ಬರದ ಸಂಕಷ್ಟಗಳ ನಡುವೆ ಕುಡಿಯುವ ನೀರಿಗೂ ಹಾಹಾಕಾರವನ್ನು ಎದುರಿಸಿದ್ದ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ವರಣ ದೇವನ ಕೃಪೆ ಮತ್ತು ತಾಯಿ ಚಾಮುಂಡೇಶ್ವರಿ ದಯೆ ಲಭಿಸಿದೆ.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ
ಬರಗಾಲದ ಸಂಕಷ್ಟದಿಂದ ಬಸವಳಿದಿದ್ದ ನಾಡಿಗೆ ಕಳೆದ ಒಂದು ತಿಂಗಳ ವರುಣ ದೇವನ ಕೃಪೆಯಿಂದ ಇಳಿಗೆ ತಂಪಾಗಿದೆ. ನಾಡನ್ನು ಸಮೃದ್ಧಗೊಳಿಸಲು ಕಾವೇರಿ ತಾಯಿ ಮೈದುಂಬಿ ಹರಿದಿದ್ದಾಳೆ. ಕನ್ನಡ ನಾಡನ್ನು ಸಮೃದ್ಧಗೊಳಿಸಿ, ನೆರೆಯ ರಾಜ್ಯದ ದಾಹವನ್ನೂ ತೀರಿಸಿ ಸರ್ವರನ್ನೂ ಸಂತೃಪ್ತಿಗೊಳಿಸಿದ ಕಾವೇರಿಗೆ ನಾಡಿನ ಸಮಸ್ತ ಜನರ ಪರವಾಗಿ ಬಾಗಿನ ಅರ್ಪಿಸುವ ಅವಕಾಶ ದೊರೆತಿರುವುದು ನಮ್ಮ ಸೌಭಾಗ್ಯ. ಬರದ ಸಂಕಷ್ಟಗಳ ನಡುವೆ ಕುಡಿಯುವ ನೀರಿಗೂ ಹಾಹಾಕಾರವನ್ನು ಎದುರಿಸಿದ್ದ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ವರಣ ದೇವನ ಕೃಪೆ ಮತ್ತು ತಾಯಿ ಚಾಮುಂಡೇಶ್ವರಿ ದಯೆ ಲಭಿಸಿದೆ. ಮುಂಬರುವ ದಿನಗಳು ಸಮೃದ್ಧಿ ತರುವ ಆಶಾಭಾವನೆಯೂ ಈ ಮೂಲಕ ನಮಗೆ ಗೋಚರಿಸಿದೆ.
undefined
ಈಗ ಬರ ಕಳೆದು ಬಂದಿರುವ ವರುಣ ಧಾರೆ, ಜನಮಾನಸದಲ್ಲಿ ಹರ್ಷದ ಹೊನಲನ್ನು ಹರಿಸಿದೆ. ಈ ಸಂತಸವನ್ನು ಹಂಚಿಕೊಳ್ಳಲು ಹಾಗೂ ತಾಯಿ ಕಾವೇರಿಗೆ ಭಕ್ತಿಯಿಂದ ನಮನ ಸಲ್ಲಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ, ಜುಲೈ 29ರ ಇಂದು ಬಾಗಿನ ಸಮರ್ಪಿಸಲಿದೆ. ಲಕ್ಷಾಂತರ ರೈತರಿಗೆ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಿಸುವುದು ಎಂದರೆ ಅದು ನಮ್ಮ ಪುಣ್ಯ ಕಾರ್ಯವೇ ಸರಿ. ಇದೊಂದು ಸುದಿನವಾಗಿದೆ.
ರಾಜ್ಯದಲ್ಲಿ ಹೂಡಿಕೆಗೆ ಭಯದ ವಾತಾವರಣ: ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ
ಕಾವೇರಿ ಎಂದರೆ ಕೇವಲ ನದಿಯಲ್ಲ. ಅದು ಒಂದು ಭಕ್ತಿ ಭಾವ. ಕವೇರ ರಾಜನ ಮಗಳಾಗಿ, ಅಗಸ್ತ್ಯ ಮಹರ್ಷಿಗಳ ಪತ್ನಿಯಾಗಿ ಕೊಡಗಿಗೆ ಬಂದ ಕಾವೇರಿ, ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯಿಂದ ಹರಿದು ಈ ಭಾಗದ ಜನರ ಜೀವನಾಡಿಯಾದಳು. ಅವಳು ಕೊಡಗಿನ ಮಕ್ಕಳಾದ ಕೊಡವರ ಕುಲ ದೇವತೆಯೂ ಆದಳು. ಅದಕ್ಕಾಗಿ ಕೊಡವರು ‘ದೇಶಕೋರ್ ಮಾದೇವಿ, ಕಾವೇರಮ್ಮೆ ಮಾತಾಯಿʼ ಎಂದು ಆಕೆಯನ್ನು ಸ್ಮರಿಸುತ್ತಾರೆ. ಕೊಡವರು ತಮ್ಮ ಉಮ್ಮತ್ತಾಟ್ ನೃತ್ಯದಲ್ಲಿ, ‘ಕಾವೇರ‍್ಯಮ್ಮೆ ದೇವಿ ತಾಯೆ ಕಾಪಾಡೆಂಗಳ, ಬಾವಬಟ್ಟೆ ಕೇಟಿಚಾಕ್ ದೇವಿ ತಾಯಿಯೆ’ ಎಂದು ಹಾಡಿ ನಲಿಯುತ್ತಾರೆ. ಕೊಡಗಿನ ನೆಲದ ಕವಿ ಪಂಜೆ ಮಂಗೇಶರಾಯರು, ‘ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?’ ಎಂದು ಕಾವೇರಿಯ ಭವ್ಯತೆಯನ್ನು ಬಣ್ಣಿಸಿದ್ದಾರೆ.
ಶ್ರೀವಿಜಯ ಬರೆದ ‘ಕವಿರಾಜ ಮಾರ್ಗʼದಲ್ಲೂ ಕನ್ನಡ ನಾಡನ್ನು ಗುರುತಿಸಲು ಕಾವೇರಿಯನ್ನೇ ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಕವಿ, ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ʼ ಎಂದು ನಾಡಿನ ಸೀಮೆಗಳನ್ನು ಗುರುತಿಸುತ್ತಾನೆ. ಕೊಡಗು, ಹಾಸನ, ಮಂಡ್ಯ, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಕಾವೇರಿ ಎಂದರೆ ಬ್ರಹ್ಮನಿಂದ ಸಿಕ್ಕ ವರ. ತಲಕಾವೇರಿಯಲ್ಲಿ ಪ್ರತಿ ವರ್ಷದ ಕಾವೇರಿ ಸಂಕ್ರಮಣದಂದು, ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡು ಭಕ್ತರಿಗೆ ಅಭಯ ನೀಡುವ ಸಂಭ್ರಮದ ಆಚರಣೆ ವಿಶಿಷ್ಟವಾದುದು. ಇದು ಉತ್ತರದ ಗಂಗೆಗೆ ಸಮಾನವಾದ ದಕ್ಷಿಣದ ಪವಿತ್ರ ತೀರ್ಥವಾಗಿದ್ದು, ನಾಡಿನ ಜನರೆಲ್ಲರೂ ತೀರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ.
ಪರಂಪರೆಯ ಕೊಂಡಿ
ಕಾವೇರಿ ಭಾರತದ ಏಳು ಪವಿತ್ರ ನದಿಗಳಲ್ಲೊಂದು. ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಸ್ನಾನ ಮಾಡುವಾಗ ತಪ್ಪದೇ ಈ ಶ್ಲೋಕವನ್ನು ಹೇಳುತ್ತೇವೆ. ಈ ನದಿಗಳಲ್ಲಿ ನಮಗೆ ಸ್ನಾನ ಮಾಡಲು ಸಾಧ್ಯವಾಗದಿದ್ದರೂ ಅವುಗಳನ್ನು ನೆನೆದು ಮನೆಯಲ್ಲೇ ಸ್ನಾನ ಮಾಡುವುದು ಒಂದು ಸಂಪ್ರದಾಯ. ಕಾವೇರಿ ಎಲ್ಲೆಲ್ಲಿ ಹರಿಯುತ್ತಾಳೋ ಅಲ್ಲೆಲ್ಲ ಹಸಿರು ಸಮೃದ್ಧಿಯಾಗಿ ಬೆಳೆದಿದೆ. ಕೃಷಿಗೆ ನೀರಾವರಿಯ ಚಿಂತೆ ದೂರವಾಗಿದೆ. ಜನಜೀವನ ನೆಮ್ಮದಿಯಿಂದ ಸಾಗಿದೆ. ಕಾವೇರಿ ಹುಟ್ಟುವ ಬ್ರಹ್ಮಗಿರಿಯ ತಪ್ಪಲಿನ ಸಮೀಪ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರವಿದೆ. ನಂತರ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ಹಾಗೂ ಪಶ್ಚಿಮವಾಹಿನಿ, ನರಸೀಪುರದ ತ್ರಿಮುಕುಟ ಕ್ಷೇತ್ರ, ಮುಡುಕುತೊರೆಯ ಸೋಮಶೈಲ ಕ್ಷೇತ್ರ, ತಲಕಾಡಿನ ಗಜಾರಣ್ಯ ಕ್ಷೇತ್ರ, ಸತ್ಯಗಾಲದ ಜ್ಞಾನಾಶ್ವತ್ಥ ಕ್ಷೇತ್ರ, ಶಿವನಸಮುದ್ರದ ಶಿಲಾಭೇದಿ ಕ್ಷೇತ್ರ ಹೀಗೆ ಆಕೆ ಹರಿಯುವಲ್ಲೆಲ್ಲ ಪುಣ್ಯಕ್ಷೇತ್ರಗಳು ಉದ್ಭವಿಸಿದೆ. ಒಂದು ಅಂದಾಜಿನಂತೆ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾವೇರಿ ಹರಿಯುವ ದಂಡೆಯಲ್ಲಿ ಏಳು ನೂರಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳಿವೆ.
ಜೀವ ಸೆಲೆ ಕನ್ನಂಬಾಡಿ
ಮೈಸೂರು ಒಡೆಯರ್ ರಾಜವಂಶಸ್ಥರಿಗೂ ಕಾವೇರಿ ತಾಯಿ ಪವಿತ್ರ ಪೂಜ್ಯ. ಜನವಲ್ಲಭ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಇತರೆ ತಜ್ಞರ ಶ್ರಮದಿಂದಾಗಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣವಾಗಿ ಕಾವೇರಿ ನದಿಯ ಪ್ರಯೋಜನವನ್ನು ನಾಡಿನ ರೈತರು ಪಡೆಯುತ್ತಿದ್ದಾರೆ. 1911ರಲ್ಲಿ ಆರಂಭವಾದ ಈ ಜಲಾಶಯದ ಕಾಮಗಾರಿ ಪೂರ್ಣಗೊಳ್ಳುವಾಗ 1932 ಆಗಿತ್ತು. ಆಗಿನ ಕಾಲದಲ್ಲಿ ಇದರ ನಿರ್ಮಾಣ ನಿರಂತರವಾಗಿ ಸವಾಲುಗಳನ್ನು ಒಡ್ಡಿತ್ತು. 10 ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಜಲಾಶಯದ ಕಾಮಗಾರಿಗಾಗಿ ಶ್ರಮಿಸಿದ್ದರು. ಒಂದು ಶತಮಾನವನ್ನೇ ಕಂಡಿರುವ ಈ ಜಲಾಶಯ ಇಂದಿಗೂ ಗಟ್ಟಿಯಾಗಿ ನಿಂತು ಕಾವೇರಿಯನ್ನು ಲಕ್ಷಾಂತರ ಎಕರೆ ಭೂಮಿಗೆ ನೀರು ಪೂರೈಸಿ ಕೃಷಿ ನಳನಳಿಸುವಂತೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಮಹಾರಾಜರು, ಸರ್.ಎಂ.ವಿ. ಹಾಗೂ ಕಾರ್ಮಿಕರನ್ನು ಗೌರವದಿಂದ ಸ್ಮರಿಸಬೇಕಿದೆ.
ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆ ಭವ್ಯ ಬೆಂಗಳೂರಿಗೆ ಭದ್ರ ಅಡಿಪಾಯ ಹಾಕಿದ್ದರು. ಈ ಪ್ರದೇಶ ಮುಂದೊಂದು ದಿನ ಮಹಾ ನಗರವಾಗಿ ಬೆಳೆಯಲಿದೆ ಎಂಬ ದೂರದೃಷ್ಟಿ ಹೊಂದಿದ್ದ ಅವರು, ಅದಕ್ಕಾಗಿ 300ಕ್ಕೂ ಅಧಿಕ ಕೆರೆ, ಕಟ್ಟೆಗಳನ್ನು ನಿರ್ಮಿಸಿ ನಗರಕ್ಕೆ ಜಲಮೂಲವನ್ನು ಸೃಷ್ಟಿಸಿಕೊಟ್ಟರು. ಆದರೆ ನಗರೀಕರಣ, ಒತ್ತುವರಿ ಮೊದಲಾದ ಕಾರಣಗಳಿಂದ ಕೆರೆಗಳು ಮಾಯವಾಗಿ ನಗರಕ್ಕೆ ಜಲಮೂಲದ ಕೊರತೆ ಉಂಟಾಯಿತು. ಆಗ ಕಾವೇರಿ ಯೋಜನೆಯ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಯಿತು. ಶಿವ ಸಮತೋಲನ ಜಲಾಶಯದಿಂದ, ಸುಮಾರು 100 ಕಿ.ಮೀ. ದೂರದಿಂದ ಪ್ರತಿ ದಿನ ಪಂಪ್ ಮಾಡಿ ನಗರಕ್ಕೆ ಕಾವೇರಿ ಪೂರೈಸುವ ಈ ಯೋಜನೆ ಬೇರೆ ನಗರಗಳಿಗೂ ಮಾದರಿಯಾಗಬಲ್ಲದು. ನಗರದ ಜನಸಂಖ್ಯೆ 1 ಕೋಟಿಗಿಂತ ಹೆಚ್ಚಿದ್ದರೂ, ಕಾವೇರಿಯಿಂದ ನೀರು ಪಡೆದು ಪೂರೈಸುವುದು ಸಾಧ್ಯವಾಗಿದೆ. ಐಟಿ, ಬಿಟಿ ಕೇಂದ್ರ, ಸಿಲಿಕಾನ್ ವ್ಯಾಲಿ ಎಂದೆಲ್ಲ ಕೀರ್ತಿ ಪಡೆದ ಜಾಗತಿಕ ನಗರಿ ಬೆಂಗಳೂರಿನ ಈ ಮಟ್ಟಿಗಿನ ಬೆಳವಣಿಗೆಯಲ್ಲಿ ಕಾವೇರಿಯ ಪಾತ್ರ ನಿರ್ಣಾಯಕ. ಹಾಗೆಯೇ ಬ್ರ್ಯಾಂಡ್ ಬೆಂಗಳೂರು ನಿರ್ಮಾಣದಲ್ಲಿ ಕಾವೇರಿಯ ಪಾತ್ರ ಅಮೂಲ್ಯ.
ಅಮೂಲ್ಯ ನೀರನ್ನು ಉಳಿಸೋಣ
ಕಾವೇರಿ ಎಂದರೆ ಬರೀ ನೀರಲ್ಲ. ಅದರಲ್ಲಿ ಕೋಟಿ ಪಾಪಗಳನ್ನು ತೊಳೆಯುವ ಶಕ್ತಿ ಇದೆ. ಈ ಬಾರಿಯ ಬರಗಾಲ, ಅಂತಹ ಜೀವನದಿಯ ಮಹತ್ವವನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿದೆ. ಒಂದು ಹನಿ ನೀರನ್ನು ಪೋಲು ಮಾಡುವ ಮುನ್ನ ಈ ನೀರು ಕಾವೇರಿಯ ಭಾಗ ಎಂಬುದನ್ನು ಸ್ಮರಿಸಿದರೆ ಜೀವಜಲದ ವ್ಯರ್ಥ ಬಳಕೆಯಿಂದ ಮನಸ್ಸು ಹಿಂದೆ ಸರಿಯುತ್ತದೆ. ಕೃಷಿ ಹಾಗೂ ಕುಡಿಯುವ ನೀರಿಗೆ ಆಧಾರವಾಗಿರುವ ಕಾವೇರಿ ನೀರನ್ನು ಅನಗತ್ಯವಾಗಿ ಬಳಸದೆ ಉಳಿತಾಯ ಮಾಡುವ, ಅವಶ್ಯಕತೆ ಇದ್ದಷ್ಟು ಬಳಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು. ಈ ಕುರಿತು ಸರ್ಕಾರ, ಜಲಮಂಡಳಿ, ಸಂಘ, ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಆದರೂ ಇಡೀ ಸಮಾಜದಲ್ಲಿ ಸ್ವಯಂ ಜಾಗೃತಿ ಮೂಡುವುದು ಇಂದಿನ ಕಾಲಕ್ಕೆ ಅನಿವಾರ್ಯ.
ವಾಲ್ಮೀಕಿ, ಮುಡಾ ಅಕ್ರಮ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆ.3ರಿಂದ ಬಿಜೆಪಿ-ಜೆಡಿಎಸ್ 7 ದಿನಗಳ ಪಾದಯಾತ್ರೆ
ಗಂಗಾರತಿ ಮಾದರಿ ಕಾವೇರಿಗೆ ಆರತಿ
ಕಾವೇರಿ ನದಿಗೆ ವಾರಾಣಸಿಯಲ್ಲಿನ ಗಂಗಾ ನದಿಗೆ ಮಾಡಲಾಗುವ ಗಂಗಾ ಆರತಿಯ ಮಾದರಿಯಲ್ಲಿ ಆರತಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಈ ಭಾಗ ಜನರ ಭಾವನೆಗಳನ್ನು ಗೌರವಿಸಿ ಭಕ್ತಿ ಭಾವದಿಂದ ಈ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಿದ್ದೇವೆ.