Bengaluru Bandh News: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ವಿರುದ್ಧ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ರೋಡ್‌ಗಿಳಿಯಲು ಮುಂದಾಗಿದ್ದಾರೆ. ಜುಲೈ 27 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.
ಬೆಂಗಳೂರು (ಜು.20): ರಾಜ್ಯ ಸರ್ಕಾರದ ಬಹುನಿರೀಕ್ಷಿತ ಶಕ್ತಿ ಯೋಜನೆಯ ವಿರುದ್ಧ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಬೀದಿಗಿಳಿಯಲು ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಜುಲೈ 27ಕ್ಕೆ ರಾಜ್ಯದಲ್ಲಿ ಖಾಸಗಿ ಬಸ್‌ಗಳು, ಟ್ಯಾಕ್ಸಿಗಳು ತನ್ನ ಸೇವೆ ನೀಡೋದಿಲ್ಲ. ಅದರೊಂದಿಗೆ ಒಲಾ, ಉಬರ್, ಆಟೋ ಹಾಗೂ ಖಾಸಗಿ ಕ್ಯಾಬ್‌ಗಳು ಕೂಡ ಕಾರ್ಯನಿರ್ವಹಿಸುವುದಿಲ್ಲ. ಜುಲೈ 26ರ ಮಧ್ಯರಾತ್ರಿ 12 ರಿಂದ ಜುಲೈ 27ರ ಮಧ್ಯರಾತ್ರಿ 12 ಗಂಟೆಯವರೆಗೆ ಯಾವುದೇ ಸಂಚಾರ ಇರೋದಿಲ್ಲ. ರಾಜ್ಯ ಸರ್ಕಾರ ಮತ್ತು ಶಕ್ತಿ ಯೋಜನೆಯ ವಿರುದ್ಧ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಬೀದಿಗೆ ಇಳಿಯಲಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆ, ವೈಟ್ ಬೋರ್ಡ್ ವಾಹನವನ್ನ ವಾಣಿಜ್ಯ ವಾಹನವಾಗಿ ಉಪಯೋಗ, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ಹೀಗೆ ಹಲವು ಯೋಜನೆಯಿಂದ ಖಾಸಗಿ ಸಾರಿಗೆ ನೆಲ ಕಚ್ಚಿ ಹೋಗಿದ್ದು, ಮಾಲೀಕರು ಮತ್ತು ಚಾಲಕರು ಸಾಲ, ವಿಮೆ, ಮತ್ತು ಜೀವನ ಸಾಗಿಸಲು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ವಿರುದ್ಧವಾಗಿ ಸರಕಾರದ ಜುಲೈ 27ರ ಗುರುವಾರದಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತಿಳಿಸಿದೆ.
ರಾಜ್ಯದ 23 ಸಾರಿಗೆ ಸಂಘಟನೆಗಳು ಸೇರಿ ಈ ನಿರ್ಧಾರ ಮಾಡಿರುತ್ತದೆ. ಈ ಕುರಿತಂತೆ ಗುರುವಾರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಜು. 27 ರಂದು ಬಂದ್ ಆಚರಿಸಲು ತೀರ್ಮಾನ ಮಾಡಿದ್ದೇವೆ. 26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿ 12 ಗಂಟೆಯವರೆಗೂ ಆಟೋ, ಟ್ಯಾಕ್ಸಿ, ಓಲಾ, ಊಬರ್ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಓಡಾಟ ಇರೋದಿಲ್ಲ. ಖಾಸಗಿ ಸಾರಿಗೆಯ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಹಾಗಾಗಿ ಸರ್ಕಾರದ ಗಮನಸೆಳೆಯುತ್ತೇವೆ. ಖಾಸಗಿ ಬಸ್ ಗಳು ಕೂಡ ಓಡಾಟ ಮಾಡಲ್ಲ. ಬೆಂಗಳೂರಿನಲ್ಲಿ ಇರುವ ಖಾಸಗಿ ಮಾಲೀಕರಿಗೆ ಈ ಕುರಿತಾಗಿ ಮನವಿ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯಿಂದ ತುಂಬಾ ಹೊಡೆತ ಬಿದ್ದಿದೆ. ಶಕ್ತಿಯೋಜನೆಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿ. ಒಂದು ಮಾರ್ಗಸೂಚಿ ಇಲ್ಲದೇ ತಮ್ಮ ಖಾಸಗಿ ಬಸ್‌ಗಳಿಗೆ ನಷ್ಟವಾಗುತ್ತಿದೆ. ಬಸ್ಗಳಲ್ಲಿ ಎಷ್ಟು ಸೀಟ್ ಇರುತ್ತದೆಯೋ ಅಷ್ಟೇ ಸೀಟ್ ಹಾಕಬೇಕು. ಆದರೆ, ಬಸ್‌ನಲ್ಲಿ ಸ್ಟ್ಯಾಂಡಿಂಗ್‌ನಲ್ಲಿ ನಿಲ್ಲಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್‌ಗಳಲ್ಲಿ ಜನ ಬರುತ್ತಿಲ್ಲ. ಟೂರಿಸ್ಟ್ ಬಸ್ ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ಬಸ್ ಗಳಂತೆ ಖಾಸಗಿ ಬಸ್ ಗಳನ್ನು ಶಕ್ತಿ ಯೋಜನೆಗೆ ಬಳಸಿಕೊಳ್ಳಿ ಎಂದು ನಾಗರಾಜ್ ಶರ್ಮ ಹೇಳಿದ್ದಾರೆ.
PM Kisan Samman Nidhi: ಮುಂದಿನ ವಾರ ಈ ದಿನದಂದು ಬರಲಿದೆ 14ನೇ ಕಂತು
ಬೆಂಗಳೂರಿನಲ್ಲಿ 2.10 ಲಕ್ಷ ಆಟೋಗಳು , 12-23 ಸಾವಿರ ಖಾಸಗಿ ಬಸ್‌ಗಳಿವೆ. ಶಾಲಾ ಮಕ್ಕಳ ಟ್ರಿಪ್ ಆಟೋಗಳು ಹೊರತುಪಡಿಸಿ ಎಲ್ಲ ವಾಹನಗಳು ಸ್ತಬ್ದವಾಗಲಿದೆ. ಸಾರಿಗೆ ಸಂಘಟನೆಗಳ ಬಂದ್ ಗೆ ಕನ್ನಡ ಸಂಘಟನೆಗಳು ಬೆಂಬಲ ನೀಡಲಿದೆ. ಕನ್ನಡ ಸಂಘಟನೆಗಳು ಬಂದ್ ನಲ್ಲಿ ಹೋರಾಟ ಮಾಡಲಿವೆ. ನಾವು ಬೇರೆ ಬೇರೆ ಸಂಘಟನೆಗಳ ಬೆಂಬಲವನ್ನು ಕೋರಿದ್ದೆವೆ. ಬೇರೆ ಸಂಘಟನೆಗಳು ಬೆಂಬಲ ಕೊಡ್ತಾರೆ ಎಂದು ಆದರ್ಶ್ ಆಟೋ ಮಂಜುನಾಥ್ ಹೇಳಿದ್ದಾರೆ. ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಗೆ ಖಾಸಗಿ ಬಸ್ ಗಳು ತೆರಳೋದಿಲ್ಲ. ಒಂದು ವೇಳೆ ಸಂಚಾರ ಮಾಡಿದ್ರೆ ತಡೆಯುತ್ತೇವೆ ಎಂದು ನಟರಾಜ್ ಶರ್ಮ ತಿಳಿಸಿದ್ದಾರೆ.
ಕೇಂದ್ರದ ನಡೆಗೆ ವ್ಯಾಪಕ ವಿರೋಧ: ನಾಡಿದ್ದು ಎಪಿಎಂಸಿ ಬಂದ್?
27 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ಇರಲಿದೆ. ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಆಟೋ,ಕ್ಯಾಬ್, ಬಸ್ ಮಾಲೀಕರು ಸೇರಿದಂತೆ ಸಾವಿರಾರು ಚಾಲಕರು ಭಾಗಿಯಾಗಲಿದ್ದಾರೆ. ಖಾಸಗಿ ಬಸ್, ಟ್ಯಾಕ್ಸಿ, ಆಟೋ ಸೇವೆ ಬೆಂಗಳೂರಿನಲ್ಲಿ ಸಂಪೂರ್ಣ ಸ್ತಬ್ಧವಾಗಲಿದೆ