
ಕಲಬುರಗಿ (ಅ.30): ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ರಾಜಕೀಯವಾಗಿ ಭಾರಿ ವಾಕ್ಸ್‌ಮರಕ್ಕೆ ಕಾರಣವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್ ಸಂಘ ಶತಾಬ್ದಿ ಪಥ ಸಂಚಲನ ನಡೆಯುತ್ತಾ? ಎಂಬ ಕುತೂಹಲಕ್ಕೆ ಅ.30ರಂದು ತೆರೆ ಬೀಳಲಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ವಿಚಾರಣೆ ನಡೆಸುತ್ತಿರುವ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಗುರುವಾರ ತೀರ್ಪು ನೀಡಲಿದ್ದು, ಸಂಘದ ಕಾರ್ಯಕ್ರಮಕ್ಕೆ ಕೋರ್ಟ್ ಹಸಿರು ನಿಶಾನೆ ನೀಡುತ್ತಾ? ಅಥವಾ ಇಲ್ಲವಾ? ಎಂದು ಎಲ್ಲರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಹಿಂದೆ ಹೈಕೋರ್ಟ್, ಶಾಂತಿಸಭೆ ನಡೆಸಿ ವರದಿಯೊಂದಿಗೆ ಬರುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆದರೆ, ಶಾಂತಿಸಭೆಯಲ್ಲಿ ಅಶಾಂತಿ ತಾಂಡವವಾಡಿದ್ದು, ಒಮ್ಮತಕ್ಕೆ ಬರಲು ಆಡಳಿತ ವಿಫಲವಾಗಿದೆ. ಜಿಲ್ಲಾಡಳಿತ ಏನು ವರದಿ ಸಲ್ಲಿಸಲಿದೆ ಎಂದು ನೋಡಬೇಕಿದೆ.
ಹಿನ್ನೆಲೆ: ಕಳೆದ ಅ.19ರಂದೇ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಸೀಲ್ದಾರ್ ಆದೇಶವನ್ನು ಪ್ರಶ್ನಿಸಿ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ತುರ್ತು ವಿಚಾರಣೆ ನಡೆಸಿದ್ದ ಹೈಕೋರ್ಟ್ ಪಥ ಸಂಚಲನಕ್ಕೆ ಹೊಸದಿನ ನಿಗದಿಪಡಿಸಿ ಅನುಮತಿ ಕೋರುವಂತೆ ಸೂಚಿಸಲಾಗಿತ್ತು. ಬಳಿಕ ಆರೆಸ್ಸೆಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್, ನ.2ರಂದು ನಿಗದಿಪಡಿಸಿ ಪಥಸಂಚಲನಕ್ಕೆ ಅನುಮತಿ ಕೋರಿದ್ದರು.
ಯಾರ ವಿರುದ್ಧವೂ ಅಲ್ಲ: ಆರ್‌ಎಸ್‌ಎಸ್ ಶತಾಬ್ದಿ ನಿಮಿತ್ತ ಚಿತ್ತಾಪುರದಲ್ಲಿ ನ.2ರಂದು ನಡೆಸುತ್ತಿರುವ ಪಥಸಂಚಲನ ಯಾರ ವಿರುದ್ಧವೂ ಅಲ್ಲ. ಅದು ದೇಶಭಕ್ತ ಸ್ವಯಂ ಸೇವಕರ ಗೌರವಪೂರ್ಣ ಪಥ ಸಂಚಲವಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಲಬುರಗಿ ಜಿಲ್ಲಾಡಳಿತದ ಶಾಂತಿಸಭೆಯಲ್ಲಿ ತನ್ನ ಅಭಿಪ್ರಾಯ ಮಂಡಿಸಿದೆ. ಸಂಘದ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ಅವರ ಸಹಿ ಇರುವ ಲಿಖಿತ ಅಭಿಪ್ರಾಯದ 2 ಪುಟಗಳ ಪತ್ರವನ್ನು ಸಂಘದ ಪರವಾಗಿ ಬೌದ್ಧಿಕ ಪ್ರಮುಖ ಕೃಷ್ಣಾ ಜೋಷಿ, ಪ್ರಹ್ಲಾದ ವಿಶ್ವಕರ್ಮ, ಅಂಬಾರಾಯ ಅಷ್ಟಗಿ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದೆ.
ಎಲ್ಲರ ಬಾವನೆಗಳನ್ನು ಗೌರವಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಎಲ್ಲರಿಗೂ ಸಮಾನ ಅವಕಾಶಗಳನ್ನು ಬೇರೆ ಬೇರೆ ಸಮಯದಲ್ಲಿ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಿದೆ. ಪಥ ಸಂಚಲನ ಯಾರ ವಿರುದ್ಧ ಅಲ್ಲ, ಚಿತ್ತಾಪುರದಲ್ಲೇ ಸಾಕಷ್ಟು ಬಾರಿ ಪಥ ಸಂಚಲನ ನಡೆದಿದೆ. ಆಗ ಯಾವುದೇ ಅಹಿತಕರ ಘಟನೆ ನೆಡದಿಲ್ಲ. ಹೀಗಾಗಿ ನಮ್ಮ ಪಥ ಸಂಚಲನದ ವೇಳೆ ಎಲ್ಲಾ ಸಂಘಟನೆಯವರು ಇದ್ದು ಸಹಕರಿಸಬೇಕು. ಶಾಂತಿಯುತ, ಗೌರವಪೂರ್ಣ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ 500 ಪಥ ಸಂಚಲನ ನಡೆದಿವೆ. ಚಿತ್ತಾಪುರ ಐತಿಹಾಸಿಕ ನಗರ, ಇಲ್ಲಿನ ಪಥ ಸಂಚಲನ ಯಾವಾಗಲೂ ಶಾಂತಿಯುತವಾಗಿಯೇ ಇರಲಿದೆ. ಸದರಿ ಪ್ರಕರಣ ಇದೀಗ ಕೋರ್ಟ್‌ನಲ್ಲಿದ್ದು, ಹೆಚ್ಚಿಗಿ ಏನೂ ಹೇಳಲಾಗದು. ಹೀಗಾಗಿ ಎಲ್ಲರೂ ದೇಶದ ಏಳಿಗೆಗೆ ಶ್ರಮಿಸೋಣ. ಅದಕ್ಕಾಗಿ ಸಂಘದ ನ.2ರ ಪಥ ಸಂಚಲನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅಶೋಕ ಪಾಟೀಲ್ ಅವರು ಸಂಘದ ಪರವಾಗಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ