
ಹಾವೇರಿ (ಡಿ.5): ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವರ್ಸಸ್ ಕೇಸರಿ ವಿವಾದ ಇದೀಗ ಹಾವೇರಿ ಜಿಲ್ಲೆಯಲ್ಲಿ ಮತ್ತೆ ಭುಗಿಲೆದ್ದಿದೆ. ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಸಿ ಜೆ ಬೆಲ್ಲದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದ ಕಾರಣ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಕಾಲೇಜಿಗೆ ಆಗಮಿಸುವ ಮೂಲಕ ಸವಾಲು ಹಾಕಿದ್ದಾರೆ.
ಸಿ ಜೆ ಬೆಲ್ಲದ್ ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕೆಲವು ದಿನಗಳಿಂದ ಕಾಲೇಜಿನೊಳಗೆ ನಿತ್ಯವೂ ಹಿಜಾಬ್ ಧರಿಸಿಕೊಂಡು ಬರುತ್ತಿದ್ದರು. ಈ ಕುರಿತು ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ವಿವಾದ ಉಲ್ಬಣಗೊಂಡಿದೆ.
ನಿನ್ನೆ (ಗುರುವಾರ) ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬಂದಿದ್ದರಿಂದ ಆಕ್ರೋಶಗೊಂಡ ಹಿಂದೂ ವಿದ್ಯಾರ್ಥಿಗಳು, ಕ್ಲಾಸ್ ರೂಮ್‌ನಲ್ಲೇ ಕೇಸರಿ ಶಾಲುಗಳನ್ನು ಹಾಕಿ ಕುಳಿತಿದ್ದರು. 'ನೀವು ಹಿಜಾಬ್ ಹಾಕಿಕೊಂಡು ಬಂದರೆ, ನಾವು ಕೇಸರಿ ಶಾಲು ಹಾಕಿಕೊಂಡು ಬರೋದೇ. ಕೇಸರಿ ಶಾಲು ಮಾತ್ರವಲ್ಲದೆ, ಭಾಗವಾ ಧ್ವಜ ತರ್ತಿವಿ, ಹನುಮಂತನ ಗದೆ ಕೂಡ ತರುತ್ತೇವೆ' ಎಂದು ಹಿಂದೂ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸವಾಲು ಹಾಕಿದ್ದಾರೆ.
ವಿವಾದ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ, ಪರಿಸ್ಥಿತಿ ಇಂದು (ಶುಕ್ರವಾರ) ಕೊಂಚ ತಿಳಿಯಾದಂತಿದೆ. ಇಂದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೇ ಕಾಲೇಜಿಗೆ ಆಗಮಿಸಿದ್ದರಿಂದ ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೂಡ ಕೇಸರಿ ಶಾಲು ಹಾಕದೆ ಕಾಲೇಜಿಗೆ ಬಂದಿದ್ದಾರೆ. ಆದರೆ, 'ಅವರು ಹಿಜಾಬ್ ಹಾಕದೆ ಕಾಲೇಜಿನಲ್ಲಿದ್ದರೆ ನಾವೂ ಕೇಸರಿ ಶಾಲು ಹಾಕಲ್ಲ. ಒಂದು ವೇಳೆ ಅವರು ಹಿಜಾಬ್ ಹಾಕಿದರೆ ನಾವು ಕೇಸರಿ ಶಾಲು ಹಾಕ್ತೇವೆ' ಎಂದು ಜೇಬಿನಲ್ಲಿ ಕೇಸರಿ ಶಾಲು ಇಟ್ಟುಕೊಂಡೇ ಬಂದಿರುವ ವಿದ್ಯಾರ್ಥಿಗಳು ಹೇಳಿದ್ದಾರೆ.
ಸದ್ಯ ಕಾಲೇಜಿನಲ್ಲಿ ವಿವಾದ ತಾತ್ಕಾಲಿಕವಾಗಿ ಶಮನಗೊಂಡಂತೆ ಕಂಡರೂ, ಹಿಜಾಬ್ ಧರಿಸುವುದು ಮುಂದುವರಿದರೆ ವಿವಾದ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ