ಅಪ್ರಾಪ್ತರ ಜತೆ ಒಪ್ಪಿತ ಸೆಕ್ಸ್‌ ‘ಒಪ್ಪಿತವಲ್ಲ’!

By Kannadaprabha NewsFirst Published Jun 25, 2020, 8:18 AM IST
Highlights

ಅಪ್ರಾಪ್ತರ ಜತೆ ಒಪ್ಪಿತ ಸೆಕ್ಸ್‌ ‘ಒಪ್ಪಿತವಲ್ಲ’| 18 ವರ್ಷಕ್ಕಿಂತ ಕೆಳಗಿನವರ ಜತೆ ಸಮ್ಮತಿಯ ಸೆಕ್ಸ್‌ ನಡೆಸಿದರೂ ಜಾಮೀನಿಲ್ಲ|  ಹೈಕೋರ್ಟ್‌ ಮಹತ್ವದ ಆದೇಶ

ವೆಂಕಟೇಶ್‌ ಕಲಿಪಿ

ಬೆಂಗಳೂರು(ಜೂ.25): ಅಪ್ರಾಪ್ತೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದರೂ ಅದನ್ನು ಜಾಮೀನು ಮಂಜೂರಾತಿಗೆ ಪರಿಗಣಿಸಲು ಸಾಧ್ಯವಿಲ್ಲ ಹೈಕೋರ್ಟ್‌ ಆದೇಶಿಸಿದೆ.

ತಾನು ಪ್ರೀತಿಸಿದ 16 ವರ್ಷ 2 ತಿಂಗಳ ಅಪ್ರಾಪ್ತಳೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿರುವುದು ಅಪರಾಧ ಕೃತ್ಯವಲ್ಲ ಎಂಬುದಾಗಿ ಪರಿಗಣಿಸಿ ಜಾಮೀನು ನೀಡುವಂತೆ ಕೋರಿ ಆರೋಪಿ ಆರ್‌.ಕೃಷ್ಣ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿ ಈ ಆದೇಶ ನೀಡಿದೆ.

ಸೋಂಕು ತಡೆಯಲು ಸಚಿವರ ಮೆಗಾ ಪ್ಲಾನ್: ರಾಜ್ಯದ ರೆಡ್‌ ಲೈಟ್‌ ಏರಿಯಾಗೆ ಬೀಗ?

ಗಿರಿನಗರದ ಕಾಲೇಜು ಒಂದರಲ್ಲಿ ಮೊದಲ ಪಿ.ಯು. ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತಳು 2019ರ ನ.28ರಂದು ಪ್ರಿಯತಮ ಕೃಷ್ಣನ ತಿರುನೆಲ್ಲಿಯ (ಕೇರಳ) ಮನೆಗೆ ಹೋಗಿದ್ದಳು. ಆಕೆಯ ತಂದೆ 2019ರ ನ.29ರಂದು ಗಿರಿನಗರ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪೊಲೀಸರು ಬಾಲಕಿ ಮತ್ತು ಕೃಷ್ಣನನ್ನು (20) ಬಂಧಿಸಿ ಕರೆತಂದಿದ್ದರು. ಯುವಕನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ-2012ರ ಸೆಕ್ಷನ್‌ 5(1) ಮತ್ತು 6 ಅಡಿಯಲ್ಲಿ ಅಪ್ರಾಪ್ತಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣ ದಾಖಲಿಸಿದ್ದರು. ಜೈಲು ಪಾಲಾದ ಆತ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಅರ್ಜಿದಾರನ ಪರ ವಕೀಲರು, ಅರ್ಜಿದಾರ ಹಾಗೂ ಸಂತ್ರಸ್ತೆ ಪ್ರೀತಿಸುತ್ತಿದ್ದರು. ಸಂತ್ರಸ್ತೆಗೆ 16 ವರ್ಷ 2 ತಿಂಗಳು. ಆಕೆಯ ಜನ್ಮದಿನ ದೃಢೀಕರಿಸಲು, ಅತ್ಯಾಚಾರ ಹಾಗೂ ಅಪಹರಣ ಕೃತ್ಯ ನಡೆದಿರುವುದಕ್ಕೆ ಪೂರಕ ಸಾಕ್ಷ್ಯವಿಲ್ಲ. ವಿಚಾರಣಾ ನ್ಯಾಯಾಲಯದ ಮುಂದೆ ನೀಡಿರುವ ಸ್ವಯಂ ಹೇಳಿಕೆಯಲ್ಲೂ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆದಿದೆ ಎಂಬುದಾಗಿ ನುಡಿದಿಲ್ಲ. ಈಗಾಗಲೇ ದೋಷಾರೋಪ ಪಟ್ಟಿಸಲ್ಲಿಕೆಯಾಗಿದೆ. ಆರೋಪಿಯ ನ್ಯಾಯಾಂಗ ಬಂಧನದ ಅವಶ್ಯಕತೆ ಇಲ್ಲವಾಗಿದ್ದು, ಜಾಮೀನು ನೀಡಬೇಕೆಂದು ಕೋರಿದರು. ಇದನ್ನು ಸರ್ಕಾರಿ ಅಭಿಯೋಜಕರು ವಿರೋಧಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಂತ್ರಸ್ತೆ ವಯಸ್ಸು 16 ವರ್ಷ 2 ತಿಂಗಳು. ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒಳಗಾಗಿರುವುದಾಗಿ ಸಂತ್ರಸ್ತೆ ಸ್ವಯಂ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಲೈಂಗಿಕ ಅಪರಾಧ ಕೃತ್ಯಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-(ಪೋಕ್ಸೋ) 2012ರ ಸೆಕ್ಷನ್‌ 2(1)(ಡಿ) ವ್ಯಾಖ್ಯಾನಿಸುವ ‘ಮಾನಸಿಕ ವಯಸ್ಸು’ ಪರಿಕಲ್ಪನೆಯನ್ನು ನ್ಯಾಯಾಲಯ ನಿರ್ಧರಿಸಲಾಗುವುದಿಲ್ಲ. ಕಾಯ್ದೆಯ ಪ್ರಕಾರ ಮಗು ಎಂದರೆ 18 ವರ್ಷಕ್ಕಿಂತ ಕೆಳಗಿನವರು ಎಂದರ್ಥ. ಹೀಗಾಗಿ ಪ್ರಕರಣದಲ್ಲಿ ಸಂತ್ರಸ್ತೆಯು 16 ವರ್ಷ 2 ತಿಂಗಳು ಎಂದಿರುವಾಗ ಒಪ್ಪಿತ ಲೈಂಗಿಕ ಕ್ರಿಯೆ ವಿಚಾರವೇ ಉದ್ಭವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಸೀಮಂತದಿಂದ ಬಾದಾಮಿಯಲ್ಲಿ 12 ಮಂದಿಗೆ ಸೋಂಕು!

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ದೂರು ಹಾಗೂ ವೈದ್ಯಕೀಯ ವರದಿ ಪರಿಶೀಲಿಸಿದಾಗ ಸಂತ್ರಸ್ತೆ ಲೈಂಗಿಕ ಕ್ರಿಯೆಗೆ ಒಳಾಗಿದ್ದು, ಅದು ಈಚೆಗೆ ಸಂಭವಿಸಿರುವುದು ದೃಢಪಡುತ್ತದೆ. ಹೀಗಾಗಿ, ವಿಶೇಷವಾಗಿ ರೂಪಿಸಿದ ಪೋಕ್ಸೋ ಕಾಯ್ದೆಯ ಧ್ಯೇಯೋದ್ದೇಶ, ಅದರಲ್ಲಿ ಮಗು ಎಂದರೆ 18 ವರ್ಷ ಕೆಳಗಿರುವವರು ಎಂಬುದಾಗಿ ಉಲ್ಲೇಖಿಸಿರುವುದನ್ನು ಮುಂದಿಟ್ಟುಕೊಂಡು ಪರಿಶೀಲಿಸಿದರೆ 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಲೈಂಗಿಕ ಕ್ರಿಯೆಗೆ ಒಪ್ಪಿಗೆ ಸೂಚಿಸಿದರೂ ಅದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ಅರ್ಥೈಸಲಾಗುವುದಿಲ್ಲ. ಆದ್ದರಿಂದ, ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸು 16 ವರ್ಷ 2 ತಿಂಗಳ ಇರುವಂತಹ ಸಂದರ್ಭದಲ್ಲಿ ಜಾಮೀನು ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್‌, ಕೃಷ್ಣನ ಜಾಮೀನು ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಆದೇಶಿಸಿತು.

click me!