ಶಿರೂರು ಗುಡ್ಡ ಕುಸಿತ ದುರಂತ: 3 ಜನ, ಲಾರಿ ತಲಾಶ್‌ ಸ್ಥಗಿತ, 13 ದಿನ ಹುಡುಕಿದರೂ ಫಲವಿಲ್ಲ

By Govindaraj S  |  First Published Jul 29, 2024, 12:34 PM IST

ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 


ಕಾರವಾರ (ಜು.29): ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಂಗಾವಳಿ ನದಿಯ ನೀರಿನ ವೇಗ ಹೆಚ್ಚಿರುವುದು ಕಾರ್ಯಾಚರಣೆಗೆ ತೊಡಕಾಗಿದ್ದು, ನದಿಯ ವೇಗ, ನೀರು ಕಡಿಮೆಯಾದ ಮೇಲೆ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ತೀವ್ರ ಮಳೆಗೆ ಜು.16ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 11 ಜನರು ಕಣ್ಮರೆಯಾಗಿದ್ದರು. ಈ ಪೈಕಿ, 8 ಮಂದಿಯ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ. 

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಜೊತೆ ಕಾರ್ಯಾಚರಣೆಗೆ ಮಿಲಿಟರಿ ನೆರವನ್ನು ಕೂಡ ಪಡೆಯಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಸ್ಥಳೀಯ ಮೀನುಗಾರರು ಕೂಡ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, 13 ದಿನಗಳ ಸತತ ಕಾರ್ಯಾಚರಣೆ ಬಳಿಕವೂ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕಅವರ ಪತ್ತೆಯಾಗಿಲ್ಲ. ದೊರೆತ ಎಲ್ಲ ಎಂಟೂ ಶವಗಳು ಸಮುದ್ರ, ನದಿ ತೀರದಲ್ಲಿ ಪತ್ತೆಯಾಗಿದ್ದೇ ಹೊರತು ಕಾರ್ಯಾಚರಣೆಯಿಂದ ದೊರಕಿರಲಿಲ್ಲ. ಲಾರಿ ಇದೆ ಎಂದು ಗುರುತಿಸಲಾದ ನಾಲ್ಕು ಪಾಯಿಂಟ್‌ಗಳಲ್ಲಿ ಸಾಹಸದಿಂದ ಡೈವ್ ಮಾಡಿದರೂ ಏನೂ ಪತ್ತೆಯಾಗಿಲ್ಲ.

Latest Videos

undefined

ಗಂಗಾವಳಿ ನದಿಯಲ್ಲಿ 8 ನಾಟ್ಸ್ ವೇಗದಲ್ಲಿ ಹರಿಯುತ್ತಿರುವ ನೀರಿನಿಂದಾಗಿ ಡೈವ್ ಮಾಡುವುದು ಕಷ್ಟವಾಗಿದೆ. ಮಳೆಗಾಲವಾದ್ದರಿಂದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು, ನದಿಯ ಆಳದಲ್ಲಿ ಯಾವುದೂ ಗೋಚರವಾಗುತ್ತಿಲ್ಲ. ಬೃಹದಾಕಾರದ ಬಂಡೆಗಳು, ಭಾರಿ ಪ್ರಮಾಣದ ಮಣ್ಣು, ಗಿಡ ಮರಗಳು ಬಿದ್ದುಕೊಂಡಿದ್ದರಿಂದ ನಾಪತ್ತೆಯಾದ ಲಾರಿಯ ಕುರುಹೂ ಸಿಗುತ್ತಿಲ್ಲ. ಹೂಳು ತುಂಬಿಕೊಂಡಿರುವುದೂ ಕಾರ್ಯಾಚರಣೆಗೆ ಕಷ್ಟವಾಗಿದೆ. ಇವೆಲ್ಲವುಗಳಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಿರೂರು ಗುಡ್ಡ ಕುಸಿತ ದುರಂತ: ಇನ್ನೂ ಪತ್ತೆಯಾಗದ ಲಾರಿ, ದೇಹ

ಸದ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಮುಂದೆ ಮಳೆ ಕಡಿಮೆಯಾಗಿ ನೀರಿನ ಹರಿವಿನ ವೇಗ ಇಳಿದಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸುತ್ತೇವೆ.
- ಮಂಕಾಳು ವೈದ್ಯ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ

click me!