
ಕಲಬುರಗಿ (ನ.17): ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಆರೆಸ್ಸೆಸ್ ಜನ್ಮ ಶತಾಬ್ದಿ ಸಂಭ್ರಮದ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು. ಹೈಕೋರ್ಟ್ ಷರತ್ತಿನಂತೆ 300 ಗಣವೇಷಧಾರಿ ಸ್ವಯಂಸೇವಕರು, 50 ಮಂದಿ ಬ್ಯಾಂಡ್ ವಾದಕರ ವೃಂದದವರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಪಟ್ಟಣದಲ್ಲಿರುವ ಬಜಾಜ್ ಕಲ್ಯಾಣ ಮಂಟಪದ ಬಳಿ ಸರಿಯಾಗಿ 3 ಗಂಟೆಗೆ ಆರಂಭವಾದ ಪಥ ಸಂಚಲನ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕಾಶಿ ಗಲ್ಲಿ ಮಾರ್ಗವಾಗಿ ಸಾಗಿ 45 ನಿಮಿಷದೊಳಗೇ ಮತ್ತೆ ಬಜಾಜ್ ಕಲ್ಯಾಣ ಮಂಟಪದಲ್ಲೇ ಸಮಾಪನಗೊಂಡಿತು.
ಪಥ ಸಂಚಲನದ ನಂತರ ಇದೇ ಕಲ್ಯಾಣ ಮಂಟಪದಲ್ಲಿ ಬೌದ್ಧಿಕ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕಲಬುರಗಿ ಆರೆಸ್ಸೆಸ್ ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ಮಾತನಾಡಿದರು. ಪಥ ಸಂಚಲನ ಹಾಗೂ ಬೌದ್ದಿಕ ಸಮಾರಂಭ ಎರಡನ್ನೂ ಸೇರಿಸಿ ಹೈಕೋರ್ಟ್ ಷರತ್ತಿನಂತೆ ಮಧ್ಯಾಹ್ನ 3 ಗಂಟೆಯಿಂದ 5.30 ರೊಳಗೇ ತನ್ನೆಲ್ಲ ಕಾರ್ಯಕ್ರಮಗಳನ್ನು ಆರ್‌ಎಸ್‌ಎಸ್ ಪೂರೈಸಿತು.
ಚಿತ್ತಾಪುರವಿಡೀ ಕೇಸರಿಮಯ: ಆರೆಸ್ಸೆಸ್ ಪಥ ಸಂಚಲನದ ನಿಮಿತ್ತವಾಗಿ ಇಡೀ ಪಟ್ಟಣದಾದ್ಯಂತ ಕೇಸರಿ ಬಾವುಟಗಳು, ಭಗವಾಧ್ವಜಗಳು ರಾರಾಜಿಸಿದವು. ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲೆಲ್ಲಾ ಸಂಘದವರು ಸ್ವಾಗತ ಕಮಾನು ಅಳವಡಿಸಿ ಸಾರ್ವಜನಿಕರ ಗಮನ ಸೆಳೆದಿದ್ದರು. ಕಾಶಿ ಗಲ್ಲಿಯಲ್ಲಂತೂ ಅಲ್ಲಿನ ನಿವಾಸಿಗಳು ತಳಿರು ತೋರಣ ಕಟ್ಟಿ, ಮನೆಯಂಗಳದಲ್ಲಿ ರಂಗವಲ್ಲಿ ಹಾಕಿ, ರಸ್ತೆಯುದ್ದಕ್ಕೂ ಶೃಂಗಾರ ಮಾಡಿದ್ದರು. ಗಣವೇಷಧಾರಿಗಳು ಬರುತ್ತಿದ್ದಂತೆಯೇ ಕಲಶ ಸ್ವಾಗತ ಕೋರಿ ಪುಷ್ಪವೃಷ್ಟಿಗರೆದರು. ಸಂಘದ ನಮಸ್ತೆ ಸದಾ ವತ್ಸಲೇ ಗೀತೆಗಳು, ಭಾರತ್ ಮಾತಾಕಿ ಜೈ ಜಯಘೋಷಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.
ಪೊಲೀಸ್ ಸರ್ಪಗಾವಲು: ಪಥ ಸಂಚಲನ ನಿಮಿತ್ತ ಚಿತ್ತಾಪುರ ಪೋಲಿಸ್‌ಮಯವಾಗಿತ್ತು. 1000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದಲ್ಲದೆ, ಡ್ರೋನ್ ಕ್ಯಾಮೆರಾಗಳು, ಸಿಸಿಟಿವಿಗಳನ್ನು ಅಳವಡಿಸಿ ಇಡೀ ಪಥ ಸಂಚಲನ, ಬೌದ್ದಿಕ ಸಮಾರಂಭಗಳ ಚಟುವಟಿಕೆಗಳನ್ನೆಲ್ಲ ಪೊಲೀಸರು ಚಿತ್ರೀಕರಿಸಿಕೊಂಡರು.
ಬಿಜೆಪಿ ಮುಖಂಡ ಮಣಿಕಂಠಗೆ ನಿರ್ಬಂಧ: ಆರೆಸ್ಸೆಸ್ ಪಥ ಸಂಚಲನ ಹಿನ್ನೆಲೆಯಲ್ಲಿ ಚಿತ್ತಾಪುರ ಪ್ರವೇಶಿಸದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ತಹಶೀಲ್ದಾರ್ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವ ರಾಠೋಡ್, ಈ ಸಂದರ್ಭದಲ್ಲಿ ಚಿತ್ತಾಪುರಕ್ಕೆ ಬಂದರೆ ಖರ್ಗೆ ಅಭಿಮಾನಿಗಳು ಕೆರಳಿ, ಗಲಾಟೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಚಿತ್ತಾಪುರದಲ್ಲಿನ ಪಥ ಸಂಚಲನ, ಸುತ್ತಲಿನ ಬೆಳವಣಿಗೆಗಳು ಸಂಘಕ್ಕೆ ಹೊಸ ಅನುಭವವೆಂದು ಆರೆಸ್ಸೆಸ್ ಬೌದ್ಧಿಕ ಪ್ರಮುಖ ಕೃಷ್ಣಾ ಜೋಷಿ ಹೇಳಿದರು. ಚಿತ್ತಾಪುರ ಪಥಸಂಚಲನ ವಿಚಾರದಲ್ಲಿ ಕೆಲವು ಹೊಸ ಅನುಭವಗಳು ನಮಗಾಗಿವೆ. ಆದರೆ ಇವು ಯಾವುವು ಆರ್‌ಎಸ್‌ಎಸ್‌ಗೆ ಹೊಸದೇನು ಅಲ್ಲ, ನಮ್ಮ ಸಂಘಟನೆಯ ಧ್ಯೇಯದಂತೆ ನಾವು ಶಾಂತಿಯುತವಾಗಿ ಪಥಸಂಚಲನ ಪೂರ್ಣಗೊಳಿಸುತ್ತೇವೆ. ಯಾರು ಏನು ಗಳಿಸಿದರೋ ಅವರನ್ನೇ ಕೇಳಬೇಕು. ಆದರೆ, ನಾವಂತೂ ಪಥ ಸಂಚಲನ ನಡೆಸುವ ನಮ್ಮ ಹಕ್ಕು ಉಳಿಸಿಕೊಂಡಿದ್ದೇವೆಂದು ಕೃಷ್ಣಾ ಜೋಷಿ ಹೇಳಿದರು. ಕನ್ನಡಪ್ರಭ ಜೊತೆ ಮಾತನಾಡಿ, ಶಾಂತಿಯುತವಾಗಿ, ಶಿಸ್ತುಬದ್ಧವಾಗಿ, ಯಾವುದೇ ರೀತಿಯ ಅಶಾಂತಿಗೆ ಅವಕಾಶ ಕೊಡದಂತೆ ಕಾರ್ಯಕ್ರಮ ನಡೆಸುವುದೇ ನಮ್ಮ ಧ್ಯೇಯವಾಗಿತ್ತು. ಹಾಗೇ ಚಿತ್ತಾಪುರದಲ್ಲಿ ಪಥ ಸಂಚಲನ ನಡೆದಿದೆ. ನಮ್ಮ ಪಥ ಸಂಚಲನ ಯಾರ ವಿರುದ್ಧವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ