Missing Case: ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಅಪ್ರಾಪ್ತೆ ಸೂರತ್‌ನ ಅನಾಥಾಶ್ರಮದಲ್ಲಿ ಪತ್ತೆ!

By Suvarna NewsFirst Published Jan 18, 2022, 12:38 PM IST
Highlights

* ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ ಪತ್ತೆ

* ಕಳೆದ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದ ಅಪ್ರಾಪ್ತ ಯುವತಿ

* 78 ದಿನಗಳ ಬಳಿಕ ಗುಜರಾತ್ ನ ಸೂರತ್ ನಲ್ಲಿ ಅಪ್ರಾಪ್ತ ಬಾಲಕಿ ಪತ್ತೆ

* ಜನವರಿ 15 ರಂದು ಗುಜರಾತ್ ನ ಸೂರತ್ ನಲ್ಲಿ ಪತ್ತೆಯಾಗಿರೋ ಬಾಲಕಿ

ಬೆಂಗಳೂರು(ಜ.18): ಶಾಮಿನಿಸಂನೆಡೆ ಆಕರ್ಷಿತಳಾಗಿ ಆತ್ಮಗಳ ಜೊತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದ್ದ ಏಕಾಏಕಿ ನಾಪತ್ತೆಯಾಗಿದ್ದ ಬೆಂಗಳೂರಿನ ಅಪ್ರಾಪ್ತ ಬಾಲಕಿ ಕೊನೆಗೂ ಪತ್ತೆಯಾಗಿದ್ದಾಳೆ. ಕಳೆದ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿ, 78 ದಿನಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ಪತ್ತೆಯಾಗಿದ್ದಾಳೆ. ಈಕೆ ಇಲ್ಲಿನ ನ ವಾತ್ಸಲ್ಯ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದಳೆಂದು ವರದಿಗಳು ಉಲ್ಲೇಖಿಸಿವೆ. ಸದ್ಯ ಅಪ್ರಾಪ್ತ ಬಾಲಕಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಆಕೆಯ ಹೆತ್ತವರಿಗೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ?

ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿ ಕಳೆದ ಎರಡು ತಿಂಗಳಿನಿಂದ ಕಣ್ಮರೆಯಾಗಿದ್ದಳು. ಈ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಹೌದು ಕಳೆದ ಅಕ್ಟೋಬರ್ 31 ರಂದು ಮನೆ ಬಿಟ್ಟು ಹೋಗಿದ್ದ 17 ವರ್ಷದ ಯುವತಿ ಅನುಷ್ಕಾ, ಎರಡು ತಿಂಗಳಾದರೂ ಮನೆಗೆ ಬಂದಿರಲಿಲಲ್. ಮಾನಸಿಕವಾಗಿ ಕುಗ್ಗಿದ್ದ ಈಕೆ ಎರಡು ಜತೆ ಬಟ್ಟೆ ಹಾಗೂ 2,500 ರೂಪಾಯಿ ತೆಗೆದುಕೊಂಡು ಮನೆ ಬಿಟ್ಟಿದ್ದಳೆನ್ನಲಾಗಿದೆ. ತಮ್ಮ ಮಗಳ ನಾಪತ್ತೆಯ ಹಿಂದೆ ಮಾಟ-ಮಂತ್ರ ದ ಕೈವಾಡವಿದೆ ಎಂದು ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದರು. ಆದರೀಗ ಅನಾಥಾಶ್ರಮದಲ್ಲಿ ಈಕೆ ಪತ್ತೆಯಾಗಿದ್ದು ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.

ಶಾಮಿನಿಸಂ ಕಡೆ ಆಕರ್ಷಿತಳಾಗಿದ್ದ ಅನುಷ್ಕಾ

ಅನುಷ್ಕಾ 12ನೇ ತರಗತಿಯಲ್ಲಿ ತೇರ್ಗಡೆಯಾದ ಬಳಿಕ ಶಾಮಿನಿಸಂನತ್ತ ಆಕರ್ಷಿತಳಾಗಿದ್ದಳೆನ್ನಲಾಗಿದೆ. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದು, ಸೈಕೆಡೆಲಿಕ್ ಶಿಕ್ಷಣತಜ್ಞರಿಂದ ಪ್ರಭಾವಿತಳಾಗಿದ್ದಳು. ಆ ಯುವತಿ ಶಾಮಿನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ-ತಾಯಿಯ ಜೊತೆ ಮಾತನಾಡಿದ್ದಳು. 

ಬಾಲಕಿ ನಾಪತ್ತೆಯಾಗಿದ್ದ ವೇಳೆ ಮಗಳ ಬಗ್ಗೆ ಮಾಹಿತಿ ನೀಡಿದ್ದ ಹೆತ್ತವರು' ಕಳೆದ ಮೂರು ತಿಂಗಳ ಹಿಂದೆ ಮಗಳ ನಡವಳಿಕೆಯಲ್ಲಿ ಕೆಲ ಬದಲಾವಣೆಗಳಾಗಿತ್ತು. ಆದರೆ ಆಕೆಯ ವಯಸ್ಸಿನಲ್ಲಿ ಇದೆಲ್ಲಾ ಸಹಜ ಎಂದು ಸುಮ್ಮನಾಗಿದ್ದೆವು.  ಒಂಟಿಯಾಗಿರಲು ಬಯಸುತ್ತಿದ್ದಳು. ಮನೆಗೆ ಬಂದ ಕೂಡಲೇ ರೂಮ್‌ ಸೇರಿಕೊಳ್ಳೋದು, ಯಾರೊಂದಿಗೂ ಬೆರೆಯುತ್ತಿರಲಿಲ್ಲ,  ಶಾಮಿನಿಸಮ್ ಗೆ ಸಂಬಂಧಿಸಿದಂತೆ ಸಾಕಷ್ಟು ತಿಳಿದುಕೊಳ್ಳಲು ಯತ್ನಿಸುತ್ತಿದ್ದಳು. ಹೀಗಾಗಿ ಒಮ್ಮೆ ಮನೋವೈದ್ಯರ ಬಳಿಯೂ ಕರೆದೊಯ್ದಿದ್ದೆವು. ಇದಾದ ಬಳಿಕ ಆಕೆ ನಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿದಳು. ಸದಾ ಆನ್​ಲೈನ್​ನಲ್ಲಿ ಮಾಟ-ಮಂತ್ರದ ಬಗ್ಗೆ ವಿಡಿಯೋ ನೋಡುತ್ತಿದ್ದಳು. ಗೂಗಲ್​ನಲ್ಲಿ ಅದೇ ವಿಚಾರವಾಗಿ ಓದುತ್ತಿದ್ದಳು. ಇದೆಲ್ಲ ಆದ ಬಳಿಕ ನಾವೂ ಆಕೆಯನ್ನು ಆಕೆಯಷ್ಟಕ್ಕೆ ಬಿಟ್ಟಿದ್ದೆವು. ಹೀಗಿರುವಾಗ ಏಕಾಏಕಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು.

ಆದರೀಗ ಈ ಪ್ರಕರಣ ಸುಖಾಂತ್ಯವಾಗಿದೆ. ಬಾಲಕಿ ಮತ್ತೆ ಹೆತ್ತವರ ಕೈ ಸೇರಿದ್ದಾಳೆ. ಹೀಗಿದ್ದರೂ ಬಾಲಕಿ ಮನೆ ಬಿಟ್ಟಿದ್ದೇಕೆ? ಇದಕ್ಕೆ ಶಾಮಿನಿಸಂ ಕಡೆಗಿನ ಆಕರ್ಷಣೆಯೇ ಕಾರಣವಾ? ಅಥವಾ ಬೇರೇನಾದರೂ ಕಾರಣವಿದೆಯಾ? ಎಂಬುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಏನಿದು ಶಾಮಿನಿಸಂ?

ಶಾಮಿನಿಸಂ (ಆತ್ಮಗಳೊಂದಿಗೆ ಮಾತನಾಡುವುದು) ಒಂದು ಬಗೆಯ ಧಾರ್ಮಿಕ ಆಚರಣೆಯಾಗಿದ್ದು, ಅದರ ಅಭ್ಯಾಸ ಮಾಡುವವರು ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿ ಆತ್ಮಗಳೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ನಂಬಿ ಇದೆ. ಇದು ಪುರಾತನ ಹೀಲಿಂಗ್ ವಿಧಾನ ಎನ್ನಲಾಗಿದೆ. ಈ ವಿಧಾನದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ. 
 

click me!