
ಬೆಂಗಳೂರು : ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ದೊರೆಯುತ್ತಿದ್ದಷ್ಟು ಅನುದಾನ ಈ ಸರಕಾರದಲ್ಲಿ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬುದು ಖಚಿತ. ಆದರೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಮುಂದೆ ಟೇಕಾಫ್ ಆಗುತ್ತದೆ ಎಂಬ ವಿಶ್ವಾಸವಿದೆ. 2 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಆಗಿರುವುದರಿಂದ ವಿವಿಧ ಇಲಾಖೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿದುಕೊಳ್ಳಲು ಕೆಲ ಕಾಲಾವಕಾಶ ಬೇಕಾಗುತ್ತದೆ. ಕುಮಾರಸ್ವಾಮಿ ಅವರು ಸಮರ್ಥರಿದ್ದು, ತಿಳಿದುಕೊಂಡು ಮುಂದೆ ಹೋಗುತ್ತಾರೆ’ ಎಂದು ಹೇಳಿದರು.
‘ಶಾಸಕರಿಗೆ ಈ ಸರಕಾರದಲ್ಲಿ ಅನುದಾನ ಕಡಿಮೆ ಆಗಿದೆ ಎಂಬುದು ನಿಜ. ಹಿಂದಿನ ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಅನುದಾನ ಸಿಗುತ್ತಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಪ್ರತಿ ಕ್ಷೇತ್ರಕ್ಕೆ 40 ಕೋಟಿ ರು. ನೀಡಿದ್ದರು. ಆದರೆ, ಈ ಅವಧಿಯಲ್ಲಿ 20 ಕೋಟಿ ರು. ಮಾತ್ರ ನೀಡಲಾಗಿದೆ’ ಎಂದರು.
‘ಸಮ್ಮಿಶ್ರ ಸರಕಾರವು ರೈತರ ಸಾಲ ಮನ್ನಾಗೆ ಹಣ ಖರ್ಚು ಮಾಡಿದೆ. ಈ ಹಣವೆಲ್ಲಾ ಅಭಿವೃದ್ಧಿ ಕಾರ್ಯಗಳ ಹಣವೇ ಆಗಿರುವುದರಿಂದ ಅಭಿವೃದ್ಧಿಗೆ ಹಣ ಸಾಲುತ್ತಿಲ್ಲ. ಆದರೆ, ದೊಡ್ಡ ಪ್ರಮಾಣದಲ್ಲಿ ಯಾವ ಯೋಜನೆಯೂ ನಿಂತಿಲ್ಲ ಬದಲಿಗೆ ಪ್ರಮಾಣ ಕಡಿಮೆ ಆಗಿದೆ. ಎಲ್ಲಾ ಇಲಾಖೆಗಳ ಕೆಲಸಗಳೂ ನಡೆಯುತ್ತಿವೆ. ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮುಂದುವರೆಸುವ ಜತೆಗೆ ಜೆಡಿಎಸ್ ನೂತನ ಕಾರ್ಯಕ್ರಮಗಳನ್ನು ನೀಡಿದೆ. ಹೀಗಾಗಿ ಅನುದಾನ ಕಡಿಮೆಯಾಗಿದ್ದು, ಮುಂದಿನ ಅವಧಿಗೆ ಸೂಕ್ತ ಅನುದಾನ ದೊರೆಯುವ ನಿರೀಕ್ಷೆ ಇದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ