ಸಚಿನ್ ಸಾವಿಗೆ ನ್ಯಾಯಬೇಕು, ಪರಿಹಾರ ಬೇಕಿಲ್ಲ: ಸಹೋದರಿ ಸುರೇಖಾ

By Kannadaprabha News  |  First Published Jan 3, 2025, 3:07 PM IST

ನಮಗೆ ಯಾವ ರಾಜಕಾರಣಿಗಳ ಒತ್ತಡ ಇಲ್ಲ. ನಮಗೆ ನ್ಯಾಯ ಬೇಕು. ಪರಿಹಾರ ಬೇಡ ಎಂದು ಮೃತ ಸಚಿನ್ ಸಹೋದರಿ ಸುರೇಖಾ ಸ್ಪಷ್ಟಪಡಿಸಿದರು.


ಬೀದರ್‌ (ಜ.03): ನಮಗೆ ಯಾವ ರಾಜಕಾರಣಿಗಳ ಒತ್ತಡ ಇಲ್ಲ. ನಮಗೆ ನ್ಯಾಯ ಬೇಕು. ಪರಿಹಾರ ಬೇಡ ಎಂದು ಮೃತ ಸಚಿನ್ ಸಹೋದರಿ ಸುರೇಖಾ ಸ್ಪಷ್ಟಪಡಿಸಿದರು. ಅವರು ಪತ್ರಿಕಾ ಭವನದಲ್ಲಿ ಮಾತನಾಡಿ, ಸಹೋದರ ಸಚಿನ ಸಾವನ್ನಪ್ಪಿ 8 ದಿನಗಳು ಕಳೆದಿವೆ. ಹೀಗೆಯೇ ದಿನಗಳು ಕಳೆದರೆ ಸಾಕ್ಷಿ ನಾಶ ಆಗುವ ಸಾಧ್ಯತೆ ಇದೆ ಎಂದ ಅವರು ಇಲ್ಲಿಯವರೆಗೆ ಡೆತ್‌ನೋಟ್‌ನಲ್ಲಿ ಹೆಸರಿದ್ದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಾವು ದೂರು ನೀಡಲು ಹೋದಾಗ ಅದನ್ನು ಸ್ವೀಕರಿಸಿ, ಡೆತ್‌ ನೋಟ್‌ ಪ್ರಕಾರ ಹುಡುಕಾಟ ನಡೆಸಿದ್ದರೆ ನನ್ನ ಸಹೋದರನ ಜೀವ ಉಳಿಸಬಹುದಿತ್ತು. 

ಆದರೆ, ಅದಾಗಲಿಲ್ಲ ಎಂದು ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿ, ಹೆಸರಿಗೆ ಮಾತ್ರ ಅಮಾಯಕ ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಸಿಬ್ಬಂದಿ ಅಧಿಕಾರಿಗಳು ಹೇಳಿದ್ದನ್ನೇ ಮಾಡಿದ್ದಾರೆ. ಹೀಗಾಗಿ, ಗಾಂಧಿಗಂಜ್‌ ಹಾಗೂ ಧನ್ನೂರ ಠಾಣೆಯ ಮೇಲಾಧಿಕಾರಿಗಳು ಅಮಾನತ್ತು ಆಗಬೇಕು ಎಂದು ಆಗ್ರಹಿಸಿದರು. ಸಚಿನ ಮೋಸಗಾರ ಎಂದು ಯಾರೂ ನನ್ನ ಸಹೋದರನ ಬಗ್ಗೆ ಮಾತಾಡಬೇಡಿ ಅಥವಾ ಬರೆಯಬೇಡಿ ಎಂದು ಮನವಿ ಮಾಡಿದ ಅವರು ಎಲ್ಲವೂ ಮುಂದಿನ ದಿನಗಳಲ್ಲಿ ಬಹಿರಂಗ ಆಗುತ್ತದೆ. ನಮಗೆ ನ್ಯಾಯ ಸಿಗದೆ ಇದ್ದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ದೂರು ನೀಡುತ್ತೇವೆ ಎಂದು ಸುರೇಖಾ ತುಳಿಸಿದರು.

Tap to resize

Latest Videos

ಆರೋಪಿಗಳ ಬಂಧನಕ್ಕೆ ಆಗ್ರಹ: ಬೀದರ್‌ ಜಿಲ್ಲೆಯ ಗುತ್ತಿಗೆದಾರ ವಿಶ್ವಕರ್ಮ ಸಮಾಜದ ಸಚಿನ್ ಮಾನಪ್ಪ ಪಂಚಾಳ ಆತ್ಮಹತ್ಯೆ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಪತ್ತಾರ ಒತ್ತಾಯಿಸಿದರು. ಗುಳೇದಗುಡ್ಡ ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘದ ಪದಾಧಿಕಾರಿಗಳು ಸಚಿನ್ ಸಾವಿನ ಘಟನೆ ಖಂಡಿಸಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಚಿನ್ ನಿಗೂಢ ಸಾವಿಗೆ ಕಾರಣರಾದ ಸಚಿವರ ಆಪ್ತರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಸಚಿನ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದರು.

ಸಚಿನ್‌ ಪಂಚಾಳ ಗುತ್ತಿಗೆದಾರನೇ ಅಲ್ಲ?: ಸಹೋದರಿ ಸುರೇಖಾ ಹೇಳಿದ್ದೇನು?

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅಖಂಡೇಶ್ವರ ಪತ್ತಾರ ಅವರು ಮನವಿ ಅವರು ತಹಸೀಲ್ದಾರ್ ಮಂಗಳಾ ಎಂ. ಅವರಿಗೆ ಸಲ್ಲಿಸಿದರು. ಈ ವೇಳೆಯಲ್ಲಿ ತಾಲೂಕ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಗೌರವಾಧ್ಯಕ್ಷ ಸುಭಾಸ್ ಬಡಿಗೇರ, ಉಪಾಧ್ಯಕ್ಷ ಮಾನಪ್ಪ ಬಡಿಗೇರ ತೆಗ್ಗಿ, ಕಟಗೇರಿ ಲಚ್ಚಪ್ಪ ಕಂಬಾರ, ಹಂಸನೂರ ಈರಪ್ಪ ಬಡಿಗೇರ, ಕೋಟೆಕಲ್ ಸುಭಾಸ್ ಬಡಿಗೇರ, ತಿಪ್ಪಣ್ಣ ಬಡಿಗೇರ, ತಿಮ್ಮಸಾಗರ ಚಿದಾನಂದ ಬಡಿಗೇರ, ಹಳದೂರ ಬಸವರಾಜ ಬಡಿಗೇರ, ಕೆಲವಡಿ ರಂಗನಾಥ ಬಡಿಗೇರ, ಹುಲ್ಲಿಕೇರಿ ಕಾಳಪ್ಪ ಬಡಿಗೇರ, ಭೀಮಸಿ ಬಡಿಗೇರ, ಸಂಗಪ್ಪ ಬಡಿಗೇರ, ಅಲ್ಲೂರ ಎಸ್.ಪಿ ದ್ಯಾಮಣ್ಣ ಬಡಿಗೇರ, ಐ.ಎ.ಬಡಿಗೇರ, ವೈ.ಎಸ್.ಬಡಿಗೇರ, ಎ.ಎಂ. ಬಡಿಗೇರ, ಪಾದನಕಟ್ಟಿ ರಾಚಪ್ಪ ಬಡಿಗೇರ ಇತರರು ಇದ್ದರು.

click me!