ಟ್ರಸ್ಟ್‌ವೆಲ್‌ ಆಸ್ಪತ್ರೆಯಲ್ಲಿ ಬ್ಲಾಕ್‌ ಫಂಗಸ್‌ ಚಿಕಿತ್ಸೆಗೆ ವಿಶೇಷ ಚಿಕಿತ್ಸಾ ವಿಭಾಗ

By Suvarna News  |  First Published May 11, 2021, 5:00 PM IST
  • ಎರಡನೇ ಅಲೆಯಲ್ಲಿ ಬೆಂಗಳೂರಿನಲ್ಲೂ ಡೆಡ್ಲಿ ಬ್ಲಾಕ್‌ ಫಂಗಸ್‌ ಅಟ್ಯಾಕ್‌ 
  • ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ 2 ವಾರದಲ್ಲಿ 38 ಸೊಂಕಿತರಿಗೆ ಚಿಕಿತ್ಸೆ
  • ಕೋವಿಡ್‌ ನಿಂದ ಗುಣಮುಖರಾದ ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುವ ಫಂಗಲ್‌ ಸೋಂಕು
  • ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಕಣ್ಣು, ಮೇಲ್ಡವಡೆ ಕಳೆದುಕೊಳ್ಳುವ ಭೀತಿ
  • ಕೆಲವೊಮ್ಮೆ ಸಾವೂ ಸಂಭವಿಸಬಹುದು
     

ಬೆಂಗಳೂರು(ಮೇ 11): ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವವರ ಮೇಲೆ ಡೆಡ್ಲಿ ಬ್ಲಾಕ್‌ ಫಂಗಸ್‌ - ಮ್ಯುಕೋರ್‌ಮಯೋಸಿಸ್ ಅಟ್ಯಾಕ್‌ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಹೆಚ್ಚಾಗಿ ಕಂಡುಬಂದಿದ್ದ ಈ ಫಂಗಸ್‌ ಸೋಂಕು ಈಗ ಬೆಂಗಳೂರಿನಲ್ಲೂ ಕೊರೋನಾ ಮಹಾಮಾರಿಯಿಂದ ಚೇತರಿಸಿಕೊಂಡಿರುವವರ ಮೇಲೆ ತನ್ನ ಪ್ರಭಾವ ತೋರಿಸುತ್ತಿದೆ. 

ಬೆಂಗಳೂರಿನಲ್ಲಿರುವ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ ಕಳೆದ 2 ವಾರಗಳಲ್ಲಿ 38 ಜನರಿಗೆ ಈ ಬ್ಲಾಕ್‌ ಫಂಗಸ್‌ ನ ಸೋಂಕಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ ಒಂದೇ ಆಸ್ಪತ್ರೆಯಲ್ಲಿ ಇಷ್ಟು ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಬಹುಶಃ ಇದು ಒಂದೇ ಆಸ್ಪತ್ರೆಯಲ್ಲಿ ಎಂದರೆ ತಪ್ಪಾಗಲಾರದು. 

Latest Videos

undefined

ಜೈನ ದೇವಾಲಯ ಈಗ ವ್ಯಾಕ್ಸಿನೇಷನ್ ಕೇಂದ್ರ..!

ಸೋಂಕಿತರಿಗೆ ವಿಶೇಷ ಕಾಳಜಿಯನ್ನು ಹಾಗೂ ಆರೈಕೆಯನ್ನು ನೀಡುವ ಉದ್ದೇಶದಿಂದ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿದೆ. ಕರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಸಂಧರ್ಭದಲ್ಲಿ ಸ್ಟಿರಾಯ್ಡ್‌ನ ಬಳಕೆ ಮಾಡಲಾಗುತ್ತಿದೆ. ಇದು ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದರೆ, ಹೆಚ್ಚು ಮಧುಮೇಹ ಹೊಂದಿರುವ ರೋಗಿಗಳಲ್ಲಿ ಸ್ಟಿರಾಯ್ಡ್‌ ಬಳಕೆಯಿಂದ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಫಂಗಲ್‌ ಬೆಳವಣಿಗೆ ಹೆಚ್ಚಾಗುತ್ತದೆ. ಅಲ್ಲದೆ, ಕೆಲವು ಸಂಧರ್ಭಗಳಲ್ಲಿ ಸ್ಟಿರಾಯ್ಡ್‌ ಹಾಗೂ ಹೆಚ್ಚು ಶಕ್ತಿಯ ಆಂಟಿಬಯಾಟಿಕ್‌ಗಳನ್ನು ನೀಡಲಾಗುತ್ತಿದೆ. ಇದರ ದುಷ್ಪರಿಣಾಮದಿಂದಾಗಿ ಕೆಲವು ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆಗ, ಈ ಬ್ಲಾಕ್‌ ಫಂಗಸ್‌ ಅಥವಾ ಮ್ಯುಕೋರ್‌ಮಯೋಸಿಸ್ ಆಕ್ರಮಣ ಮಾಡಿ ಹಲವಾರು ತೊಂದರೆಗಳಿಗೆ ರೋಗಿಗಳನ್ನು ಸಿಲುಕಿಸುತ್ತದೆ. 

ಕೊರೋನಾ ಗೆದ್ದವರ ಮೇಲೆ ಈಗ ಡೆಡ್ಲಿ ಬ್ಲ್ಯಾಕ್ ಫಂಗಸ್ ಅಟ್ಯಾಕ್!

ಟ್ರಸ್ಟ್‌ ವೆಲ್‌ ಆಸ್ಪತ್ರೆಯ ಮ್ಯುಕೋರ್‌ಮಯೋಸಿಸ್ ವಿಶೇಷ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿರುವ ಡಾ. ದೀಪಕ್‌ ಹಲ್ದೀಪುರ್‌ ಮಾತನಾಡಿ, ಕೋವಿಡ್‌ ಸಾಂಕ್ರಾಮಿಕ ರೋಗ ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಕರೋನಾ ಪ್ರಕರಣಗಳಲ್ಲಿ ಪ್ರಾಣ ಉಳಿಸುವ ಸ್ಟಿರಾಯ್ಡ್‌ಗಳನ್ನು ವೈದ್ಯರ ಸಲಹೆ ಇಲ್ಲದೆ ತಪ್ಪು ಬಳಕೆಯಿಂದ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿದ ಸಂಧರ್ಭದಲ್ಲಿ ಈ ಫಂಗಸ್‌ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆಕ್ಸಿಜನ್‌ ಹ್ಯೂಮಿಡಿಫೈರ್‌ ನಲ್ಲಿ ಬಳಸುವ ನೀರನ್ನು ಸ್ಟೆರಲೈಸ್‌ ಮಾಡದೇ ಇದ್ದ ಸಂಧರ್ಭದಲ್ಲೂ ಈ ಫಂಗಸ್‌ ರೋಗಿಗೆ ಬರುವ ಸಾಧ್ಯತೆ ಇರುತ್ತದೆ. 

ಡಬಲ್ ಮಾಸ್ಕ್ ಧರಿಸುವುದು..ಸತ್ಯ-ಮಿಥ್ಯಗಳನ್ನು ತಿಳಿದುಕೊಳ್ಳಿ

ಕೋವಿಡ್‌ ಸೋಂಕಿನಿಂದ ಗುಣುಮುಖರಾದ ಮೇಲೂ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
1.    ಮುಖದ ಒಂದೇ ಭಾಗದಲ್ಲಿ ನೋವು ಕಂಡುಬಂದರೆ
2.    ಕಣ್ಣುಗಳಲ್ಲಿ ಊತ/ನೋವು ಕಂಡುಬಂದರೆ
3.    ಮೂಗಿನಲ್ಲಿ ಗಾಳಿಯಾಡದಿರುವಿಕೆ
4.    ಮೂಗಿನಲ್ಲಿ ರಕ್ತ ಸೋರಿಕೆ
5.    ಹಲ್ಲುಗಳು ಸಡಿಲಗೊಳ್ಳುವುದು
6.    ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಅಥವಾ ಕಂದುಬಣ್ಣದ ಕಂಡುಬಂದರೆ
7.    ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಕಂಡುಬಂದರೆ 

ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗೂ ಬ್ಯಾಕ್‌ ಫಂಗಸ್‌ ಅಥವಾ ಮ್ಯುಕೋರ್‌ಮಯೋಸಿಸ್ ನ ಸೋಂಕು ಇಲ್ಲದೇ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯರಾದ ದೀಫಕ್‌ ಹಲ್ದೀಪುರ್‌ ತಿಳಿಸಿದರು. 

"

ಡಾ ಹೆಚ್‌.ವಿ ಮಧುಸೂಧನ್‌ ಮಾತನಾಡಿ, ಕಳೆದ ಎರಡು ವಾರದಲ್ಲಿ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಬ್ಯಾಕ್‌ ಫಂಗಸ್‌ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದೊಂದು ಸೈಲೆಂಟ್‌ ಕಿಲ್ಲರ್‌ ಸೋಂಕು ಆಗಿದ್ದು, ಕರೋನಾ ಮೊದಲ ಅಲೆಯಲ್ಲಿ ಕೇವಲ 33 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೆವು. ಆದರೆ, ಈ ಬಾರಿ ಕೇವಲ 2 ವಾರದಲ್ಲಿ 38 ಜನರಿಗೆ ಸೋಂಕು ತಗುಲಿರುವುದು ಬಹಳ ಆತಂಕಕಾರಿ ವಿಷಯವಾಗಿದೆ. ಕರೋಆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದವರು ಅದರಲ್ಲೂ ಮಧುಮೇಹ ರೋಗದಿಂದ ಬಳುತ್ತಿರುವವರು ಬಹಳ ಹುಷಾರಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು. 

ವಿಶೇಷ ಚಿಕಿತ್ಸಾ ವಿಭಾಗ:

ಈ ಫಂಗಸ್‌ ಸೋಂಕು ಬಹು ಬೇಗ ಬೇರೆಯವರಿಗೆ ಹರಡುತ್ತದೆ. ಅದರಲ್ಲೂ ಇದಕ್ಕೆ ಚಿಕಿತ್ಸೆ ನೀಡುವ ವೈದ್ಯರಿಗೂ ಸೋಂಕಿನ ಭೀತಿ ತಪ್ಪಿದ್ದಲ್ಲ. ಆದ್ದರಿಂದ ಇದರ ಚಿಕಿತ್ಸೆಗಾಗಿ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ರಚಿಸಲಾಗಿದೆ. ಈ ತಂಡದಲ್ಲಿ ಇಎನ್‌ಟಿ ವಿಭಾಗದ ನಿರ್ದೇಶಕರಾದ ಡಾ ದೀಪಕ್‌ ಹಲ್ದೀಪುರ್‌, ನ್ಯೂರಸೈನ್ಸಸ್‌ ವಿಭಾಗದ ನಿರ್ದೇಶಕರಾದ ಡಾ. ಹೆಚ್‌. ವಿ ಮಧುಸೂಧನ್‌, ಮ್ಯಾಕ್ಸಿಲಲೋಫೇಶಿಯಲ್‌ ತಜ್ಞರಾದ ಡಾ ಆದಿತ್ಯಾ ಮೂರ್ತಿ, ಕಣ್ಣಿನ ತಜ್ಞರಾದ ಡಾ ಪ್ರೀತಿ ಕಾಳೆ ಇದ್ದಾರೆ. ಇದುವರೆಗೂ 24 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. 

ಯಾರಿಗೆ ಆಕ್ಸಿಜನ್ ಬೆಡ್ ಬೇಕಾಗುತ್ತದೆ? ಲೆವಲ್ ಚೆಕ್ ಮಾಡಿಕೊಳ್ಳುವ ಸರಿಯಾದ ಕ್ರಮ

ಈ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯತೆ ಹೆಚ್ಚಾಗಿದೆ. ಮೇಲ್ಕಂಡ ಲಕ್ಷಣಗಳು ಕಂಡು ಬಂದಲ್ಲಿ ತಡಮಾಡದೇ ವೈದ್ಯರನ್ನು ಸಂಫರ್ಕಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!