ಮಂಗನ ಕಾಯಿಲೆ ಕುರಿತು ನಿರ್ಲಕ್ಷ್ಯ: ಹಾಲಪ್ಪ ಪ್ರಸ್ತಾಪ| ಬಿಜೆಪಿ ಶಾಸಕರಿಂದಲೇ ಸರ್ಕಾರದ ವಿರುದ್ಧ ಆಕ್ರೋಶ| ಸ್ಪಂದಿಸುವುದಾಗಿ ಆರೋಗ್ಯ ಇಲಾಖೆ ಲಿಖಿತ ಹೇಳಿಕೆ
ವಿಧಾನಸಭೆ[ಮಾ.17]: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ಗಿಂತ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚು ಆತಂಕವನ್ನುಂಟು ಮಾಡಿದರೂ ರಾಜ್ಯ ಸರ್ಕಾರವು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸುವ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.
ಸೋಮವಾರ ಶೂನ್ಯವೇಳೆಯಲ್ಲಿ ಮಂಗನ ಕಾಯಿಲೆ ಕುರಿತು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಹರತಾಳ ಹಾಲಪ್ಪ, ಮಂಗನ ಕಾಯಿಲೆಯು ಜನತೆಯನ್ನು ಭಯಭೀತಿಗೊಳಿಸಿದೆ. ಕಳೆದ ವರ್ಷ 23 ಮಂದಿ ಮತ್ತು ಈ ವರ್ಷ 4 ಮಂದಿ ಸಾವನ್ನಪಿದ್ದಾರೆ. ಸಮರ್ಪಕವಾದ ಪ್ರಯೋಗಾಲಯ ಇಲ್ಲ. ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಸರ್ಕಾರ ಮಂಗನ ಕಾಯಿಲೆಯ ತೀವ್ರತೆಯನ್ನು ಅರಿತುಕೊಳ್ಳುತ್ತಿಲ್ಲ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕೈಗೊಂಡಿರುವಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನೀಡಲಾಗಿದ್ದ ಸೌಲಭ್ಯಗಳನ್ನು ಹಿಂಪಡೆದುಕೊಂಡಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಶೀಘ್ರ ರಾಜಕೀಯದಲ್ಲೊಂದು ಮಹತ್ವದ ಬದಲಾವಣೆ : ಬೇಳೂರು ಕೊಟ್ಟರು ಸುಳಿವು
ಹರತಾಳ ಹಾಲಪ್ಪ ಮಾತನಾಡುವಾಗ ಆರೋಗ್ಯ ಸಚಿವ ಶ್ರೀರಾಮುಲು ಸದನದಲ್ಲಿ ಇರಲಿಲ್ಲ. ಹೀಗಾಗಿ ಯಾರು ಉತ್ತರ ನೀಡಬೇಕು ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿತು. ಅಷ್ಟರಲ್ಲಿ ಸಚಿವ ಶ್ರೀರಾಮಲು ಸದನಕ್ಕೆ ಆಗಮಿಸಿ ಉತ್ತರ ನೀಡಿದರು. ಮಂಗನ ಕಾಯಿಲೆಗೆ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಶ್ರೀರಾಮಲು ಅವರು ಉತ್ತರ ನೀಡುತ್ತಿದ್ದಂತೆಯೇ ಆಕ್ರೋಶಗೊಂಡ ಹರತಾಳ ಹಾಲಪ್ಪ ಅವರು ಹೆಡ್‌ಫೋನ್ ಅನ್ನು ಕುಕ್ಕಿ, ಆರೋಗ್ಯ ಸಚಿವರು ಸುಳ್ಳು ಮಾಹಿತಿ ಒದಗಿಸುತ್ತಿದ್ದಾರೆ ಎಂದು ಸಿಟ್ಟನ್ನು ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿಯ ಅರಗ ಜ್ಞಾನೇಂದ್ರ, ಜೆಡಿಎಸ್‌ನ ಅನ್ನದಾನಿ, ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಅವರು ಹಾಲಪ್ಪ ಅವರಿಗೆ ದನಿಗೂಡಿಸಿದರು.
ಮಾತು ಮುಂದುವರೆಸಿದ ಹರತಾಳ ಹಾಲಪ್ಪ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೂರು ಆಂಬ್ಯುಲೆನ್ಸ್‌ಗಳು ಯಾವಾಗಲೂ ಸಜ್ಜಾಗಿರುತ್ತಿದ್ದವು. ಅಲ್ಲದೆ, ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆಗ ಆಸ್ಪತ್ರೆಗೆ ಹಣ ಪಾವತಿ ಮಾಡದ ಕಾರಣ ಚಿಕಿತ್ಸೆ ನೀಡಲು ಹಿಂದೇಟು ಈಗ ಆಸ್ಪತ್ರೆಯವರು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರವು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ. ಅದೊಂದು ಮೃತ್ಯುಕೂಪಕ್ಕೆ ಎಡೆಮಾಡಿಕೊಡುವ ಆಸ್ಪತ್ರೆಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಮಧ್ಯಪ್ರವೇಶಿಸಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 5 ಕೋಟಿ ರು. ವಿಶೇಷ ಅನುದಾನ ನೀಡಲಾಗಿತ್ತು. ಪ್ರಯೋಗಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಸಹ ಕೈಗೊಳ್ಳಲಾಗಿತ್ತು ಎಂದು ಹೇಳಿದರು. ಸಚಿವ ಶ್ರೀರಾಮುಲು ಉತ್ತರಿಸಿ, ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಂಗನ ಕಾಯಿಲೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸರಿಯಾಗಿ ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಹಾಲಪ್ಪ ಆಕ್ರೋಶಕ್ಕೆ ಸ್ಪಂದಿಸಿದ ಸರ್ಕಾರ
ಬಿಜೆಪಿ ಸದಸ್ಯ ಹರತಾಳ ಹಾಲಪ್ಪ ಸೋಮವಾರ ಬೆಳಗ್ಗೆ ಸದನದಲ್ಲಿ ಮಂಗನಕಾಯಿಲೆ ಭೀಕರತೆಯನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಎಚ್ಚೆತ್ತು ಸಂಜೆಯ ವೇಳೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಕಳೆದ ವರ್ಷ ಮಂಗನ ಕಾಯಿಲೆ ಬಾಧಿತರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೆಚ್ಚವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಲಿಖಿತವಾಗಿ ಆಶ್ವಾಸನೆ ನೀಡಿದೆ.
ಕಳೆದ ವರ್ಷ ಕೃತಕ ಉಸಿರಾಟವುಳ್ಳ ಮೂರು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ ರೀತಿಯಲ್ಲಿಯೇ ಈ ವರ್ಷವೂ ನಿಯೋಜಿಸಲು ಕ್ರಮ ಕೈಗೊಂಡಿದೆ. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಒದಗಿಸಲಾಗುವುದು. ಪ್ರಸ್ತುತ ಮಂಗನ ಕಾಯಿಲೆಗೆ ತುತ್ತಾಗುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.