Whatsappನಲ್ಲಿ ಉತ್ತರ ಕಳುಹಿಸಿ KEA, FDA ಪರೀಕ್ಷಾ ಅಕ್ರಮ?

By Kannadaprabha NewsFirst Published Nov 4, 2023, 9:37 AM IST
Highlights

ಯಾದಗಿರಿಯಲ್ಲಿನ ಅಭ್ಯರ್ಥಿಗಳಿಗೆ ಹುಬ್ಬಳ್ಳಿ ವಿಳಾಸದ  ಮೊಬೈಲ್ ಮೂಲಕ ಉತ್ತರಗಳು ರವಾನೆಯಾಗುತ್ತಿದ್ದವು ಅನ್ನೋ ಅಂಶಗಳು ಒಂದೊಂದಾಗಿ ತನಿಖೆಯ ವೇಳೆ ಹೊರಬೀಳುತ್ತಿವೆ. 

ಆನಂದ್ ಎಂ. ಸೌದಿ

ಯಾದಗಿರಿ (ನ.04): ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಎಫ್‌ಡಿಎ  ಹುದ್ದೆಗಳ ನೇಮ ಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮ ಬಯಲಾದ ಬೆನ್ನಲ್ಲೇ ಇದೀಗ, ಹುಬ್ಬಳ್ಳಿಯಿಂದ ಯಾದಗಿರಿಯಲ್ಲಿರುವ ಮಧ್ಯವರ್ತಿಗೆ  ವಾಟ್ಸಪ್‌ನಲ್ಲಿ ಉತ್ತರಗಳನ್ನು ಕಳುಹಿಸಿ, ನಂತರ ಡಿಲೀಟ್ ಮಾಡಲಾಗುತ್ತಿತ್ತು ಎಂಬ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ‘ಕನ್ನಡಪ್ರಭ’ಕ್ಕೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದಿರುವ ಪ್ರಕಾರ, ಪರೀಕ್ಷಾ ಕೇಂದ್ರ ದೊಳಗಿರುವ ಅಭ್ಯರ್ಥಿಗೆ ಪರೀಕ್ಷಾ ಕೇಂದ್ರದ ಹೊರಗಿ ನಿಂದಲೇ ಉತ್ತರ ಹೇಳುತ್ತಿದ್ದ ಆರೋಪಿಗಳ ಮೊಬೈಲ್ಗೆ ವಾಟ್ಸಪ್ ಮೂಲಕ ಉತ್ತರಗಳು ಹಂಚಿಕೆ ಮಾಡಿ, ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. 

Latest Videos

ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಂಡ ಖಾಕಿಪಡೆ ಇವುಗಳ ಪರಿಶೀಲನೆ ನಡೆ ಸಿದಾಗ, ಆರೋಪಿಗಳಲ್ಲೊಬ್ಬನ ಮೊಬೈಲ್‌ನಲ್ಲಿ ‘ಬಾಸ್’ ಹೆಸರಿನಲ್ಲಿ ಸೇವ್ ಆಗಿದ್ದ ಸಂಖ್ಯೆಯಿಂದ ಈ ಉತ್ತರಗಳು ಬಂದಿವೆ. ಈ  ಸಂಖ್ಯೆ ಹುಬ್ಬಳ್ಳಿಯ ವಿಳಾಸ ಹೊಂದಿದೆ ಎಂದು ಹೇಳಲಾಗಿದೆ. ಬೆಳಗ್ಗೆ ೧೧.೧೦ರಿಂದ ಮಧ್ಯಾಹ್ನ ೧೨.೦೯ರವರೆಗೂ ಉತ್ತರಗಳು ಹಂಚಿಕೆಯಾಗಿ, ಡಿಲೀಟ್ ಮಾಡಲಾಗಿದೆ. ೧೧.೫೬ರ ಸುಮಾರಿಗೆ ‘ಮತ್ತ ಆನ್ಸರ್ ಬಿಡ್ತಾರೇನ್ರಿ..’ ಎನ್ನುವ ಮೆಸೇಜೊಂದು ‘ಬಾಸ್’ ಹೆಸರಿನ ವ್ಯಕ್ತಿಗೆ ಆರೋಪಿ ಕಳುಹಿಸಿದ್ದು ಪತ್ತೆಯಾಗಿದೆ. 

ಸಿದ್ದು 5 ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣ

ಎಫ್‌ಡಿಎ ನೇಮಕಾತಿ ಪರೀಕ್ಷೆಯಲ್ಲಿ  ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು  ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)  ಕಾರ್ಯನಿರ್ವಾಹಕ ನಿರ್ದೇಶಕಿ (ಎಂ.ಡಿ.) ಎಸ್.ರಮ್ಯಾ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಕಲಬುರಗಿ ಮತ್ತು ಯಾದಗಿರಿಯಲ್ಲಿ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಬಯಲಾದ ಬ್ಲೂಟೂತ್  ಅಕ್ರಮಕ್ಕೆ ಸಂಬಂಧಿಸಿ ಈಗಾಗಲೇ ೨೬ ಮಂದಿಯನ್ನು ಬಂಧಿಸಲಾಗಿದೆ. ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಹಾಗೂ ಈ ಪರೀಕ್ಷೆಯ ಅಕ್ರಮದಲ್ಲೂ ಪ್ರಮುಖ ಆರೋಪಿಯಾಗಿರುವ ಆರ್.ಡಿ.ಪಾಟೀಲ್ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಓಎಂಆರ್ ಅಕ್ರಮವೂ ತನಿಖೆ ಆಗಲಿ: ಮಾಲೀಪಾಟೀಲ್: ನಿಗಮ-ಮಂಡಳಿಗಳ  ಎಸ್‌ಡಿಎ ಪರೀಕ್ಷೆಯಲ್ಲಿ ಓಎಂಆರ್ ಶೀಟ್ಗಳಿಗೆ ಸಂಬಂಧಿಸಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆಇಎ ಎಂಡಿ ಎಸ್.ರಮ್ಯಾ ಹೇಳಿಕೊಂಡಿದ್ದಾರೆ. ಆದರೆ, ಹುಬ್ಬಳ್ಳಿಯ ಕೇಂದ್ರವೊಂದರಿಂದ ಕಂಡುಬಂದ ಖಾಲಿಬಿಟ್ಟ ಮೂಲ ಓಎಂಆರ್, ಹಾಲ್ ಟಿಕೆಟ್ ಹಾಗೂ ಪ್ರಶ್ನೆಪತ್ರಿಕೆ ಬಗ್ಗೆ ತನಿಖೆ ಆಗಬೇಕು ಎಂದು ಪರೀಕ್ಷಾರ್ಥಿಗಳ ಹೋರಾಟ ಸಂಘದ ಮುಖಂಡ ರವಿಶಂಕರ್ ಮಾಲೀಪಾಟೀಲ್ ‘ಕನ್ನಡಪ್ರಭ’ದ ಮೂಲಕ ಆಗ್ರಹಿಸಿದ್ದಾರೆ. 

ಈ ಹಿಂದೆಯೂ, ಪಿಎಸ್‌ಐ ಅಕ್ರಮದಲ್ಲಿ ಕೇವಲ ಬ್ಲೂಟೂತ್ ಬಿಟ್ಟರೆ ಮತ್ಯಾವುದೇ  ರೀತಿಯ ಅಕ್ರಮ ನಡೆದಿಲ್ಲ ಎಂದೇ ಹೇಳುತ್ತಿದ್ದಅಂದಿನ ಬಿಜೆಪಿ ಸರ್ಕಾರ, ಕೊನೆಗೆ ಓಎಂಆರ್ ಶೀಟ್ ತಿರುಚುವಿಕೆಯನ್ನೂ ಒಪ್ಪಿಕೊಂಡು, ಸಿಐಡಿ ತನಿಖೆಗೆ ಆದೇಶಿಸಿತ್ತು ಎಂಬುದನ್ನು ರವಿ  ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.ಕೇವಲ ಕಲಬುರಗಿ ಹಾಗೂ ಯಾದಗಿರಿ ಯಲ್ಲಿ ಅಷ್ಟೇ ಅಲ್ಲ ಹುಬ್ಬಳ್ಳಿ, ಶಿವಮೊಗ್ಗ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಪ್ರಶ್ನೆಗಳು ಸೋರಿಕೆ ಆಗಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಲವಾದ ಶಂಕೆಗಳು  ತನಿಖೆ ವೇಳೆ ಕಂಡುಬರುತ್ತಿವೆ ಎಂದು ಪೊಲೀಸ್  ಮೂಲಗಳು ತಿಳಿಸಿವೆ.

ಯಾದಗಿರಿಯಲ್ಲಿನ ಅಭ್ಯರ್ಥಿಗಳಿಗೆ ಹುಬ್ಬಳ್ಳಿ ವಿಳಾಸದ  ಮೊಬೈಲ್ ಮೂಲಕ ಉತ್ತರಗಳು ರವಾನೆಯಾಗುತ್ತಿದ್ದವು ಅನ್ನೋ ಅಂಶಗಳು ಒಂದೊಂದಾಗಿ ತನಿಖೆಯ ವೇಳೆ ಹೊರಬೀಳುತ್ತಿವೆ.  FDA ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಈ  ಆರೋಪಗಳಿಗೆ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದರು.

ಬಹಿಷ್ಕಾರದಿಂದ ಬಳಲುತ್ತಿರುವ ಕಾಡಸಿದ್ದರು: ಆಧುನಿಕತೆಯಲ್ಲಿಯೂ ಇದೆಂಥಾ ಅವ್ಯವಸ್ಥೆ!

ಕನ್ನಡಪ್ರಭ ದ ಮುಖಪುಟದಲ್ಲಿಂದು (ನ.4) ಪ್ರಕಟಗೊಂಡ ವಿಶೇಷ ವರದಿಯು ಅಕ್ರಮಗಳ ಒಂದೊಂದು ಕರಾಳಮುಖಗಳ ಬಯಲಿಗೆಳೆಯುವ ಪ್ರಯತ್ನವಾಗಿದೆ. ಇನ್ನು, ಪಿಎಸೈ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಿದಂತೆ,  ಮೊನ್ನೆಯ FDA ಅಕ್ರಮದ ತನಿಖೆಯನ್ನೂ ಇಂತಹ ತನಿಖಾ ಸಂಸ್ಥೆಗಳಿಗೆ ಒಪ್ಪಿಸಿದರೆ ಇದರಾಳ ತಿಳಿಯಬಹುದು ಎನ್ನುವ ಅಭಿಮತಗಳು ವ್ಯಕ್ತವಾಗುತ್ತಿವೆ.  ಈ ಮಧ್ಯೆ, ಇವತ್ತು  (ನ .4) ಮತ್ತು ನಾಳೆ (ನ .5) ಕೆಪಿಎಸ್ಸಿ ವತಿಯಿಂದ ನಡೆಯುವ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳು ನುಸುಳದಂತೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಮೊನ್ನೆಯ ಅಕ್ರಮದ ಎಫೆಕ್ಟ್ ಇದು. 

click me!