ಹಾವೇರಿ: ರಂಗಭೂಮಿಯಿಂದ ಕನ್ನಡ ಪಸರಿಸುತ್ತಿರುವ ಶೇಷಗಿರಿ ಗ್ರಾಮ

Kannadaprabha News, Ravi Janekal |   | Kannada Prabha
Published : Nov 09, 2025, 10:07 AM IST
Sheshagiri village spreading Kannada through theater

ಸಾರಾಂಶ

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮವು ಕಳೆದ ನಾಲ್ಕು ದಶಕಗಳಿಂದ ಕನ್ನಡ ರಂಗಭೂಮಿಯ ಕೇಂದ್ರವಾಗಿ, 2000ಕ್ಕೂ ಹೆಚ್ಚು ನಾಟಕ ಪ್ರದರ್ಶಿಸಿದೆ. 'ವಾಲಿ ವಧೆ'ಯಂತಹ ಯಶಸ್ವಿ ನಾಟಕಗಳು, ಮಕ್ಕಳ ರಂಗ ತರಬೇತಿ, ಕನ್ನಡಪರ ಕಾರ್ಯಕ್ರಮಗಳ ಮೂಲಕ ಈ ಗ್ರಾಮವು 'ಕನ್ನಡದ ರಂಗಗಿರಿ'ಯಾಗಿ ಖ್ಯಾತಿ ಪಡೆದಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ (ನ.9): ಹಳ್ಳಿ ಹುಡುಗರ 4 ದಶಕಗಳ ಕನ್ನಡ ರಂಗ ಪ್ರೀತಿಯ ವೈಭವದ ನಾಟಕಗಳ ಅನಾವರಣಕ್ಕೆ ಸಾಕ್ಷಿಯಾಗಿರುವ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮವು ರಂಗಭೂಮಿ ಪ್ರದರ್ಶನದ ಮೂಲಕ ಎಲ್ಲೆಡೆ ಕನ್ನಡ ಪಸರಿಸುತ್ತಿದ್ದು, ಇಡೀ ರಂಗಭೂಮಿಯೇ ತನ್ನತ್ತ ಕಣ್ಣುಬಿಟ್ಟು ನೋಡುವಂತೆ ಮಾಡಿದೆ.

ಶೇಷಗಿರಿ ಕಲಾ ತಂಡ 2000ಕ್ಕೂ ಹೆಚ್ಚು ನಾಟಕ ಪ್ರದರ್ಶನ:

ಪುಟ್ಟ ಗ್ರಾಮ ಶೇಷಗಿರಿಯಲ್ಲಿರುವ ಕಬಡ್ಡಿ ಆಡುವ ಹುಡುಗರು ಕ್ರೀಡೆಯ ಜತೆಗೆ ತಮ್ಮ ನಾಟಕದ ರುಚಿಗೆ ಇಡೀ ಊರಲ್ಲಿ ಪ್ರಬುದ್ಧ ಪ್ರೇಕ್ಷಕರ ವಿಮರ್ಶಕರನ್ನಾಗಿ ತರಬೇತುಗೊಳಿಸಿದ್ದು, ರಾಜ್ಯದ ಪ್ರಸಿದ್ಧ ಕನ್ನಡ ನಾಟಕ ತಂಡಗಳು, ರಂಗ ನಿರ್ದೇಶಕರನ್ನು ಗ್ರಾಮದತ್ತ ಸೆಳೆದಿದ್ದಾರೆ. ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಸಾವಿರಕ್ಕೂ ಅಧಿಕ ನಾಟಗಳು ಪ್ರಸಿದ್ಧ ತಂಡಗಳಿಂದ ಪ್ರದರ್ಶನಗೊಂಡಿವೆ. 1986ರಿಂದ ಈವರೆಗೆ ಕೃಷಿಕರೇ ಕಲಾವಿದರಾಗಿ ಶೇಷಗಿರಿ ಕಲಾ ತಂಡದಿಂದ ರಾಜ್ಯದಲ್ಲಿ 2000ಕ್ಕೂ ಅಧಿಕ ನಾಟಕ ಪ್ರದರ್ಶನಗಳು ನಡೆದಿವೆ.ಕನ್ನಡದ ತುಡಿತ:

ಕನ್ನಡಪರ ಚಿಂತನೆಗಳಿಗೆ ವೇದಿಕೆ ಶೇಷಗಿರಿ ಗ್ರಾಮ:

ಪ್ರತಿವರ್ಷ ಕನ್ನಡ ಪುಸ್ತಕಗಳ ಪರಿಚಯ, ರಾಜ್ಯೋತ್ಸವ ನೆಪದಲ್ಲಿ ಸ್ಪರ್ಧೆಗಳು, ಕನ್ನಡ ಗೀತ ಗಾಯನ ಸೇರಿದಂತೆ ಹಲವು ಕನ್ನಡ ಪರ ಚಿಂತನೆಗಳಿಗೆ ಶೇಷಗಿರಿ ವೇದಿಕೆಯಾಗಿದೆ. ಅಲ್ಲದೇ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ ಹೆಮ್ಮೆ ಶೇಷಗಿರಿ ತಂಡದ್ದು. ಹಲವು ವರ್ಷಗಳಿಂದ ಕನ್ನಡ ನಾಟಕೋತ್ಸವಕ್ಕೆ ಶೇಷಗಿರಿ ಸಾಕ್ಷಿಯಾಗಿದ್ದು, ಬೆಂಗಳೂರಿನ ರಂಗ ಶಂಕರದ ಸಹಯೋಗದಲ್ಲಿ 3 ವರ್ಷಗಳಿಂದ ನಾಟಕೋತ್ಸವ ನಡೆದಿದೆ.

55 ಪ್ರಯೋಗ ಕಂಡ ‘ಉಷಾಹರಣ’:

ಶೇಷಗಿರಿಯ ರಂಗ ಕಲೆಯನ್ನು ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದ ನಾಟಕ ‘ಉಷಾಹರಣ’. ಇದು 55 ಪ್ರಯೋಗಗಳನ್ನು ಕಂಡಿದೆ. ಖ್ಯಾತ ಯುವ ನಿರ್ದೆಶಕ ಡಾ.ಶ್ರೀಪಾದ ಭಟ್ ಅವರ ಪರಿಶ್ರಮದ ಫಲದಿಂದ ನಾಟಕ ಸೈ ಎನಿಸಿಕೊಂಡಿದೆ. ಪುಗಸೆಟ್ಟೆ ಪ್ರಸಂಗ, ಬಾರಮ್ಮ ಭಾಗೀರತಿ, ಊರು ನೀರು, ನಮಗೂ ಒಂದು ಕಾಲ, ನೀರು ಶಕುನ, ನಾವು ನಮ್ಮೂರು, ಹೇಳಿ ನೀವ್ಯಾರ ಕಡೆಗೆ, ಚಂಬು ಪುರಾಣದಂತಹ ಜನಜಾಗೃತಿಯ ಬೀದಿ ನಾಟಕಗಳು ಜನಮನದಲ್ಲಿ ಅಚ್ಚಳಿಯದ ಅಚ್ಚೊತ್ತಿವೆ. ಕುವೆಂಪು ಅವರ ರಾಮಾಯಣ ದರ್ಶನಂ ಆಧಾರಿತ ಪೌರಾಣಿಕ ‘ವಾಲಿ ವಧೆ’ ನಾಟಕಕ್ಕೆ ರಾಜ್ಯಾದ್ಯಂತ ಭಾರೀ ಬೇಡಿಕೆ ಇದೆ. ಈಗಾಗಲೇ 80ಕ್ಕೂ ಅಧಿಕ ಪ್ರಯೋಗ ಕಂಡಿದ್ದು, ಬೆಂಗಳೂರಲ್ಲಿ 50ಕ್ಕೂ ಅಧಿಕ ಹೌಸ್‌ಫುಲ್ ಪ್ರದರ್ಶನಗಳಾಗಿವೆ.

ರಂಗಭೂಮಿ ತರಬೇತಿ:

ಮುಂದಿನ ಪೀಳಿಗೆಯೂ ರಂಗಭೂಮಿಯಲ್ಲಿರಬೇಕು ಎಂಬ ಕಾಳಜಿಗಾಗಿ ಮಕ್ಕಳ ರಂಗ ತರಬೇತಿ ಶಿಬಿರ, ಯುವಕರು, ಕಲಾವಿದರಿಗಾಗಿ ರಂಗ ತರಬೇತಿ ಶಿಬಿರ ನಡೆಸಿದ ಯಶಸ್ಸು ಈ ತಂಡಕ್ಕಿದೆ. ಮಕ್ಕಳ ಕಥಾ ಕಮ್ಮಟಗಳೂ ನಡೆದಿವೆ. ಗ್ರೀಕ್ ಮಾದರಿ ರಂಗಭೂಮಿ ನಿರ್ಮಾಣಕ್ಕೆ ಸಿದ್ಧತೆ ಹಾಗೂ ರಂಗ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ತಂಡ ಸಿದ್ಧತೆ ನಡೆಸಿದೆ.

ಶೇಷಗಿರಿ ತಂಡ ಈ ಎಲ್ಲ ಸಾಧನೆಯ ಕೇಂದ್ರ ಬಿಂದು ಹಳ್ಳಿ ಪೋಸ್ಟ್‌ ಮಾಸ್ಟರ ಪ್ರಭು ಗುರಪ್ಪನವರ. ಈ ರಂಗಭೂಮಿಗಾಗಿಯೆ ಬದುಕಿ ಬಾಳಿದ ಪ್ರಭು ಹಾಗೂ ಅವರಿಗೆ ಬೆಂಬಲವಾಗಿ ನಿಂತ ಸಿದ್ದಪ್ಪ ರೊಟ್ಟಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿವೆ. ಈಗ ಶಂಕರಣ್ಣ ಗುರಪ್ಪನವರ, ನಿರ್ದೇಶಕ ಎಸ್.ಎಲ್.ಸಂತೊಷ ಹಾಗೂ ಉಪನ್ಯಾಸಕ ನಾಗರಾಜ ದಾರೇಶ್ವರ ಅವರ ನಿತ್ಯ ಪರಿಶ್ರಮ, ಇಡೀ ಊರಿನ ಕಲಾವಿದರು, ಹಿರಿ ಕಿರಿಯರ ಬೆಂಬಲದಿಂದ ಶೇಷಗಿರಿ ಕನ್ನಡ ರಂಗ ವೈಭವದ ಉನ್ನತ ಸ್ಥಾನದಲ್ಲಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ರಂಗಭೂಮಿಯ ದಿಗ್ಗಜರಾದ ಗೊ.ರು.ಚನ್ನಬಸಪ್ಪ, ಮುಖ್ಯಮಂತ್ರಿ ಚಂದ್ರು, ಅನಂತನಾಗ್‌, ಜಯಶ್ರೀ ಕಂಬಾರ, ಶ್ರೀನಿವಾಸ ಕಪ್ಪಣ್ಣ, ಕೆ.ವೈ.ನಾರಾಯಣಸ್ವಾಮಿ, ಶಶಿಧರ ಬಾರೀಘಾಟ, ಸುದರ್ಶನ ದೇಸಾಯಿ, ಬಿ.ವಿ. ರಾಜಾರಾಮ್, ಎಸ್.ಮಾಲತಿ, ಕೆ.ಜಿ. ಕೃಷ್ಣಮೂರ್ತಿ, ಕಾ.ತ.ಚಿಕ್ಕಣ್ಣ, ನಾ.ಡಿಸೋಜಾ, ಗವಿಸಿದ್ಧ ಬಳ್ಳಾರಿ, ವಿಶುಕುಮಾರ, ವಿಷ್ಣು ನಾಯಕ, ಪ್ರಸನ್ನ, ವೆಂಕಟೇಶ, ಚಿದಂಬರಾವ ಜಂಬೆ, ಪ್ರಮೋದ ಸಿಗ್ಗಾಂವ, ಪ್ರಕಾಶ ಗರುಡ, ಚಂದ್ರಶೇಖರ ನಂಗಲಿ, ಪ್ರೊ.ಎನ್.ಕೃಷ್ಣೇಗೌಡ, ಚಂದ್ರಕಾಂತ ಕೂಸನೂರ ಸೇರಿದಂತೆ ಗಣ್ಯಾತಿಗಣ್ಯರು ಶೇಷಗಿರಿಯ ಕನ್ನಡದ ಕೆಲಸವನ್ನು ಮೆಚ್ಚಿ ಹರಸಿ ಹಾರೈಸಿದ್ದಾರೆ. ಶೇಷಗಿರಿ ಈಗ ಕನ್ನಡದ ರಂಗಗಿರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!