ ತೊಡೆ ತಟ್ಟಿದ್ದೇನೆ ಎಂದು ಆಕ್ರೋಶ ಹೊರ ಹಾಕಿದರು.

ಲೋಕಸಭೆ ಚುನಾವಣೆ ಮುಗಿದ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿಸಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರಕ್ಕೆ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡಿದ್ದರು. ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು, ಪಕ್ಷದ ವೇದಿಕೆಯಲ್ಲಿ ನನಗೆ ಚಾಕು ಹಾಕಿದ್ದರು. ಪಕ್ಷ ನನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ಎರಡು ತಿಂಗಳಲ್ಲಿ ಚುನಾವಣೆ ಗೆಲ್ಲುತ್ತೇನೆ ಅವರೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ತೊಡೆ ತಟ್ಟಿದರು.

ಮಲೆ ಮಹದೇಶ್ವರನಿಗೆ 700 ಕೆಜಿ ಬೆಳ್ಳಿ ಕಾಣಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ; ಮಾಜಿ ಶಾಸಕ ಮಂಜುನಾಥ್ ಮಾಹಿತಿ

ನನ್ನ ಪುತ್ರ ಕಾಂತೇಶ್ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಈಗಲೇ ನಾನು ಚರ್ಚೆ ಮಾಡುವುದಿಲ್ಲ. ಕಾಂತೇಶ್ ಜೊತೆಗೂ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಅದೃಶ್ಯ ಮತದಾರರು ನನಗೆ ಬೆಂಬಲ ನೀಡುತ್ತಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನನಗೆ ಮತ ಕೇಳುತ್ತಾರೆ. ಬಿ.ಎಸ್‌. ಯಡಿಯೂರಪ್ಪ ಕುಟುಂಬದವರು ನನಗೆ ಮೋಸ ಮಾಡಿದ್ದಾರೆ ಎಂದು ಜನ ನನ್ನನ್ನು ಬೆಂಬಲಿಸುತ್ತಾರೆ. ಅವರ ಕುಟುಂಬದ ವಿರುದ್ಧ ಇರುವ ಅದೃಶ್ಯ ಮತದಾರರು ನನಗೆ ಮತ ಹಾಕುತ್ತಾರೆ. ಬಿಜೆಪಿಯಲ್ಲೂ ಅಸಮಾಧಾನ ಇದೆ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಇದೆ ಜೆಡಿಎಸ್ ನಲ್ಲೂ ಅಸಮಾಧಾನ ಇದೆ. ಈ ಅಸಮದಾನಿತರು ನನಗೆ ಮತ ಕೊಡುತ್ತಾರೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯ ಪ್ರಕಾಶ್ ನಡ್ಡಾ ನನಗೆ ಫೋನ್ ಮಾಡಿಲ್ಲ. ಯಾರೇ ಹೇಳಿದರೂ ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ. ದಯಮಾಡಿ ನನ್ನನ್ನು ಯಾರು ರೇಗಿಸಿ, ಕೋಪ ತರಿಸಬೇಡಿ. ಯಾರೇ ಕರೆ ಮಾಡಿದರು ನನ್ನ ಬಂಡಾಯ ಸ್ಪರ್ಧೆ ಖಚಿತವಾಗಿದೆ. ನನ್ನ ರಕ್ತ ಇರುವುದೇ ಬಿಜೆಪಿಯಲ್ಲಿ ನನ್ನ ತಾಯಿಂದ ನನ್ನನ್ನು ಯಾರು ದೂರ ಮಾಡಲು ಸಾಧ್ಯವಿಲ್ಲ. ನನ್ನ ಮತ್ತು ನನ್ನ ತಾಯಿಯ ಸಂಬಂಧ ಯಾವುದೇ ಶಕ್ತಿಯಿಂದ ದೂರ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಹಿಡಿತದಲ್ಲಿ ಪಕ್ಷ ಇರುವ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಸೋಲಿಸಬೇಕಿದೆ. ರಾಷ್ಟ್ರಭಕ್ತರ ಮುಸಲ್ಮಾನರು ನನ್ನ ಅದೃಶ್ಯ ಮತದಾರ ಪಟ್ಟಿಯಲ್ಲಿದ್ದಾರೆ. ಅವರು ನನಗೆ ಓಟು ಹಾಕುತ್ತಾರೆ ಎಂದು ಹೇಳಿದರು.

click me!