ಎಸ್ಸಿ ಒಳಮೀಸಲಾತಿ ಇನ್ನು ಅಧಿಕೃತ: 101 ಎಸ್ಸಿ ಜಾತಿ 3 ಪ್ರವರ್ಗಗಳಾಗಿ ವಿಂಗಡಣೆ!

Kannadaprabha News   | Kannada Prabha
Published : Aug 26, 2025, 11:19 AM IST
siddaramaiah

ಸಾರಾಂಶ

ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸ ಅಧಿಸೂಚನೆ ಹೊರಡಿಸಿದೆ. ನ್ಯಾ.ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಂತೆ ಮೀಸಲಾತಿ ಹಂಚಿಕೆ ಮಾಡಿ, ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ.

ಬೆಂಗಳೂರು (ಆ.26): ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿ ಸರ್ಕಾರ ಸಚಿವ ಸಂಪುಟದ ತೀರ್ಮಾನ ಪ್ರಕಟಿಸಿದ ಬೆನ್ನಲ್ಲೇ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಏಕ ಸದಸ್ಯ ಆಯೋಗದ ಶಿಫಾರಸು ಅನ್ವಯ ಮೀಸಲಾತಿ ಹಂಚಿಕೆ ಮಾಡಿ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ನ್ಯಾ.ಎಚ್‌.ಎನ್‌.ನಾಗಮೋಹನ್‌ ದಾಸ್‌ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇ.17 ಮೀಸಲಾತಿಯನ್ನು ಪ್ರವರ್ಗ-ಎ ನಲ್ಲಿರುವ ಸಮುದಾಯಗಳಿಗೆ ಶೇ.6, ಪ್ರವರ್ಗ- ಬಿ ನಲ್ಲಿರುವ ಸಮುದಾಯಗಳಿಗೆ ಶೇ.6 ಮತ್ತು ಪ್ರವರ್ಗ-ಸಿ ನಲ್ಲಿರುವ ಸಮುದಾಯಗಳಿಗೆ ಶೇ.5ರಷ್ಟು ನಿಗದಿಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಆಯೋಗದ ವರದಿಯಲ್ಲಿನ ಪ್ರವರ್ಗ-ಇ ರಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಈ ಮೂರು ಸಮುದಾಯಗಳು ತಮ್ಮ ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಈ ಮೂರು ಜಾತಿಗಳು ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು.

ರಾಜ್ಯ ಸಿವಿಲ್‌ ಸೇವೆಗಳ ಹುದ್ದೆಗಳಿಗೆ ಒಳಮೀಸಲಾತಿ ಹಿನ್ನೆಲೆಯಲ್ಲಿ ತಡೆಹಿಡಿಯಲಾದ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕ್ರಮವಹಿಸಬಹುದು. ಎಲ್ಲಾ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲಾ ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನೂ ಸಹ ಮುಂದುವರೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಸುಗಳು ವಾಪಸ್‌?

ಒಳಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದ್ದು, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳ ಕುರಿತು ಪರಿಶೀಲಿಸಿ ತುರ್ತಾಗಿ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಸಚಿವ ಸಂಪುಟ ಉಪಸಮಿತಿಯು ಕ್ರಮವಹಿಸಬೇಕೆಂದು ಸೂಚಿಸಲಾಗಿದೆ.

ಆಯೋಗ ರಚನೆ:

ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ, ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉದ್ಯೋಗ ನೇಮಕಾತಿಯಲ್ಲಿ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕವಾಗಿ ಆದೇಶ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಗತ್ಯ ಕ್ರಮವಹಿಸುವಂತೆ ಅದೇಶಿಸಲಾಗಿದೆ.

  • - ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ
  • - ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
  • - ಪ್ರವರ್ಗ-ಎ, ಪ್ರವರ್ಗ-ಬಿಗೆ ತಲಾ ಶೇ.6 ಮೀಸಲು
  • - ಪ್ರವರ್ಗ-ಸಿಗೆ ಶೇ.5ರಷ್ಟು ಮೀಸಲಾತಿ ನಿಗದಿ
  • - ನೇಮಕಾತಿ ಪ್ರಕ್ರಿಯೆಗೂ ಇದ್ದ ಅಡ್ಡಿ ನಿವಾರಣೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ