
ಬೆಂಗಳೂರು(ಡಿ.5): ಸಿಲಿಕಾನ್ ಸಿಟಿಯಲ್ಲಿ ಶ್ವಾನಪ್ರಿಯರೊಬ್ಬರಿಂದ ದತ್ತು ಪಡೆದು ಸಾಕಿದ್ದ ನಾಯಿಯ ಸಾವಿನ ಸುತ್ತ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ. ಮಕ್ಕಳಿಲ್ಲ ಮಗುವಿನಂತೆ ಜೋಪಾನ ಮಾಡುತ್ತೇವೆ ಎಂದು ಶ್ವಾನ ಪಡೆದಿದ್ದ ದಂಪತಿ ಮಗು ಜನಿಸಿದ ಬಳಿಕ ಶ್ವಾನದ ಮೇಲಿನ ಪ್ರೀತಿ ಕಡಿಮೆಯಾಗಿ, ಅದನ್ನು ಬೀದಿಗೆ ಬಿಟ್ಟು ಪಾಪಿಗಳು ಕೊಂದು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ 'JUSTICE FOR BONGO' ಎಂಬ ಪೋಸ್ಟರ್‌ಗಳು ನಗರದಾದ್ಯಂತ ಹರಿದಾಡುತ್ತಿವೆ.
ನಾಲ್ಕು ವರ್ಷಗಳ ಹಿಂದೆ ಜೆಪಿ ನಗರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸ್ವರ್ಣಿಮಾ ಎಂಬ ಪ್ರಾಣಿಪ್ರಿಯೆಗೆ ಅಪಘಾತದಿಂದ ಗಾಯಗೊಂಡು ರಸ್ತೆಯಲ್ಲಿ ನರಳುತ್ತಿದ್ದ ಶ್ವಾನವೊಂದು ಕಣ್ಣಿಗೆ ಬಿದ್ದಿತ್ತು. ಕರುಣೆ ತೋರಿದ ಸ್ವರ್ಣಿಮಾ ಅವರು ಶ್ವಾನವನ್ನು ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿ, ನಂತರ ಅದಕ್ಕೆ 'ಬೋಂಗೋ' ಎಂದು ಹೆಸರಿಟ್ಟು ಆರೈಕೆ ಮಾಡಿದ್ದರು. ಇದೊಂದೇ ಅಲ್ಲ, ಸ್ವರ್ಣಿಮಾ ಹಿಂದೆಯೂ ಹಲವು ಗಾಯಾಳು ಪ್ರಾಣಿಗಳಿಗೆ ಆರೈಕೆ ಮಾಡಿ ಬೇರೆಯವರಿಗೆ ಒಪ್ಪಿಸಿದ್ದ ಸ್ವರ್ಣಿಮಾ, ಅದೇ ರೀತಿ 'ಬೋಂಗೋ' ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಯಾರಾದರೂ ದತ್ತು ಪಡೆಯಲು ಇಚ್ಛಿಸಿದರೆ ಸಂಪರ್ಕಿಸುವಂತೆ ಮನವಿ ಮಾಡಿದ್ದರು.
ಸ್ವರ್ಣಿಮಾ ಅವರ ಪೋಸ್ಟ್ ನೋಡಿ ಅನುಭವ ಕಬರ ಮತ್ತು ಕೃತಿ ಲಾಬ ಎಂಬ ದಂಪತಿ 'ಬೋಂಗೋ'ವನ್ನು ದತ್ತು ಪಡೆಯಲು ಮುಂದಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲವಾದ್ದರಿಂದ, 'ನಮಗೆ ಮಗುವಿಲ್ಲ, ಶ್ವಾನವನ್ನೇ ಮಗು ತರ ನೋಡ್ಕೊಳ್ತೇವೆ' ಎಂದು ಹೇಳಿ ಸ್ವರ್ಣಿಮಾ ಅವರಿಂದ ಬೋಂಗೋವನ್ನು ಪ್ರೀತಿಯಿಂದ ದತ್ತು ಪಡೆದಿದ್ದರು. ಆದರೆ, ದತ್ತು ಪಡೆದ ಕೆಲವೇ ತಿಂಗಳಲ್ಲಿ ಈ ದಂಪತಿಗೆ ಮಗು ಜನಿಸಿದೆಯಂತೆ. ಮಗುವಿನ ಮೇಲೆ ಮೋಹ ಹೆಚ್ಚಾದ ಬಳಿಕ, 'ಬೋಂಗೋ' ಶ್ವಾನದ ಮೇಲಿನ ಪ್ರೀತಿ ಕಡಿಮೆಯಾಗಿದೆ. ನಂತರ ಅವರು ಬೋಂಗೋವನ್ನು ನಿರ್ದಯವಾಗಿ ಬೀದಿಗೆ ಬಿಟ್ಟು, ಅದು ರಸ್ತೆ ಬದಿಯಲ್ಲಿ ನರಳಿ ನರಳಿ ಸಾಯುವಂತೆ ಮಾಡಿದ್ದಾರೆ ಎಂದು ಸ್ವರ್ಣಿಮಾ ಆರೋಪಿಸಿದ್ದಾರೆ.
ದಂಪತಿ ವಿರುದ್ಧ ಎಫ್‌ಐಆರ್:
ಈ ಘಟನೆಯಿಂದ ಮನನೊಂದ ಪ್ರಾಣಿಪ್ರಿಯೆ ಸ್ವರ್ಣಿಮಾ ಅವರು ಬೋಂಗೋ ಸಾವಿಗೆ ದಂಪತಿಯೇ ಕಾರಣ ಎಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಅನುಭವ ಕಬರ ಮತ್ತು ಕೃತಿ ಲಾಬ ದಂಪತಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಶ್ವಾನವನ್ನು ರಸ್ತೆಯಲ್ಲಿ ನಿರ್ದಯವಾಗಿ ಸಾಯಲು ಬಿಟ್ಟ ಈ ದಂಪತಿಯ ಪಾತ್ರದ ಕುರಿತು ಪೊಲೀಸರು ಇದೀಗ ತನಿಖೆಗೆ ಮುಂದಾಗಿದ್ದಾರೆ. ದತ್ತು ಪಡೆದ ಶ್ವಾನದ ಮೇಲೆ ದಂಪತಿ ನಿಜವಾಗಿಯೂ ದ್ರೋಹ ಎಸಗಿದ್ದಾರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ