ಜ್ಯೋತಿಷ್ಯ, ಸಂಖ್ಯಾಶಾಸ್ತ್ರದಂತೆ ಶಾಲೆ ದಾಖಲೆಗಳಲ್ಲಿ ಬಾಲಕಿ ಹೆಸರು ಬದಲಿಸಿಕೊಳ್ಳಲು ಹೈಕೋರ್ಟ್ ಅನುಮತಿ!

Sathish Kumar KH   | Kannada Prabha
Published : Oct 09, 2026, 09:57 AM IST
Karnataka High court

ಸಾರಾಂಶ

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಆಧಾರದ ಮೇಲೆ ಶಾಲಾ ದಾಖಲೆಗಳಲ್ಲಿ ಬಾಲಕಿಯ ಹೆಸರನ್ನು ಲಕ್ಷ್ಮಿ ಎನ್. ಬದಲಿಗೆ ವೀಣಾ ಎನ್. ಎಂದು ಬದಲಾಯಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಹೆಸರು ಬದಲಾವಣೆಯು ನಾಗರಿಕ ಹಕ್ಕಾಗಿದ್ದು, ಹೊಸ ಹೆಸರಿನ ಹಿಂದಿನ ದಾಖಲೆ ಕೇಳುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಬೆಂಗಳೂರು (ಅ.09): ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ನಂಬಿಕೆ ಆಧಾರದ ಮೇಲೆ ಶಾಲಾ ದಾಖಲೆಗಳಲ್ಲಿ ಬಾಲಕಿಯ ಹೆಸರನ್ನು ಬದಲಿಸಲು ಹೈಕೋರ್ಟ್‌ ಅನುಮತಿ ನೀಡಿದೆ.

ತನ್ನ ಪುತ್ರಿ ‘ಲಕ್ಷ್ಮಿ ಎನ್‌.’ ಹೆಸರನ್ನು ‘ವೀಣಾ ಎನ್‌.’ ಎಂದು ಬದಲಾಯಿಸಲು ಶಾಲೆ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ದಾವೆಯಲ್ಲಿ ‘ವೀಣಾ ಎನ್‌.’ ಎಂಬ ಹೆಸರನ್ನು ದೃಢಪಡಿಸುವ ದಾಖಲೆ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ವಿಶ್ವನೀಡಂ ವಾಸಿ ಬಾಲಕಿಯ ತಂದೆ ನಿಂಗೇಗೌಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್‌ ಅವರ ಪೀಠ, ಬಾಲಕಿಯ ಹೆಸರು ಆರಂಭದಿಂದಲೇ ತಪ್ಪಾಗಿ ದಾಖಲಾಗಿದೆ ಎಂಬುದು ಪೋಷಕರ ವಾದವಲ್ಲ. ಬದಲಾಗಿ ಈಗಿರುವ ಹೆಸರನ್ನು ಹೊಸ ಹೆಸರಿಗೆ ಬದಲಿಸಬೇಕೆಂಬುದಷ್ಟೇ ಅವರ ಕೋರಿಕೆ. ಹಾಗಾಗಿ, ಹೊಸ ಹೆಸರಿನ ಹಿಂದಿನ ದಾಖಲೆ ಕೇಳುವುದು ಸಮರ್ಥನೀಯವಲ್ಲ. ಶಾಲಾ ಆಡಳಿತ ಸ್ವತಂತ್ರವಾಗಿ ಹೆಸರು ಬದಲಿಸುವ ಅಧಿಕಾರ ಹೊಂದಿಲ್ಲ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಕ್ಷಮ ಸಿವಿಲ್‌ ನ್ಯಾಯಾಲಯದಿಂದ ಡಿಕ್ರಿ ಪಡೆಯುವುದೇ ಸೂಕ್ತ ಕಾನೂನು ಮಾರ್ಗ ಎಂದು ತಿಳಿಸಿದೆ.

ಅಲ್ಲದೆ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನಿಂದಲೇ ಗುರುತಿಸಲ್ಪಡುತ್ತಾನೆ. ಹೆಸರಿನ ತಿದ್ದುಪಡಿ ಅಥವಾ ಬದಲಾವಣೆಯು ನಾಗರಿಕ ಹಕ್ಕಿಗೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ, ಶಾಲೆಯ ಎಲ್ಲ ದಾಖಲೆಗಳಲ್ಲಿ ‘ಲಕ್ಷ್ಮಿ ಎನ್‌.’ ಬದಲಿಗೆ ‘ವೀಣಾ ಎನ್‌.’ ಎಂದು ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯ ನಿರ್ದೇಶನ ನೀಡಿದ ಪೀಠ, ಇನ್ನು ಮುಂದೆ ಬಾಲಕಿಯನ್ನು ‘ವೀಣಾ ಎನ್‌.’ ಎಂದು ಗುರುತಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ವಿವರ:

ಮೇಲ್ಮನವಿದಾರರಿಗೆ 2010ರ ಅ.10ರಂದು ಜನಿಸಿದ್ದ ಬಾಲಕಿಗೆ ನಾಮಕರಣದ ಸಂದರ್ಭದಲ್ಲಿ ‘ಲಕ್ಷ್ಮಿ ಎನ್‌.’ ಎಂದು ಹೆಸರಿಡಲಾಗಿತ್ತು. ಬಳಿಕ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯಂತೆ ‘ವೀಣಾ ಎನ್‌.’ ಎಂಬ ಹೆಸರು ಮಗುವಿಗೆ ಹೆಚ್ಚು ಶ್ರೇಯಸ್ಸು ತರಲಿದೆ ಎಂದು ಪೋಷಕರು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆ ಹಾಗೂ ಇತರ ಸಾರ್ವಜನಿಕ ದಾಖಲೆಗಳಲ್ಲಿ ಹೆಸರು ಬದಲಾಯಿಸಲು ನಿರ್ದೇಶನ ನೀಡುವಂತೆ ಕೋರಿ ಮೇಲ್ಮನವಿದಾರರು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿತ್ತು. ಇದೀಗ ಹೈಕೋರ್ಟ್‌ ಬೆಂಗಳೂರಿನ ಸಿವಿಲ್‌ ನ್ಯಾಯಾಲಯದ ಆದೇಶ ರದ್ದುಪಡಿಸಿ, ಬಾಲಕಿಯ ಹೆಸರು ಬದಲಿಸಲು ಅನುಮತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರಾಮೀಣ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ: ಗ್ರಾಪಂ ಲೈಬ್ರರಿಗಳೇ ಇನ್ಮುಂದೆ 'ಆರ್ಟ್ ಗ್ಯಾಲರಿ' RDPR ಹೊಸ ಪ್ಲಾನ್ ಏನು?
Attibele petrol bunk fire: ಅತ್ತಿಬೆಲೆ ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರು ಡಿಕ್ಕಿ; ಇಡೀ ಬಂಕೇ ಭಸ್ಮ!