ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಕೇಂದ್ರಕ್ಕೆ ಶಿಫಾರಸು

Published : Feb 10, 2023, 04:25 AM IST
ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ  ಕೇಂದ್ರಕ್ಕೆ ಶಿಫಾರಸು

ಸಾರಾಂಶ

ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಕೇಂದ್ರಕ್ಕೆ ಶಿಫಾರಸು ರಾಜ್ಯದಲ್ಲಿ ಈಗಾಗಲೇ ಎಸ್ಸಿ ಮೀಸಲು 17%, ಎಸ್ಟಿಮೀಸಲು 7%ಗೆ ಏರಿಕೆ ಈಗ ಶೆಡ್ಯೂಲ್‌ 9ಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು: ಸಂಪುಟ ನಿರ್ಣಯ.

ಬೆಂಗಳೂರು (ಫೆ.10) :  ಪರಿಶಿಷ್ಟಜಾತಿ (ಎಸ್ಸಿ) ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟಪಂಗಡ (ಎಸ್ಟಿ) ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಈ ಹಿಂದೆಯೇ ತೀರ್ಮಾನಿಸಿತ್ತು. ಇದಕ್ಕೆ ಮಾನ್ಯತೆ ಸಿಗುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳವನ್ನು 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಅಂಗೀಕರಿಸಿರುವ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022ದ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.

ನೀವು ಮೊದಲ ಹೆಜ್ಜೆ ಇಟ್ಟಿದ್ದರೆ, ಶೆಡ್ಯೂಲ್‌ 9ಕ್ಕೆ ಸೇರಿರುತ್ತಿತ್ತು: ಸಿದ್ದುಗೆ ಬೊಮ್ಮಾಯಿ ತಿರುಗೇಟು

ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿ ರಾಜ್ಯಪತ್ರ ಹೊರಡಿಸಿದ್ದರೂ ಕೆಲವು ಕಾನೂನು ಅಡ್ಡಿಗಳಿಂದಾಗಿ ಪರಿಷ್ಕೃತ ಮೀಸಲಾತಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅನುಷ್ಠಾನಗೊಳಿಸಿದರೂ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಹುದು ಎಂಬ ಕಾರಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಫೆ.10ರಿಂದ ಶುರುವಾಗಲಿರುವ ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮೂಲಗಳು ತಿಳಿಸಿವೆ. ಕೇಂದ್ರವು ಮೀಸಲು ಹೆಚ್ಚಳವನ್ನು ಶೆಡ್ಯೂಲ್‌ 9ಕ್ಕೆ ಸೇರಿಸಿದರೆ ಇದಕ್ಕೆ ಪೂರ್ಣ ಮಾನ್ಯತೆ ಲಭಿಸಿದಂತಾಗುತ್ತದೆ.

ಏಕೆ ಈ ಕ್ರಮ ಅಗತ್ಯ?

ರಾಜ್ಯ ಸರ್ಕಾರವು ಇತ್ತೀಚೆಗೆ ಕಾಯ್ದೆ ಜಾರಿಗೊಳಿಸಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಿಸಿದೆ. ಅದರಡಿ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಈ ವರ್ಗಕ್ಕೆ ಹೆಚ್ಚು ಮೀಸಲು ಲಭಿಸಬೇಕು. ಆದರೆ ಮೀಸಲು ಲಭಿಸಲು ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಅದಕ್ಕೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ.

ಮೀಸಲಾತಿ ಹೆಚ್ಚಳಕ್ಕೆ ತೊಡಕೇನು?:

ಮೀಸಲಾತಿ ಒಟ್ಟು ಪ್ರಮಾಣ ಶೇ.50ರಷ್ಟುಮೀರುವಂತಿಲ್ಲ ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಚ್‌ ತೀರ್ಪು ನೀಡಿದೆ. ರಾಜ್ಯದಲ್ಲಿ ಈಗ ಶೇ.50ರಷ್ಟುಮೀಸಲಾತಿ ಇದೆ. ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಜಾರಿಯಾದರೆ ಈ ಪ್ರಮಾಣ ಶೇ.56ರಷ್ಟುಆಗಲಿದೆ. ಈ ಮಿತಿಯನ್ನು ಮೀರದೆ ಎಸ್ಸಿ, ಎಸ್ಟಿಮೀಸಲಾತಿಯನ್ನು ಒಟ್ಟು ಶೇ.6ರಷ್ಟುಹೆಚ್ಚಿಸಲು ಹೇಗೆ ಸಾಧ್ಯ ಎಂಬುದನ್ನು ಸುಗ್ರೀವಾಜ್ಞೆಯಲ್ಲಿ ವಿವರಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಆದೇಶಕ್ಕೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದು ಎಸ್ಸಿ, ಎಸ್ಟಿಸಮುದಾಯದಲ್ಲಿ ಸರ್ಕಾರದ ಬಗ್ಗೆ ಕೆಟ್ಟಅಭಿಪ್ರಾಯ ಸೃಷ್ಟಿಸಬಹುದಾದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಗೆ ಮೊದಲೇ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಎಲ್ಲೆಲ್ಲಿ ಮೀಸಲಾತಿ ಅನ್ವಯ?

ಮೀಸಲಾತಿ ನಿಯಮಗಳ ಪ್ರಕಾರ ಪರಿಶಿಷ್ಟರಿಗೆ ಒದಗಿಸಿರುವ ಮೀಸಲಾತಿಯು ಸರ್ಕಾರಿ ಅಥವಾ ಅನುದಾನಿತ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಅವಕಾಶಕ್ಕೆ ಅನ್ವಯವಾಗಲಿದೆ.

ರಾಜ್ಯ ಸರ್ಕಾರಿ ಅಂದರೆ ಸರ್ಕಾರ, ವಿಧಾನಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪೆನಿ. ಸಾರ್ವಜನಿಕ ಸಂಸ್ಥೆಗಳು ಅಂದರೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು, ಕಂಪನಿ ಕಾಯ್ದೆಗಳಡಿ ಬರುವ ಸರ್ಕಾರಿ ಕಂಪನಿ, ಸ್ಥಳೀಯ ಪರಾಧಿಕಾರ, ಸರ್ಕಾರದ ಒಡೆತನ, ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿನ ನೇಮಕಾತಿಗೆ ಅನ್ವಯ ಆಗಲಿದೆ.

ನೇಮಕಾತಿ ಅಥವಾ ಹುದ್ದೆಗಳಿಗೆ ಸ್ವಂತ ಅರ್ಹತೆಯ (ಮೆರಿಟ್‌) ಆಧಾರದಲ್ಲಿ ಎಸ್ಸಿ,ಎಸ್ಟಿಸಮುದಾಯದವರು ಆಯ್ಕೆಯಾಗಿದ್ದರೆ ಅಂಥವರನ್ನು ಮೀಸಲಾತಿಯಡಿ ಪರಿಗಣಿಸುವುದಿಲ್ಲ.

ಮೀಸಲಾತಿ ಹೆಚ್ಚಳ ವಿಧೇಯಕದಲ್ಲಿ ಏನಿತ್ತು?

ಕೆಲವು ಸಮುದಾಯಗಳನ್ನು ಸೇರಿಸಿದ್ದರಿಂದ ಎಸ್ಸಿ, ಎಸ್ಟಿಜನಸಂಖ್ಯೆ ಹೆಚ್ಚಾಗಿದೆ. ಆದರೂ ಮೀಸಲಾತಿಯು 1958ರಲ್ಲಿ ಇದ್ದಂತೆ ಎಸ್ಸಿ ಶೇ.15, ಎಸ್ಟಿಶೇ.3 ರಷ್ಟುಮಾತ್ರ ಇದೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ಮತ್ತು ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಸಮಿತಿ ವರದಿಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಲು ವಿಶೇಷ ಪ್ರಕರಣವನ್ನು ರೂಪಿಸುವ ಅಗತ್ಯವಿದೆ ಎಂದು ವಿಧೇಯಕದಲ್ಲಿ ವಿವರಿಸಲಾಗಿತ್ತು.

 

ಮೇಲ್ವರ್ಗಕ್ಕೆ ಶೇ.10 ಮೀಸಲು ಕೊಡಬೇಕೆಂಬ ನಿಯಮವಿದ್ದರೆ ರಾಜೀನಾಮೆ ಕೊಡುವೆ:ಸಿದ್ದರಾಮಯ್ಯ

ಏನಿದು ಮೀಸಲಾತಿ ಹೆಚ್ಚಳ ಕಸರತ್ತು?

ನ್ಯಾ ಎಚ್‌.ಎನ್‌.ನಾಗಮೋಹನ್‌ದಾಸ್‌ ವರದಿ ಅನ್ವಯ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡಲು ಅ.8ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಕ್ಸಿಕ್ಯೂಟಿವ್‌ ಆದೇಶ ಹೊರಡಿಸಲು ನಿರ್ಧರಿಸಿತ್ತು. ಇದೇ ವೇಳೆ ಕೇಂದ್ರ ಸರ್ಕಾರದಿಂದ ಸಂಸತ್‌ ಅಧಿವೇಶನದಲ್ಲಿ ಒಪ್ಪಿಗೆ ಪಡೆದು ಶೆಡ್ಯೂಲ್‌ 9ರಲ್ಲಿ ಸೇರಿಸಬೇಕು ಎಂದೂ ತೀರ್ಮಾನಿಸಿತ್ತು. ಆದರೆ, ಕೇವಲ ಆದೇಶಕ್ಕೆ ಕಾನೂನು ಮಾನ್ಯತೆ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿತ್ತು. ಅದಕ್ಕೂ ಕಾನೂನು ಮಾನ್ಯತೆ ಇಲ್ಲ ಎಂಬ ತಕರಾರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಅಂಗಳಕ್ಕೆ ಚೆಂಡನ್ನು ಒಯ್ಯಲು ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ