ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಇನ್ನು ಈ ಕುರಿತ ವಿಧೇಯಕಕ್ಕೆ ಮುಂದಿನ ಅಧಿವೇಶನದಲ್ಲಿ ಎರಡೂ ಸದನಗಳ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿ (ಅ.25): ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಇನ್ನು ಈ ಕುರಿತ ವಿಧೇಯಕಕ್ಕೆ ಮುಂದಿನ ಅಧಿವೇಶನದಲ್ಲಿ ಎರಡೂ ಸದನಗಳ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆ ನೀಡಲಾಗುತ್ತಿದೆ. ಇನ್ನು ಪಂಚಮಸಾಲಿ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಬೇಡಿಕೆ ಕುರಿತು ಆಯೋಗಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾವುದೇ ವರ್ಗದ ಮೀಸಲಾತಿ ಕಸಿಯುವ ಅಥವಾ ಸೇರ್ಪಡೆ ಮಾಡುವ ಕುರಿತು ನಾನು ಪ್ರತಿಕ್ರಿಯೆ ನೀಡಲಾರೆ. ಏಕೆಂದರೆ ಮೀಸಲಾತಿ ವಿಚಾರದಲ್ಲಿ ಏನೇ ಮಾಡಿದರೂ ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲೇ ಮಾಡಬೇಕು. ಮೀಸಲಾತಿ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರದ ಮುಖ್ಯಸ್ಥನಾಗಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯಬೇಕು ಎಂದು ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಇದೇ ವೇಳೆ ಅಲ್ಪ ಸಂಖ್ಯಾತರ ಮೀಸಲಾತಿ ಕುರಿತು ಕೆಲ ಶಾಸಕರು ನೀಡಿರುವ ಹೇಳಿಕೆಗಳನ್ನು ಗಮನಕ್ಕೆ ತಂದಾಗ, ಅದು ಅವರ ವೈಯಕ್ತಿಕ ಹೇಳಿಕೆಗಳು ಅಷ್ಟೇ ಎಂದು ಮುಖ್ಯಮಂತ್ರಿ ತಿಳಿಸಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ಚೆನ್ನಮ್ಮ: ಸಿಎಂ ಬೊಮ್ಮಾಯಿ
ಮೀಸಲು ಹೆಚ್ಚಳ ಸುಗ್ರೀವಾಜ್ಞೆಗೆ ಗೌರ್ನರ್ ಅಂಕಿತ: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ಸಚಿವ ಸಂಪುಟದ ತೀರ್ಮಾನಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಒಪ್ಪಿಗೆ ಸೂಚಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂಬ ನ್ಯಾ.ನಾಗಮೋಹನ ದಾಸ್ ಅವರ ವರದಿಯ ಶಿಫಾರಸಿಗೆ ಸಚಿವ ಸಂಪುಟದಲ್ಲಿ ಸಮ್ಮತಿ ಸೂಚಿಸಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿತ್ತು. ಇದೀಗ ರಾಜ್ಯಪಾಲರು ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಅಧಿಕೃತವಾದ ವಿಶೇಷ ರಾಜ್ಯಪತ್ರ ಪ್ರಕಟಿಸಲಾಗಿದೆ. ಇದರಿಂದ ಇನ್ನು ಮುಂದೆ ಪರಿಶಿಷ್ಟಜಾತಿಯ ಮೀಸಲಾತಿ ಪ್ರಮಾಣ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟಪಂಗಡಗಳ ಮೀಸಲಾತಿ ಪ್ರಮಾಣ ಶೇ.3 ರಿಂದ 7 ಕ್ಕೆ ಹೆಚ್ಚಳವಾಗಲಿದೆ ಎಂದು ವಿವರಿಸಿದ್ದಾರೆ.
ಕೆಂಪೇಗೌಡ ಥೀಮ್ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ಧತೆಯಿದ ನಡೆದುಕೊಂಡಿದೆ. ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ದೀಪಾವಳಿ ಕೊಡುಗೆ ನೀಡಿದೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸುಗ್ರೀವಾಜ್ಞೆಯನ್ನು ವಿಧಾನ ಮಂಡಲದ ಉಭಯ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ನಾಡಿನ ಸಮಸ್ತ ಜನತೆಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.