13 ವರ್ಷ ಹಿಂದೆ ಲಂಚ ಪಡೆದಿದವಗೆ ಈಗ 2 ವರ್ಷ ಶಿಕ್ಷೆ

By Kannadaprabha NewsFirst Published Oct 13, 2021, 8:10 AM IST
Highlights

*   ಕೊಪ್ಪಳ ಜಿಪಂ ಕಚೇರಿ ಗುಮಾಸ್ತನಿಗೆ ಶಿಕ್ಷೆ ಜತೆಗೆ 10 ಸಾವಿರ ರು. ದಂಡ
*   ಅಧೀನ ಕೋರ್ಟಲ್ಲಿ ಖುಲಾಸೆ ಆದವಗೆ ಶಿಕ್ಷೆ ಕೊಡಿಸಲು ಲೋಕಾಯುಕ್ತ ಯಶಸ್ವಿ
*   ಅಕ್ಷರ ದಾಸೋಹದ ಕಾರಿಗೆ ಬಾಡಿಗೆ ಹಣ ನೀಡಲು 1000 ರು. ಲಂಚ ಪಡೆದಿದ್ದ ಕ್ಲರ್ಕ್
 

ವೆಂಕಟೇಶ್‌ ಕಲಿಪಿ

ಬೆಂಗಳೂರು(ಅ.13):  ಅಕ್ಷರ ದಾಸೋಹ ಕಾರ್ಯಕ್ರಮಕ್ಕಾಗಿ ಬಳಸಿಕೊಂಡ ಕಾರಿಗೆ ಪಾವತಿಸಬೇಕಾದ ಬಾಡಿಗೆ ಹಣದ ಚೆಕ್‌ ವಿತರಿಸಲು 1000 ರು. ಲಂಚ(Bribe) ಪಡೆಯುವ ವೇಳೆ ಲೋಕಾಯುಕ್ತ(Lokayukta) ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕೊಪ್ಪಳ(Koppal) ಜಿಲ್ಲಾ ಪಂಚಾಯಿತಿ ಕಚೇರಿ ಗುಮಾಸ್ತನಿಗೆ 13 ವರ್ಷದ ವಿಚಾರಣೆ ನಂತರ ಹೈಕೋರ್ಟ್‌(High Court) ಎರಡು ವರ್ಷ ಜೈಲು(Jail) ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.

ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದರೂ ಅಧೀನ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಗೆ, ಲೋಕಾಯುಕ್ತ ಪೊಲೀಸರು(Police) ಹೈಕೋರ್ಟ್‌ನಲ್ಲಿ ಒಂಬತ್ತು ವರ್ಷ ಕಾಲ ಸುಧೀರ್ಘವಾಗಿ ಕಾನೂನು ಹೋರಾಟ ನಡೆಸಿ ಶಿಕ್ಷೆ(Punishment) ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಲಂಚ ಸ್ವೀಕರಿಸಿ ಭ್ರಷ್ಟಾಚಾರ(Corruption) ಎಸಗಿದ ಕೃತ್ಯವು ಅಗತ್ಯ ಸಾಕ್ಷ್ಯಧಾರಗಳ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಹಣಕಾಸು ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಎಸ್‌.ನಿರುಪಡಿಗೆ, ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ನ್ಯಾಯಪೀಠ ಜೈಲು ಶಿಕ್ಷೆ ವಿಧಿಸಿದೆ.

ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ..  ಪಾಪಿ ಪತಿಗೆ 82 ದಿನದಲ್ಲೇ ಶಿಕ್ಷೆ!

ಖುಲಾಸೆ ಮಾಡಿದ್ದಕ್ಕೆ ಕಿಡಿ:

ಒಂದು ಸಾವಿರ ರು. ಲಂಚ ಸ್ವೀಕರಿಸುವ ವೇಳೆ ನಿರುಪಡಿ, ಲೋಕಾಯುಕ್ತ ಪೊಲೀಸರಿಗೆ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ. ಲಂಚ ಪಡೆದ ಹಣವನ್ನು ಆರೋಪಿಯ ಜೇಬಿನಿಂದಲೇ ವಶಕ್ಕೆ ಪಡೆಯಲಾಗಿದೆ. ಆರೋಪಿಯ ಕೈ ಮತ್ತು ಶರ್ಟ್‌ ಜೇಬನ್ನು ತೊಳೆದಾಗ ‘ಫೀನಾಲ್ಪಥಲೈನ್‌ ಪರೀಕ್ಷೆ’ ಪಾಸಿಟಿವ್‌ ಬಂದಿದೆ. ಲಂಚ ಸ್ವೀಕರಿಸಿರುವುದಕ್ಕೆ ಇಬ್ಬರು ಶ್ಯಾಡೊ ಸಾಕ್ಷಿಗಳಿದ್ದಾರೆ. ಆದರೂ ಅಧೀನ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿರುವುದು ಅಕ್ರಮ ಎಂದು ಹೈಕೋರ್ಟ್‌ ಕಟುವಾಗಿ ಆಕ್ಷೇಪಿಸಿದೆ. ಅಲ್ಲದೆ, ಆರೋಪಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ರು. ದಂಡ ವಿಧಿಸಿತು. ದಂಡ ಪಾವತಿಸುವಲ್ಲಿ ವಿಫಲವಾದರೆ ಮತ್ತೆ 6 ತಿಂಗಳು ಸಾಧಾರಣಾ ಜೈಲು ಅನುಭವಿಸಬೇಕು ಎಂದು ಆದೇಶದಲ್ಲಿ(Verdict) ಹೇಳಿದೆ.

ಪ್ರಕರಣವೇನು?:

ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಬಳಸಲು ಕೊಪ್ಪಳ ಜಿಲ್ಲಾ ಪಂಚಾಯತಿ, 2008ರ ಜೂನ್‌ ಮತ್ತು ಜುಲೈನಲ್ಲಿ ಕಾರೊಂದನ್ನು ಬಾಡಿಗೆಗೆ ಪಡೆದಿತ್ತು. ಈ ಎರಡು ತಿಂಗಳಿಗೂ ತಲಾ 15,250 ರು. ಪಾವತಿಸಬೇಕಿತ್ತು. ಆದರೆ, ಚೆಕ್‌ ವಿತರಿಸಲು 10 ಸಾವಿರ ರು. ಲಂಚ ನೀಡುವಂತೆ ಪಂಚಾಯತಿ ಹಣಕಾಸು ವಿಭಾಗದ ಕ್ಲರ್ಕ್ ನಿರುಪಡಿ ಬೇಡಿಕೆಯಿಟ್ಟಿದ್ದರು.

ಅದಕ್ಕೆ ಕಾರಿಗೆ ಡೀಸೆಲ್‌ ಹಾಕಿಸಲೂ ಹಣವಿಲ್ಲ. ಒಂದು ತಿಂಗಳ ಚೆಕ್‌ ವಿತರಿಸಿ; ಬ್ಯಾಂಕಿನಿಂದ ಹಣ ಪಡೆದು ನೀಡಿದ ಬಳಿಕ ಎರಡನೇ ಚೆಕ್‌ ನೀಡಿ ಎಂದು ಕಾರು ಮಾಲೀಕ ಭರವಸೆ ನೀಡಿದ್ದರು. ಅದಕ್ಕೆ ಒಪ್ಪಿದ್ದ ಕ್ಲರ್ಕ್, 2008ರ ಜೂನ್‌ ತಿಂಗಳ ಚೆಕ್‌ ವಿತರಿಸಿದ್ದರು. ನಂತರ ಎರಡನೇ ಚೆಕ್‌ ವಿತರಣೆಗೆ ಕಾರು ಮಾಲೀಕ ಮಾಡಿದ ಮನವಿ ತಿರಸ್ಕರಿಸಿದ್ದ ಕ್ಲರ್ಕ್, ಒಂದು ಸಾವಿರ ಹಣ ನೀಡಿದರೆ ಮಾತ್ರ ಚೆಕ್‌ ನೀಡುವುದಾಗಿ ಬೇಡಿಕೆಯಿಟ್ಟಿದ್ದರು.

ವಿಕೃತ ಕಾಮಿಗೆ ಕನಿಕರ ಬೇಡ, ಉಮೇಶ್‌ ರೆಡ್ಡಿ ಈಗಲೇ ಗಲ್ಲಿಗೇರಿಸಿ: ಸಂತ್ರಸ್ತೆ ಪುತ್ರ

ಇದರಿಂದ ಕಾರು ಮಾಲೀಕ ಕೊಪ್ಪಳ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ದೂರು ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಕಾರು ಮಾಲೀಕರಿಂದ 500 ರು. ಮುಖಬೆಲೆಯ ಒಂದು ನೋಟು ಹಾಗೂ 100 ರು. ಮುಖಬೆಲೆಯ ಐದು ನೋಟುಗಳನ್ನು ಪಡೆದು ಇಬ್ಬರ ಸಾಕ್ಷಿಗಳ ಮುಂದೆ ಮಹಜರು ಹಾಗೂ ಪಂಚನಾಮೆ ಮಾಡಿ, ಫೀನಾಲ್ಪಥಲೈನ್‌ ಹಾಕಿದ್ದರು. ಇದು ಸೋಡಿಯಂ ಕಾರ್ಬೋರೇಟ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಗುಲಾಬಿ ಬಣ್ಣಕ್ಕೆ ತಿರುತ್ತದೆ. ನಂತರ ಈ ನೋಟುಗಳನ್ನು ಕಾರು ಮಾಲೀಕರಿಗೆ ಹಿಂದಿರುಗಿಸಿ, ಕ್ಲರ್ಕ್ಗೆ ನೀಡಲು ಸೂಚಿಸಿದ್ದರು.

ಅದರಂತೆ 2008ರ ಆ.25ರಂದು ಕಾರು ಮಾಲೀಕರು ಚೆಕ್‌ ನೀಡಲು ಕೇಳಿದಾಗ ಕ್ಲರ್ಕ್ ಮತ್ತೆ ಹಣ ಬೇಡಿಕೆಯಿಟ್ಟಿದ್ದರು. ಆಗ ಕಾರು ಮಾಲೀಕ ನೀಡಿದ್ದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕ್ಲರ್ಕ್ನನ್ನು ಪ್ರತ್ಯಕ್ಷವಾಗಿ ಹಿಡಿದಿದ್ದರು. 2012ರಲ್ಲಿ ಕೊಪ್ಪಳ ಲೋಕಾಯುಕ್ತ ನ್ಯಾಯಾಲಯ ಪ್ರಕರಣದಿಂದ ಕ್ಲರ್ಕ್ ನಿರುಪಡಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ಅದೇ ವರ್ಷ ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
 

click me!