ತುಂಗಭದ್ರಾ ಕ್ರಸ್ಟ್ ಗೇಟ್ ದುರಸ್ತಿ: ರಾಜ್ಯದಲ್ಲಿ ಮುಂದಿನ ವರ್ಷ ಅಕ್ಕಿ ಬೆಲೆ ಇನ್ನಷ್ಟು ಏರಿಕೆ?

Published : Nov 17, 2025, 06:59 AM IST
rice price hike

ಸಾರಾಂಶ

ರಾಜ್ಯದಲ್ಲಿಯೇ ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶಗಳಲ್ಲೊಂದಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದ ಪರಿಣಾಮ..

ಸೋಮರಡ್ಡಿ ಅಳವಂಡಿ

ಕೊಪ್ಪಳ (ನ.17): ರಾಜ್ಯದಲ್ಲಿಯೇ ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶಗಳಲ್ಲೊಂದಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದ ಪರಿಣಾಮ ಭತ್ತ ಮತ್ತು ಅಕ್ಕಿ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯ ಮುನ್ಸೂಚನೆ ಕಂಡು ಬರಲಾರಂಭಿಸಿದೆ. ಹೌದು, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ಬರೋಬ್ಬರಿ 12.5 ಲಕ್ಷ ಎಕರೆ ಪ್ರದೇಶದಲ್ಲಿ (ಇದು ಅಧಿಕೃತ ಲೆಕ್ಕಾಚಾರ, ವಾಸ್ತವವಾಗಿ ಇನ್ನೂ ಜಾಸ್ತಿಯಿದೆ) ಭತ್ತ ಬೆಳೆಯಲಾಗುತ್ತದೆ.

ಬರೋಬ್ಬರಿ 2.5 ಕೋಟಿ ಕ್ವಿಂಟಲ್‌ ಭತ್ತ ಉತ್ಪಾದನೆ ಸಾಮರ್ಥ್ಯ ಇರುವ ಈ ಪ್ರದೇಶದಲ್ಲಿ ಈ ಬಾರಿ ಬೆಳೆಯನ್ನೇ ಬೆಳೆಯುವುದಿಲ್ಲ ಎನ್ನುವ ಅಂಶ ಸಹಜವಾಗಿಯೇ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದೇ ಹೇಳಲಾಗುತ್ತಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಭತ್ತದ ಬೆಳೆ ರಾಜ್ಯ ಸೇರಿದಂತೆ ನೆರೆಯ ರಾಜ್ಯದ ಬಹುತೇಕ ಅಕ್ಕಿಯ ಬೇಡಿಕೆ ಈಡೇರಿಸುತ್ತದೆ. ಅಷ್ಟೇ ಅಲ್ಲ ನಾನಾ ರಾಷ್ಟ್ರಗಳಿಗೂ ಇಲ್ಲಿಯ ಅಕ್ಕಿ ರಫ್ತು ಆಗುತ್ತದೆ.

ಕಾರಣ ಏನು?: ತುಂಗಭದ್ರಾ ಡ್ಯಾಂನ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಸ್ಟ್ ಗೇಟ್ ದುರಸ್ತಿ ಕಾರಣದಿಂದಾಗಿ 2ನೇ ಬೆಳೆಗೆ ನೀರು ಕೊಡದಿರಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ನೀರಿದ್ದರೂ ಈ ವರ್ಷ 2ನೇ ಬೆಳೆಗೆ ನೀರು ಕೊಡದೆ ಇರುವ ಕುರಿತು ರೈತ ಸಮುದಾಯದಲ್ಲಿ ಆಕ್ರೋಶದ ಮಾತುಗಳು ಇದ್ದೇ ಇವೆ. ಆದರೆ, ತುಂಗಭದ್ರಾ ಜಲಾಶಯದ 34 ಕ್ರಸ್ಟ್ ಗೇಟ್ ಪೈಕಿ ಬಹುತೇಕ ಗೇಟ್‌ಗಳು ಶೇ.30ರಿಂದ 48ರಷ್ಟು ಶಿಥಿಲಗೊಂಡಿವೆ. ಹೀಗಾಗಿ, ಅವುಗಳ ದುರಸ್ತಿ ಅನಿವಾರ್ಯ ಎಂದು ಕೇಂದ್ರ ಜಲ ಆಯೋಗ ವರದಿ ನೀಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿಂದ ಕ್ರಸ್ಟ್ ಗೇಟ್ ಬದಲಾಯಿಸುವ ಕಾರ್ಯ ಆರಂಭವಾಗಲಿದೆ. ಹೀಗಾಗಿ 2ನೇ ಬೆಳೆಗೆ ನೀರು ಬಿಡದಿರಲು ನಿರ್ಧರಿಸಲಾಗಿದೆ. ಡಿಸೆಂಬರ್ ವೇಳೆಗೆ ಜಲಾಶಯದ ನೀರನ್ನು 40 ಟಿಎಂಸಿಗೆ ಇಳಿಸಲಾಗುತ್ತದೆ. ಅನಂತರ ದುರಸ್ತಿ ಕಾರ್ಯ ನಡೆಯುತ್ತದೆ.

ಮಾರುಕಟ್ಟೆ ಮೇಲೆ ಪರಿಣಾಮ

ಇದರಿಂದ ಈಗ ಮಾರುಕಟ್ಟೆಯಲ್ಲಿ ನಿಧಾನಕ್ಕೆ ಅಕ್ಕಿಯ ದರ ಏರಲು ಪ್ರಾರಂಭವಾಗಿದೆ. 2ನೇ ಬೆಳೆಗೆ ನೀರಿಲ್ಲ ಎನ್ನುವ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಆರ್‌ಎನ್‌ಆರ್‌ ಭತ್ತದ ದರ 75 ಕೆಜಿಗೆ ₹1950 ರಿಂದ ₹2 ಸಾವಿರ ವರೆಗೆ ಏರಿಕೆಯಾಗಿದೆ. ಇನ್ನು ಸೋನಾ ಮಸೂರಿ ಭತ್ತದ ದರವೂ ಏರುವ ಸಾಧ್ಯತೆ ಇದೆ. ಮುಂಗಾರು ಬೆಳೆ ಕಟಾವು ಪ್ರಾರಂಭವಾಗುತ್ತಿದೆ. ಕಟಾವು ಮುಗಿಯುತ್ತಿದ್ದಂತೆ ಅಕ್ಕಿ ಮತ್ತು ಭತ್ತ ದಲ್ಲಾಳಿಗಳು ಸಂಗ್ರಹಿಸಿಟ್ಟುಕೊಂಡು, ಬೇಸಿಗೆಯಲ್ಲಿನ ಭತ್ತದ ಕಟಾವು ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಗೂ ಇದು ಕಾರಣವಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.

ತುಂಗಭದ್ರಾ ಕ್ರಸ್ಟ್‌ಗೇಟ್‌ ದುರಸ್ತಿ ಮಾಡದೆ ವಿಧಿಯಿಲ್ಲ. ಹೀಗಾಗಿ, ಎರಡನೇ ಬೆಳೆಗೆ ನೀರು ಬಿಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಸಹಜವಾಗಿಯೇ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
-ಶಿವರಾಜ ತಂಗಡಗಿ, ಸಚಿವ, ಅಧ್ಯಕ್ಷ, ನೀರಾವರಿ ಸಲಹಾ ಸಮಿತಿ

ಎರಡನೇ ಬೆಳೆಗೆ ನೀರಿಲ್ಲ ಎಂದು ಘೋಷಣೆ ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಭತ್ತದ ದರ ಏರಲು ಪ್ರಾರಂಭವಾಗಿದೆ. ಭತ್ತದ ದರ ಕುಸಿಯುತ್ತದೆ ಎಂದಾಗಲೇ ಸರ್ಕಾರದ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವಂತಾಗಿದೆ.
-ಉಮೇಶ ಪಲ್ಲೇದ, ರೈತ, ಹಿಟ್ನಾಳ ಗ್ರಾಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ