ಡಿಕೆಶಿ ಪ್ರಚಾರದ ಹೊಣೆ ಹೊತ್ತಿರುವ ಡಿಸೈನ್‌ ಬಾಕ್ಸ್‌ ಕಂಪನಿಗೆ ಐಟಿ ಶಾಕ್‌!

By Kannadaprabha NewsFirst Published Oct 13, 2021, 7:57 AM IST
Highlights

* ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರು ಸೇರಿ ವಿವಿಧೆಡೆ ಪರಿಶೀಲನೆ

* ಬ್ಯಾಂಕ್‌ ಖಾತೆ, ವ್ಯವಹಾರ ಶೋಧ ಲ್ಯಾಪ್ಟಾಪ್‌, ಹಾರ್ಡ್‌ಡಿಸ್ಕ್‌ ವಶಕ್ಕೆ

ಬೆಂಗಳೂರು(ಅ.13): ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ್‌(DK Shivakumar) ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳ ಪ್ರಚಾರದ ಹೊಣೆ ಹೊತ್ತಿರುವ ಹಾಗೂ ಸಾಮಾಜಿಕ ಜಾಲತಾಣಗಳನ್ನು(Social Media) ನಿರ್ವಹಿಸುತ್ತಿರುವ ಡಿಸೈನ್‌ ಬಾಕ್ಸ್‌ ಕಂಪನಿಯ(Design Box Company) ಕಚೇರಿಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇರೆಗೆ ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿವರೆಗೆ ಬೆಂಗಳೂರಿನ ಕಾವೇರಿ ಜಂಕ್ಷನ್‌(Cauvery Junction) ಬಳಿ ಇರುವ ಬಹುಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ಡಿಸೈನ್‌ ಬಾಕ್ಸ್‌ ಕಚೇರಿ, ಕಂಪನಿಯ ಮಾಲಿಕ ನರೇಶ್‌ ಅರೋರಾ(Naresh Arora) ವಾಸ್ತವ್ಯ ಹೂಡಿರುವ ಜೆ.ಡಬ್ಲ್ಯು.ಮ್ಯಾರಿಯೇಟ್‌ ಹೋಟೆಲ್‌ನಲ್ಲಿನ ಕೊಠಡಿಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

Latest Videos

ಬೆಂಗಳೂರು ಸೇರಿದಂತೆ ದೆಹಲಿ(Delhi), ಪಂಜಾಬ್‌(Punjab) ಹಾಗೂ ವಿವಿಧೆಡೆ ಸಂಸ್ಥೆ ಹೊಂದಿರುವ ಕಚೇರಿಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿ ವೇಳೆ ನರೇಶ್‌ ಅವರ ಬ್ಯಾಂಕ್‌ ಖಾತೆ, ವ್ಯವಹಾರದ ವಹಿವಾಟುಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಕಂಪನಿಯ ವ್ಯವಹಾರಗಳನ್ನೊಳಗೊಂಡಿರುವ ಲ್ಯಾಪ್‌ಟಾಪ್‌(Laptop), ಹಾರ್ಡ್‌ಡಿಸ್ಕ್‌ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತೆರಿಗೆ ಪಾವತಿಸದಿರುವ ಕುರಿತು ಲಭ್ಯವಾದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಲವು ತಿಂಗಳುಗಳಿಂದ ಐಟಿ ಅಧಿಕಾರಿಗಳು ಸಂಸ್ಥೆಯ ವ್ಯವಹಾರದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ತೆರಿಗೆ ವಂಚನೆ ಮಾಡಿರುವ ಕುರಿತು ನಿಖರವಾದ ಮಾಹಿತಿ ಪಡೆದ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ರಾಜಸ್ಥಾನ(Rajasthan), ಛತ್ತೀಸ್‌ಗಢ ರಾಜ್ಯದ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಡಿಸೈನ್‌ ಬಾಕ್ಸ್‌ ಅಭಿಯಾನ ನಡೆಸಿತ್ತು. ರಾಜಕಾರಣಿಗಳ ಬ್ರಾಂಡಿಂಗ್‌ ಸೇವೆಯನ್ನು ಸಹ ಈ ಕಂಪನಿ ಒದಗಿಸುತ್ತದೆ. ಕಂಪ​ನಿಯು ಎಲ್ಲಾ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷದ ಮುಖಂಡರ ಪರವಾಗಿ ತುಸು ಹೆಚ್ಚಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

ನನಗೆ ಸಹಾಯ ಮಾಡುತ್ತಿದ್ದರು

ಡಿಸೈನ್‌ ಬಾಕ್ಸ್‌ ಏಜೆನ್ಸಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ನನ್ನ ಸಾಮಾಜಿಕ ಜಾಲತಾಣವನ್ನು ಏಜೆನ್ಸಿಯವರು ನಿರ್ವಹಿಸುತ್ತಿರಲಿಲ್ಲ, ಸಹಾಯ ಮಾಡುತ್ತಿದ್ದರು. ಐಟಿ ಅಧಿಕಾರಿಗಳಿಗೆ ಯಾವ ಉತ್ತರ ಕೊಡಬೇಕೋ ಅದನ್ನು ಏಜೆನ್ಸಿಯವರು ಕೊಡುತ್ತಾರೆ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಡಿಕೆಶಿಗೆ ಮತ್ತೊಂದು ಶಾಕ್‌?

ಈಗಾಗಲೇ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತೆ ಐಟಿ ವಿಚಾರಣೆ ಎದುರಾಗುವ ಸಾಧ್ಯತೆ ಇದ್ದು, ಡಿಸೈನ್‌ ಬಾಕ್ಸ್‌ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಹೂಡಿಕೆ ಮಾಡಿರುವ ಅನುಮಾನ ಐಟಿ ಇಲಾಖೆಗೆ ಇದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಭಾವಿಗಳ ನಂಟು

ಡಿಸೈನ್‌ ಬಾಕ್ಸ್‌ ಕಂಪನಿ ಹಲವು ಪ್ರಭಾವಿ ರಾಜಕಾರಣಿಗಳ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದೆ. ಹಲವು ಚುನಾವಣೆಗಳಲ್ಲೂ ಪ್ರಚಾರದ ಸೇವೆ ಒದಗಿಸಿದೆ. ಕಂಪನಿಯ ಮಾಲಿಕ ನರೇಶ್‌ ಅರೋರಾ ಅವರು ರಾಜಕಾರಣಿಗಳಿಗೆ ಬ್ರ್ಯಾಂಡಿಂಗ್‌ ಸೇವೆಯನ್ನೂ ಒದಗಿಸುತ್ತಾರೆ.

click me!