
ಶಿವಮೊಗ್ಗ (ಅ.16): ಕೃಷಿ ಕ್ಷೇತ್ರದ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ರೈತ ಸಮುದಾಯಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆ.ಶಿ.ನಾ.ಕೃ.ತೋ.ವಿ.ವಿ.), ಶಿವಮೊಗ್ಗವು, ಬೃಹತ್ ಕೃಷಿ-ತೋಟಗಾರಿಕೆ ಮೇಳವನ್ನು ಆಯೋಜಿಸಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ನಾಲ್ಕು ದಿನಗಳ ಮೇಳವು ದಿನಾಂಕ: 07-11-2025 ರಿಂದ 10-11-2025 ರವರೆಗೆ ಶಿವಮೊಗ್ಗದ ನವಿಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಈ ವರ್ಷದ ಕೃಷಿ-ತೋಟಗಾರಿಕೆ ಮೇಳವನ್ನು 'ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ' ಎಂಬ ವಿಶೇಷ ಧೈಯ ವಾಕ್ಯದೊಂದಿಗೆ ಆಯೋಜಿಸಲಾಗುತ್ತಿದ್ದು, ಇದು ರೈತರು ಪರಸ್ಪರ ಸಹಕಾರದಿಂದ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳುತ್ತದೆ.
ಆಯಾ ಪ್ರದೇಶದ ಕೃಷಿ, ಹವಮಾನ ಮತ್ತು ಬೆಳೆ ಪರಿಸರಕ್ಕನುಗುಣವಾಗಿ ಕೃಷಿ, ತೋಟಗಾರಿಕೆ, ಅರಣ್ಯ, ಪಶು ವಿಜ್ಞಾನ, ಮೀನುಗಾರಿಕೆ, ಮೌಲ್ಯವರ್ಧನೆ ಮತ್ತು ಕೌಶಲ್ಯಾಭಿವೃದ್ಧಿ ಮುಂತಾದ ವಿಷಯಗಳಲ್ಲಿ ಆಗಿರುವ ಹೊಸ ಆವಿಷ್ಕಾರಗಳನ್ನು ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರು ಹಾಗೂ ಗ್ರಾಮ ಸಮುದಾಯಕ್ಕೆ ತಲುಪಿಸುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೆ ನೆರವಾಗಲು ವಿವಿ ಉದ್ದೇಶಿಸಿದೆ.
ಮೇಳದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಪ್ರೇರಣೆ ನೀಡುವ ಹಲವು ವಿಶಿಷ್ಟ ವಿಭಾಗಗಳನ್ನು ತೆರೆಯಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವು:
ತಂತ್ರಜ್ಞಾನ ಉದ್ಯಾನವನ: ಇತ್ತೀಚಿನ ಕೃಷಿ ಯಂತ್ರೋಪಕರಣಗಳು ಮತ್ತು ತಾಂತ್ರಿಕತೆಗಳ ಪ್ರದರ್ಶನ.
ಸಮಗ್ರ ಕೃಷಿ ಪದ್ಧತಿ: ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಯ ಸಮಗ್ರ ಮಾದರಿಗಳ ಪ್ರಾತ್ಯಕ್ಷಿಕೆ.
ಪುಷ್ಪ ಕೃಷಿ ಮತ್ತು ತಾರಸಿ ತೋಟ: ಆಧುನಿಕ ಹೂವಿನ ಕೃಷಿ ಮತ್ತು ನಗರ ಪ್ರದೇಶದವರಿಗೆ ತಾರಸಿ ತೋಟದ ಅಳವಡಿಕೆ ಕುರಿತು ಮಾಹಿತಿ.
ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು: ಸಿರಿಧಾನ್ಯಗಳ ಮಹತ್ವ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ವಿಭಾಗ.
ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ: ಗೋಡಂಬಿ ಕೃಷಿ ಮತ್ತು ಅದರ ಲಾಭದಾಯಕ ಮೌಲ್ಯವರ್ಧನೆಯ ಸಂಪೂರ್ಣ ಮಾಹಿತಿ.
ಪರಿಸರ ಕೃಷಿ ಪ್ರವಾಸೋದ್ಯಮ: ಕೃಷಿಯೊಂದಿಗೆ ಪ್ರವಾಸೋದ್ಯಮವನ್ನು ಸಂಯೋಜಿಸುವ ಹೊಸ ಪರಿಕಲ್ಪನೆ.
ಇತರೆ ವಿಭಾಗಗಳು: ಜೇನು ವನ ಮತ್ತು ಕೀಟ ಪ್ರಪಂಚ, ಸಾವಯವ ಕೃಷಿ, ಪಶುಪಾಲನೆ, ಕೊಲ್ಲೋತ್ತರ ತಾಂತ್ರಿಕತೆ ಹಾಗೂ ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಬೃಹತ್ ಪ್ರದರ್ಶನ.
ಈ ಬೃಹತ್ ಮೇಳದಲ್ಲಿ ಒಟ್ಟು 400 ಕ್ಕೂ ಹೆಚ್ಚು ಬೀಜ, ಸಸಿ ಮತ್ತು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ಇದರ ಜೊತೆಗೆ, ರೈತ ಸಮಾಲೋಚನೆ, ತಜ್ಞರೊಂದಿಗೆ ಸಂವಾದ ಹಾಗೂ ಪ್ರಮುಖ ತಾಂತ್ರಿಕ ಸಮಾವೇಶಗಳನ್ನು ಕೂಡ ಏರ್ಪಡಿಸಲಾಗುವುದು. ಈ ಮೂಲಕ ರೈತರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆ ಒದಗಿಸಲಾಗುವುದು. ಕೃಷಿಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೃಷಿ ಕ್ಷೇತ್ರದ ಹೊಸ ಮಾಹಿತಿಯನ್ನು ಪಡೆದುಕೊಂಡು ಮೇಳದ ಯಶಸ್ಸಿಗೆ ಪಾತ್ರರಾಗಬೇಕೆಂದು ವಿವಿಯ ಪ್ರಕಟಣೆಯಲ್ಲಿ ಕೋರಲಾಗಿದೆ.
ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತರು ಈ ಕೆಳಗಿನವರನ್ನು ಸಂಪರ್ಕಿಸಬಹುದು:
1. ಡಾ. ಬಿ.ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು (ಮೊಬೈಲ್: 9480838217)
2. ಡಾ. ಕಲ್ಲೇಶ್ವರ ಸ್ವಾಮಿ ಸಿ.ಎಂ., ಪ್ರಾಧ್ಯಾಪಕರು (ಮೊಬೈಲ್: 9449537578)
3. ಡಾ. ಗಿರೀಶ್ ಆರ್., ವಿಜ್ಞಾನಿ (ಮೊಬೈಲ್: 9739916660)
4. ಡಾ. ನಾಗರಾಜ್ ಆರ್., ಹಿರಿಯ ತಾಂತ್ರಿಕ ಅಧಿಕಾರಿ (ಮೊಬೈಲ್: 9353493824)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ