
ಬೆಂಗಳೂರು/ಶಿವಮೊಗ್ಗ (ಅ.21): ಶಿವಮೊಗ್ಗದಲ್ಲಿ ವಿಜಯದಶಮಿಯಂದು ನಡೆದ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ 'ಸೋಮಣ್ಣ' ಆನೆ ಏಕಾಏಕಿ ಬೆದರಿ ಓಡಿ ಆತಂಕ ಸೃಷ್ಟಿಸಿದ ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಗಂಭೀರ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರು, ಮುಂದಿನ ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕನಿಷ್ಠ 20 ದಿನಗಳಿಂದ 1 ತಿಂಗಳವರೆಗೆ ಕಡ್ಡಾಯ ತಾಲೀಮು ನೀಡುವಂತೆ ಅರಣ್ಯ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.
ಜಂಬೂಸವಾರಿ ವೇಳೆ ನಡೆದ ಅಚಾತುರ್ಯದ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಚಿವರು ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು. ಆನೆ ದಿಢೀರ್ ಬೆದರಲು ಕಾರಣವೇನು? ಮುಂಜಾಗ್ರತಾ ಕ್ರಮಗಳ ಕೊರತೆಯಿತ್ತೇ? ವಾಹನಗಳಿಗೆ ಎಷ್ಟು ಹಾನಿಯಾಗಿದೆ ಮತ್ತು ಸಾರ್ವಜನಿಕರಿಗೆ ಏನಾದರೂ ಅಪಾಯವಾಗಿದೆಯೇ ಎಂಬ ಬಗ್ಗೆ ಸಂಪೂರ್ಣ ವರದಿ ಪಡೆದುಕೊಂಡರು.
ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಚಿವರು, 'ದಸರಾ ಹಾಗೂ ಸಾರ್ವಜನಿಕ ಉತ್ಸವಗಳಲ್ಲಿ ಭಾಗವಹಿಸುವ ಆನೆಗಳಿಗೆ ಮುಂಚಿತವಾಗಿಯೇ ಅತ್ಯುನ್ನತ ಮಟ್ಟದ ಮಾನಸಿಕ ಮತ್ತು ದೈಹಿಕ ಸಿದ್ಧತೆ ಅಗತ್ಯವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಕನಿಷ್ಠ 20 ರಿಂದ 30 ದಿನಗಳ ಕಾಲ ನಿರಂತರ ತಾಲೀಮು ನಡೆಸಬೇಕು. ವಿಪರೀತ ಜನಸಂದಣಿ, ವಾದ್ಯಗಳ ಕರ್ಕಶ ಸದ್ದು, ಸಿಡಿಮದ್ದು ಮತ್ತು ಮೆರವಣಿಗೆಯ ವಾತಾವರಣಕ್ಕೆ ಆನೆಗಳು ಒಗ್ಗಿಕೊಳ್ಳುವಂತೆ ಮುಂಚಿತವಾಗಿಯೇ ತರಬೇತಿ ನೀಡಬೇಕು' ಎಂದು ಸ್ಪಷ್ಟಪಡಿಸಿದರು.
'ದಸರಾ ಜಂಬೂಸವಾರಿ ಕೇವಲ ಸಾಂಸ್ಕೃತಿಕ ಆಚರಣೆಯಷ್ಟೇ ಅಲ್ಲ, ಇದು ಲಕ್ಷಾಂತರ ಜನರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಪವಿತ್ರ ಸಂಪ್ರದಾಯ. ಇಂತಹ ಸಂದರ್ಭದಲ್ಲಿ ಆನೆಗಳು ಬೆದರಿ ಓಡುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದರ ಜೊತೆಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುತ್ತದೆ. ಹೀಗಾಗಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಆನೆಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪರಿಶೀಲಿಸಿ, ಫಿಟ್ನೆಸ್ ಪರೀಕ್ಷೆ ನಡೆಸಿದ ನಂತರವೇ ಜಂಬೂಸವಾರಿಗೆ ನಿಯೋಜಿಸಬೇಕು' ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಘಟನೆಯಿಂದ ಪಾಠ ಕಲಿತಿರುವ ಅರಣ್ಯ ಇಲಾಖೆ, ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆಯುವ ಜಂಬೂಸವಾರಿಗಳಿಗೂ ಆನೆಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ