ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಶಿಗ್ಗಾಂವಿ (ಅ.25): ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಸೋಮವಾರ ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಅವರು ಈ ಬೆಳವಣಿಗೆಯನ್ನು ನಿರಿಕ್ಷಿರಲಾರರು. ಭಾರತೀಯರು ವಿಶ್ವದಲ್ಲಿ ಎಲ್ಲ ರಂಗಗಳಲ್ಲಿ ಮುಂದಿದ್ದಾರೆ. ಹಲವು ದೇಶಗಳಲ್ಲಿ ಸಂಸದರಾಗಿಯೂ ಆಯ್ಕೆಯಾದವರಿದ್ದಾರೆ. ಇದೀಗ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗುವುದು ಅತ್ಯಂತ ವಿಶೇಷವಾದುದು.
ಚಕ್ರ ಪೂರ್ತಿ ತಿರುಗಿದೆ ಎಂದು ಅಭಿಪ್ರಾಯ ಪಟ್ಟರು. ಶಿಗ್ಗಾಂವಿಯಲ್ಲಿ ಕಿತ್ತೂರು ಚೆನ್ನಮ್ಮನ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳು ರಾಣಿ ಚೆನ್ನಮ್ಮನ ಪ್ರೇರಣೆಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 5 ಲಕ್ಷ ವರೆಗೆ ಬೀಜಧನ ಹಾಗೂ ಸಾಲ ಸೌಲಭ್ಯ ಒದಗಿಸುವ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತಿತರ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು. ಇದೇ ರೀತಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘಗಳ ಮೂಲಕ ಯುವಕರಿಗೆ ನೆರವು ನೀಡಲಾಗುವುದು.
ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ಚೆನ್ನಮ್ಮ: ಸಿಎಂ ಬೊಮ್ಮಾಯಿ
ಡಿಸೆಂಬರ್‌ನಲ್ಲಿ ಎರಡೂ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಅಧ್ಯಾದೇಶ ಜಾರಿಗೆ ಬಂದಿರುವುದು ನಿಜಕ್ಕೂ ಸಂತಸ ತಂದಿದೆ. ಈ ಸಮುದಾಯಗಳ 50 ವರ್ಷದ ಬೇಡಿಕೆ ಈಡೆರಿಸಿದಂತಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ, ಸುಗ್ರೀವಾಜ್ಞೆ ಹೊರಡಿಸಲಾಗಿದ್ದು ಮುಂದಿನ ಅಧಿವೇಶನದಲ್ಲಿ ಅಂಗೀಕಾರ ಪಡೆದು, ಸಂವಿಧಾನದ 9ನೆ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ಸಿದ್ದರಾಮಯ್ಯನವರು ಅಹಿಂದ ನಾಯಕರಾಗಿ ಮಾಡದ ಕೆಲಸವನ್ನು ನೀವು ಮಾಡಿದ್ದೀರಿ ಎಂದ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ನನ್ನ ಚಿಂತನೆ, ನನ್ನ ಕರ್ತವ್ಯ ವನ್ನಷ್ಟೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಮೂಢನಂಬಿಕೆಗೆ ಸಡ್ಡು: ಚನ್ನಮ್ಮನ ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಮೂಢನಂಬಿಕೆ. ಇದಕ್ಕೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿ ಎರಡು ಬಾರಿ ಉತ್ಸವಕ್ಕೆ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತೇ ಎಂಬ ಮೌಢ್ಯ ಎಲ್ಲ ಮುಖ್ಯಮಂತ್ರಿಗಳಲ್ಲಿದೆ. ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ ಕಿತ್ತೂರು ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಯಾರೇ ಮುಖ್ಯಮಂತ್ರಿ ಇರಲಿ, ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಸ್ಮರಿಸುವುದು ನಮ್ಮ ಧರ್ಮ. ಎಸ್.ಬಂಗಾರಪ್ಪ ಸಿಎಂ ಆಗಿ ಕಿತ್ತೂರಿಗೆ ಬಂದು ಹೋಗಿ ಕೆಲವೇ ದಿನಗಳಲ್ಲಿ ಅವರ ಸಿಎಂ ಸ್ಥಾನ ಹೋಯಿತು.
ಸ್ತ್ರೀಶಕ್ತಿ ಸಾಮರ್ಥ್ಯ, ವಿವೇಕಾನಂದ ಯುವಶಕ್ತಿ ಯೋಜನೆ ನವೆಂಬರಿಂದ: ಸಿಎಂ ಬೊಮ್ಮಾಯಿ
ಕಿತ್ತೂರು ಉತ್ಸವಕ್ಕೆ ಬಂದರೆ ಸಿಎಂ ಸ್ಥಾನ ಹೋಗುತ್ತದೆ ಎಂದು ಬಿಂಬಿಸಲಾಯಿತು. ಅಂದಿನಿಂದ ಹಲವು ಮುಖ್ಯಮಂತ್ರಿಗಳು ಕಿತ್ತೂರು ಉತ್ಸವಕ್ಕೆ ಬರಲೇ ಇಲ್ಲ. ಕಳೆದ ವರ್ಷ ನನಗೂ ಕಿತ್ತೂರು ಉತ್ಸವಕ್ಕೆ ಹೋಗಬೇಡಿ ಎಂದು ಕೆಲವರು ಸಲಹೆ ನೀಡಿದ್ದರು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬುವುದು ಮೂಢನಂಬಿಕೆ ಅಷ್ಟೇ. ಚಾಮರಾಜ ನಗರಕ್ಕೆ ಹೋದ್ರೂ ಅಧಿಕಾರ ಹೋಗುತ್ತದೆ ಎಂದು ಹೇಳುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮಳ ಪವಿತ್ರ ಸ್ಥಾನಕ್ಕೆ ಬರುವುದೇ ನನ್ನ ಪುಣ್ಯ. ಕಿತ್ತೂರು ಹಾಗೂ ಚಾಮರಾಜ ನಗರ ಎರಡೂ ಕಡೆ ನಾನು ಹೋಗಿ ಬಂದಿದ್ದೇನೆ ಎಂದು ಹೇಳಿದರು.