ಸುರಕ್ಷಿತ ದೀಪಾವಳಿ: ಪಟಾಕಿ ಗಾಯ ಶೇ.85ರಷ್ಟು ಕಡಿಮೆ!

By Kannadaprabha NewsFirst Published Nov 16, 2020, 7:18 AM IST
Highlights

ಪಟಾಕಿ ಗಾಯ ಶೇ.85 ಕಮ್ಮಿ!| ಕಳೆದ ಸಲ 88 ಕೇಸ್‌, ಈ ಸಲ 10| ಪಟಾಕಿ ಜೊತೆ ಹಾನಿಯೂ ಇಳಿಕೆ

ಬೆಂಗಳೂರು(ನ.16): ರಾಜ್ಯ ಸರ್ಕಾರ ಹಸಿರು ಪಟಾಕಿಗಳಿಗಷ್ಟೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕಣ್ಣಿನ ಹಾನಿ ಸೇರಿದಂತೆ ಗಂಭೀರ ಗಾಯಗಳ ಪ್ರಮಾಣ ಶೇ.85ರಷ್ಟುಕಡಿಮೆಯಾಗಿವೆ. ಕಳೆದ ವರ್ಷ ರಾಜ್ಯಾದ್ಯಂತ ಸುಮಾರು 88 ಪ್ರಕರಣಗಳು ದಾಖಲಾಗಿದ್ದರೆ, ಈ ಬಾರಿ ಕೇವಲ 10 ಪ್ರಕರಣಗಳಷ್ಟೇ ದಾಖಲಾಗಿವೆ. ಅವಷ್ಟೂಬೆಂಗಳೂರು ನಗರದ ಪ್ರಕರಣಗಳಾಗಿದ್ದು, ಎಲ್ಲವೂ ಶೀಘ್ರ ಗುಣಮುಖರಾಗಬಹುದಾದ ಗಾಯಗಳಿವೆ. ಇನ್ನುಳಿದಂತೆ ರಾಜ್ಯದ ಉಳಿದ ಯಾವ ಭಾಗದಿಂದಲೂ ಯಾವುದೇ ಅನಾಹುತವಾಗಿರುವ ಬಗ್ಗೆ ವರದಿಯಾಗಿಲ್ಲ.

ಈ ಬಾರಿ ಸರ್ಕಾರ ಹಸಿರು ಪಟಾಕಿಗಳಿಗಷ್ಟೇ ಅನುಮತಿ ನೀಡಿರುವುದರಿಂದ ಅಪಾಯಕಾರಿ ಪಟಾಕಿಗಳಿಂದಾಗಿ ಆಗುತ್ತಿದ್ದ ಗಂಭೀರ ಅನಾಹುತಗಳಿಗೆ ಬ್ರೇಕ್‌ ಬಿದ್ದಿದೆ. ಜೊತೆಗೆ ಕೊರೋನಾದಿಂದ ಆರ್ಥಿಕ ಚಟುವಟಿಕೆ, ಆದಾಯಗಳಿಗೆ ಹೊಡೆತ ಬಿದ್ದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಮಾರಾಟವಾಗದಿರುವುದು, ಜನರೇ ಸ್ವಯಂಪ್ರೇರಿತರಾಗಿ ಪಟಾಕಿಗಳಿಂದ ದೂರ ಉಳಿದಿರುವುದೂ ಅನಾಹುತ ಪ್ರಮಾಣ ಇಳಿಕೆಯಾಗಲು ಕಾರಣವಾಗಿವೆ.

ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆ ಪಟಾಕಿ ಸ್ಫೋಟದ ದೆಸೆಯಿಂದ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು 27 ಗಾಯದ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಹೂಕುಂಡ ಪಟಾಕಿ ಹಚ್ಚಲು ಹೋಗಿ ಏಳು ಜನರ ಕಣ್ಣಿಗೆ ಹಾನಿ ಉಂಟಾಗಿದ್ದ ಪ್ರಕರಣವೂ ಸೇರಿತ್ತು. ಇನ್ನುಳಿದಂತೆ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ತಲಾ 25, ತುಮಕೂರು 8, ಬೆಂಗಳೂರು ಗ್ರಾಮಾಂತರ 3 ಪ್ರಕರಣಗಳು ದಾಖಲಾಗಿದ್ದವು.

ಈ ಬಾರಿ ಗಂಭೀರ ಪ್ರಕರಣವಿಲ್ಲ: ಕಳೆದ ವರ್ಷ ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಸಂಪೂರ್ಣ ದೃಷ್ಟಿಕಳೆದುಕೊಂಡಿದ್ದರು. ಆದರೆ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಕಾರ್ನಿಯಾಗೆ ಗಾಯವಾಗಿದ್ದು, ಕಣ್ಣಿನ ರೆಪ್ಪೆಗಳು ಸುಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿಲ್ಲ. ದೃಷ್ಟಿಸರಿಯಾಗಬಹುದಾದ ಸಾಧ್ಯತೆಗಳು ಹೆಚ್ಚಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಪ್ರಕರಣದಲ್ಲಿ ಹಸಿರು ಪಟಾಕಿ ಹೊಡೆದವರಿಂದ ಹಾಗೂ ಪಟಾಕಿ ಹಚ್ಚುತ್ತಿರುವವರಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ ಬೇರೆಯವರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.

click me!