ರಾಜ್ಯ ಸಭಾ ಸದಸ್ಯ ಜಗ್ಗೇಶ್ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ ಕೇಸ್‌ನಲ್ಲಿ ಅರಣ್ಯಾಧಿಕಾರಿಗಳು ನೀಡಿದ್ದ ನೊಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು (ಅ.30): ಸ್ಯಾಂಡಲ್‌ವುಡ್ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಹುಲಿ ಉಗುರು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳಿಂಂದ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ರದ್ದುಗೊಳಿಸುವಂತೆ ಜಗ್ಗೇಶ್ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಅರಣ್ಯಾಧಿಕಾರಿಗಳ ನೋಟಿಸ್‌ಗೆ ತಡೆಯನ್ನು ನೀಡಿದೆ.
ರಾಜ್ಯದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಅನ್ನು ಕಾನೂನು ಬಾಹಿರವಾಗಿ ಧರಿಸಿದ್ದಾರೆ ಎಂಬ ಅಪರಾಧದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬಿಗ್‌ಬಾಸ್ ಮನೆಯಿಂದಲೇ ಸಂತೋಷ್ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ಇದರ ಬೆನ್ನಲ್ಲಿಯೇ ರಾಜ್ಯದ ಜನತೆಯಿಂದ ಹುಲಿ ಉಗುರು ಧರಿಸಿದ ಸ್ಯಾಂಡಲ್‌ವುಡ್ ನಟರನ್ನು ಬಂಧಿಸುವಂತೆ ಆಗ್ರಹಿಸಿದರು. ಇದರ ಬೆನ್ನಲ್ಲಿಯೇ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ನಟ ದರ್ಶನ್ ತೂಗುದೀಪ, ನಿಖಿಲ್ ಕುಮಾರಸ್ವಾಮಿ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ವಿಚಾರಣೆಗೆ ಹಾಜರಾಗುವಂತೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆಗೆ ನೋಟಿಸ್ ಕೂಡ ನೀಡಲಾಗಿತ್ತು.
ಮನೆ ಶೋಧಿಸಿದ ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ: ಹೈಕೋರ್ಟ್ ಮೊರೆ ಹೋದ ನಟ ಜಗ್ಗೇಶ್
ಅರಣ್ಯಾಧಿಕಾರಿಗಳ ತಂಡದಿಂದ ನಟ ಜಗ್ಗೇಶ್ ಮನೆ ಮೇಲೆ ದಾಳಿ ಮಾಡಿ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ ನಟ ಜಗ್ಗೇಶ್ ಅವರು, ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿದ್ದರು. ಜೊತೆಗೆ, ಅರಣ್ಯಾಧಿಕಾರಿಗಳ ಕ್ರಮ ಕಾನೂನು ಬಾಹಿರವೆಂದು ಘೋಷಣೆ ಮಾಡಿ, ತಮಗೆ ನೀಡಿದ ಅರಣ್ಯ ಇಲಾಖೆಯ ನೋಟಿಸ್ ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ನೋಟಿಸ್‌ಗೆ ಉತ್ತರ ಕೊಡುವ ಮೊದಲೇ ದಾಳಿ: ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್ ನೀಡಿದ ವಿಚಾರದ ಬಗ್ಗೆ ಜಗ್ಗೇಶ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ಅವರು, ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ನೋಟಿಸ್‌ಗೆ ಉತ್ತರ ನೀಡುವ ಮುನ್ನವೇ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿ ಹುಲಿ ಉಗುರು ಪರಶೀಲನೆ ನೆಪದಲ್ಲಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನ ಆಧಾರಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಉಲ್ಲೇಖ ಮಾಡಿದ್ದಾರೆ. ಈ ವಾದವನ್ನು ಆಲಿಸಿದ ಹೈಕೋರ್ಟ್ ಅರಣ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದೆ.
ಬೆಂಗಳೂರಿಗೆ ಬೆಂಕಿ ಕಾಟ: 50ಕ್ಕೂ ಅಧಿಕ ಐಷಾರಾಮಿ ಖಾಸಗಿ ಬಸ್‌ಗಳು ಬೆಂಕಿಗಾಹುತಿ
ಅರಣ್ಯಾಧಿಕಾರಿಗಳಿಗೆ ತರಾಟೆ: ಹುಲಿ ಉಗುರು ಹುಡುಕಲು 14 ಅಧಿಕಾರಿಗಳು ತೆರಳಿದ್ರಾ? ನೋಟಿಸ್ ನೀಡಿದ ಒಂದು ಗಂಟೆಗಳಲ್ಲೇ ಮನೆಗೆ ಅಧಿಕಾರಿ ಹೋಗಿದ್ದೇಕೆ? ನೋಟಿಸ್ ಕೊಟ್ಟ ಮೇಲೆ ಉತ್ತರಿಸಲು ಅವಕಾಶ ಕೊಡದಿದ್ದೇಕೆ? ಪ್ರಚಾರಕ್ಕಾಗಿ ಅಧಿಕಾರಿಗಳು ಹೀಗೆ ಮಾಡಿದ್ದಾರೆಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಅರಣ್ಯಾಧಿಕಾರಿಗಳು ಕಾನೂನಿನ ಪ್ರಕ್ರಿಯೆ ಅನುಸರಿಸಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮುಂದುವರೆದು ಅರಣ್ಯಾಧಿಕಾರಿಗಳು ನೀಡಲಾಗಿದ್ದ ನೋಟಿಸ್‌ಗೆ ತಡೆಯನ್ನು ನೀಡಿದೆ. ಜೊತೆಗೆ ಎಫ್ಎಸ್ಎಲ್ ವರದಿಯೂ ಹೈಕೋರ್ಟ್ ತೀರ್ಪಿಗೆ ಬದ್ದವಾಗಿರಬೇಕು ಎಂದು ಆದೇಶ ಹೊರಡಿಸಿದೆ.