SC/ST Reservation ; ಎಸ್ಸಿ-ಎಸ್ಟಿಮೀಸಲು ಹೆಚ್ಚಳಕ್ಕೆ ಪರಿಷತ್ತಲ್ಲೂ ಅಸ್ತು

By Kannadaprabha NewsFirst Published Dec 28, 2022, 1:36 AM IST
Highlights
  • ಎಸ್ಸಿ-ಎಸ್ಟಿಮೀಸಲು ಹೆಚ್ಚಳಕ್ಕೆ ಪರಿಷತ್ತಲ್ಲೂ ಅಸ್ತು
  • ಎಸ್ಸಿ ಮೀಸಲು ಶೇ.17ಕ್ಕೆ, ಎಸ್ಟಿಮೀಸಲು ಶೇ.7ಕ್ಕೆ ಹೆಚ್ಚಳ
  •  ಇನ್ನು ನಿರ್ಣಯ ಕೇಂದ್ರ ಸರ್ಕಾರ, ಸಂಸತ್ತಿಗೆ ರವಾನೆ

ವಿಧಾನ ಪರಿಷತ್‌ (ಡಿ.28) : ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ 2022’ ಅನ್ನು ವಿಧಾನ ಪರಿಷತ್‌ನಲ್ಲಿ ಸುದೀರ್ಘ ಚರ್ಚೆ ಬಳಿಕ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇನ್ನು ನಿರ್ಣಯವನ್ನು ಕೇಂದ್ರ ಸರ್ಕಾರ ಹಾಗೂ ಸಂಸತ್ತಿನ ಅನುಮೋದನೆಗೆ ಕಳಿಸಿಕೊಡಲಾಗುತ್ತದೆ. ಅಲ್ಲಿ ಒಪ್ಪಿಗೆ ದೊರೆತರೆ ಮೀಸಲು ಜಾರಿಗೆ ಬರಲಿದೆ.

ಮಂಗಳವಾರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(J.C.Madhuswamy) ಈ ವಿಧೇಯಕವನ್ನು ಮಂಡಿಸಿ ಮಾತನಾಡಿ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ(Reservation) ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ವಿಧೇಯಕ ತರಲಾಗಿದೆ. ನಾಗಮೋಹನ ದಾಸ್‌ ವರದಿ ಆಧರಿಸಿ ಪರಿಶಿಷ್ಟಜಾತಿಗೆ ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ವಿಧೇಯಕದ ಉದ್ದೇಶ ವಿವರಿಸಿದರು.

Assembly election: ಎಸ್‌ಸಿ ಎಸ್‌ಟಿ ಮೀಸಲಾತಿ ಏರಿಕೆಗೆ ಶೀರ್ಘರ ಕೇಂದ್ರದಿಂದಲೂ ಅನುಮತಿ: ಸಚಿವ ಶ್ರೀರಾಮುಲು

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad), ‘ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಚುನಾವಣೆಯ(Assembly election) ಹೊಸ್ತಿಲಲ್ಲಿ ತರಾತುರಿಯಲ್ಲಿ ವಿಧೇಯಕ ತರುವ ಅಗತ್ಯವೇನಿತ್ತು? ಸರ್ವಪಕ್ಷದ ಸಭೆ ಕರೆದು ವಿಶೇಷ ಅಧಿವೇಶನ ಕರೆದು ಈ ವಿಧೇಯಕದ ಬಗ್ಗೆ ಚರ್ಚಿಸಿ ಬಳಿಕ ಜಾರಿಗೆ ತರಹುದಿತ್ತು. ಆದರೆ, ಸುಗ್ರಿವಾಜ್ಞೆ ಮೂಲಕ ಈ ವಿಧೇಯಕ ಜಾರಿಗೆ ತರಲಾಗಿದೆ. ಆತುರದ ನಿರ್ಧಾರದ ಈ ವಿಧೇಯಕಕ್ಕೆ ಸಂವಿಧಾನ ರಕ್ಷಣೆ ಸಿಗುವುದಿಲ್ಲ. ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಸಂವಿಧಾನ ತಿದ್ದುಪಡಿ ಮಾಡಿ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಚುನಾವಣೆ ಲಾಭಕ್ಕಾಗಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ’ ಎಂದರು.

ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ: 25,000 ನೇಮಕಾತಿಗೆ ತಡೆ..!

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ‘ಸರ್ಕಾರ ಶೋಷಿತ ಸಮುದಾಯದ ಪರವಿದೆ. ಸಂವಿಧಾನದ 103ನೇ ತಿದ್ದುಪಡಿಯಲ್ಲಿ ಮೀಸಲಾತಿ ಶೇ.50 ಮೀರಲು ಅವಕಾಶವಿದೆ. ಇದನ್ನೇ ಬಳಸಿಕೊಂಡು ಹಾಗೂ ನಾಗಮೋಹನ ದಾಸ ವರದಿಗೆ ಸೀಮಿತವಾಗಿ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಇದನ್ನು ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರ ಬದ್ಧವಾಗಿದೆ. ಒಂದು ವೇಳೆ ಇದನ್ನು ನ್ಯಾಯಾಲಯ ನಿರಾಕರಿಸಿದರೆ ಮುಂದಿನ ತೀರ್ಮಾನ ಮಾಡುತ್ತೇವೆ’ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌, ಮಹೇಶ್‌ ಅರಳಿ, ನಾಗರಾಜ ಯಾದವ್‌ ಸೇರಿದಂತೆ ಎಲ್ಲ ಸದಸ್ಯರು ಈ ವಿಧೇಯಕವನ್ನು ಸ್ವಾಗತಿಸಿದರು.

click me!