
ಬೆಂಗಳೂರು (ಡಿ. 05): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸಿ, ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಬಳಿಕ ಮದುವೆಗೆ ನಿರಾಕರಿಸಿ, ಮತಾಂತರಕ್ಕೆ ಒತ್ತಾಯಿಸಿದ್ದಾನೆ. ಇನ್ನು ಮತಾಂತರಕ್ಕೆ ಒಪ್ಪದಿದ್ದರೆ ದೆಹಲಿ ಮಾದರಿಯಲ್ಲಿ ನಿನ್ನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಬೀಸಾಡುವುದಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ನೀಡಿದ ದೂರಿನ ಮೇಲೆಯೂ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಲಕ್ಷಾಂತರ ಹಣ ವಂಚಿಸಿ, ಕೊಲೆ ಬೆದರಿಕೆ
ಸಂತ್ರಸ್ತ ಯುವತಿಯು ಉಸ್ಮಾನ್ ಎಂಬ ಯುವಕನ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾಳೆ. ಎರಡು ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಪರಿಚಯವಾಗಿದ್ದ ಉಸ್ಮಾನ್, ಆರಂಭದಲ್ಲಿ ಯುವತಿ ಅನ್ಯ ಕೋಮಿನ ಕಾರಣಕ್ಕೆ ಪ್ರೀತಿಯನ್ನು ನಿರಾಕರಿಸಿದಾಗ ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಮತಾಂತರವಾಗುವುದು ಬೇಡ, ಹಾಗೆಯೇ ಮದುವೆಯಾಗೋಣ ಎಂದು ನಂಬಿಸಿದ ಉಸ್ಮಾನ್‌ನ ಪ್ರೀತಿಯನ್ನು ಒಪ್ಪಿಕೊಂಡ ಯುವತಿ, ಸುಮಾರು ಒಂದೂವರೆ ವರ್ಷಗಳ ಕಾಲ ಆತನೊಂದಿಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದಳು.
ಆದರೆ, ಮದುವೆಯ ವಿಚಾರ ಬಂದಾಗ ಆತ ತನ್ನ ನಿಜಬಣ್ಣ ಬಯಲು ಮಾಡಿದ್ದಾನೆ. ತಕ್ಷಣ ಮತಾಂತರ ಆಗುವಂತೆ ಒತ್ತಾಯಿಸಿದ್ದಲ್ಲದೆ, ಯುವತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಆರೋಪಿ ಯುವಕ ಸಂತ್ರಸ್ತೆಯಿಂದ ಬರೋಬ್ಬರಿ 12.20 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಚಿನ್ನಾಭರಣಗಳನ್ನು ಬಲವಂತವಾಗಿ ತೆಗೆದುಕೊಂಡು ಅಡವಿಟ್ಟಿದ್ದಾನೆ.
ಪ್ರೀತಿಸಿ ವಂಚನೆ ಮಾಡಿ ಹಣ ದೋಚಿದರೂ, ಯುವತಿ ಆತನನ್ನು ಎದುರಿಸಿ ತನ್ನನ್ನು ಮದುವೆಯಾಗುವಂತೆ ಕುಟುಂಬದ ಮುಂದೆ ಮಾತನಾಡುವಂತೆ ಒತ್ತಾಯಿಸಿದಾಗ ಉಸ್ಮಾನ್ ಕೊಟ್ಟ ಬೆದರಿಕೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತಿದೆ. ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರೆ, ದೆಹಲಿ ಮಾದರಿಯಲ್ಲಿ ಕೊಲೆ ಮಾಡಿ ದೇಹವನ್ನು 32 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡುತ್ತೇನೆ. ನಂತರ ಮತ್ತೊಂದು ಮದುವೆಯಾಗುತ್ತೇನೆ' ಎಂದು ನೇರವಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಬೆದರಿಕೆಯಿಂದ ಯುವತಿ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.
ಇದೇ ವೇಳೆ, ಉಸ್ಮಾನ್ ಡ್ರಗ್ ಅಡಿಕ್ಟ್ ಎಂಬ ವಿಚಾರ ಯುವತಿಗೆ ತಿಳಿದುಬಂದಿದೆ. ಹಣ ಮತ್ತು ಚಿನ್ನ ವಂಚಿಸಿದ್ದಲ್ಲದೆ, ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಮತ್ತು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದೂ ಆರೋಪಿಸಲಾಗಿದೆ. ಈ ಎಲ್ಲಾ ಕಿರುಕುಳಗಳನ್ನು ತಾಳಲಾರದೆ ಸಂತ್ರಸ್ತ ಯುವತಿ ಎರಡು ಬಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ.
ಸಂತ್ರಸ್ತ ಯುವತಿ ಕಳೆದ ಮಾರ್ಚ್ ತಿಂಗಳಲ್ಲಿ ಸುದ್ಧಗುಂಟೆಪಾಳ್ಯ ಠಾಣೆಯಲ್ಲಿ ಆರೋಪಿ ಉಸ್ಮಾನ್ ವಿರುದ್ಧ ದೂರು ದಾಖಲಿಸಿದ್ದಳು. ಆದರೆ, ಪೊಲೀಸರು ತನ್ನ ದೂರಿನ ಗಂಭೀರತೆಯನ್ನು ಪರಿಗಣಿಸದೆ, ತಾನು ಹೇಳಿದ ರೀತಿಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ ಮತ್ತು ಚಾರ್ಜ್‌ಶೀಟ್ ಕೂಡ ಸರಿಯಾಗಿ ಮಾಡಿಲ್ಲ ಎಂದು ಯುವತಿ ದೂರಿದ್ದಾಳೆ. ಪ್ರಕರಣ ದಾಖಲಾದ ನಂತರವೂ ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದು, ಸದ್ಯ ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳ ಮತ್ತುಹಿರಿಯ ಅಧಿಕಾರಿಗಳ ಕಚೇರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ದೆಹಲಿ ಮಾದರಿಯ ಕೊಲೆ ಬೆದರಿಕೆ ಮತ್ತು ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ