ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಆರ್‌ಎಸ್‌ಎಸ್ ಕಳವಳ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಆರ್‌ಎಸ್‌ಎಸ್ ಕಳವಳ ವ್ಯಕ್ತಪಡಿಸಿದೆ. ಹಿಂದೂ ಸಮುದಾಯವನ್ನು ಬೆಂಬಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆ ಈ ಬಗ್ಗೆ ಗಮನಹರಿಸುವಂತೆ ಆಗ್ರಹಿಸಲಾಗಿದೆ.

RSS concerned over atrocities on Hindus in Bangladesh mrq

ಬೆಂಗಳೂರು : ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಅಲ್ಲಿನ ಮೂಲಭೂತವಾದಿ ಇಸ್ಲಾಮಿಕ್‌ ಶಕ್ತಿಗಳು ನಿರಂತರವಾಗಿ ನಡೆಸುತ್ತಿರುವ ದಬ್ಬಾಳಿಕೆಗಳು ಹಾಗೂ ಹಿಂಸಾಚಾರ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ‘ಅಖಿಲ ಭಾರತೀಯ ಪ್ರತಿನಿಧಿ ಸಭೆ’ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದ ಹಿಂದೂ ಸಮುದಾಯವನ್ನು ಒಗ್ಗಟ್ಟಿನಿಂದ ಬೆಂಬಲಿಸಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ಮಾಗಡಿ ರಸ್ತೆಯ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಆರ್‌ಎಸ್‌ಎಸ್‌ನ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ’ಯ ಎರಡನೇ ದಿನವಾದ ಶನಿವಾರ ಬಾಂಗ್ಲಾದೇಶದ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳನ್ನು ಬೆಂಬಲಿಸುವ ಈ ನಿರ್ಣಯ ಅಂಗೀಕರಿಸಲಾಗಿದೆ.

Latest Videos

ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಅಲ್ಲಿನ ಮೂಲಭೂತವಾದಿ ಇಸ್ಲಾಮಿಕ್ ಶಕ್ತಿಗಳಿಂದ ನಿರಂತರ ಮತ್ತು ಯೋಜನಾಬದ್ಧವಾಗಿ ನಡೆಸುತ್ತಿರುವ ಹಿಂಸಾಚಾರ, ಅನ್ಯಾಯ ಮತ್ತು ದಬ್ಬಾಳಿಕೆಗಳು ಮಾನವ ಹಕ್ಕು ಉಲ್ಲಂಘನೆಯ ಗಂಭೀರ ಪ್ರಕರಣವಾಗಿದೆ.

ಅತ್ಯಾಚಾರ, ಮತಾಂತರ ಹೆಚ್ಚಳ: ಬಾಂಗ್ಲಾದೇಶದ ಇತ್ತೀಚಿನ ಆಡಳಿತ ಬದಲಾವಣೆ ಬಳಿಕ ಮಠಗಳು, ದೇವಸ್ಥಾನಗಳು, ದುರ್ಗಾ ಪೂಜಾ ಪೆಂಡಾಲುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೇಲಿನ ದಾಳಿ, ದೇವರ ಪ್ರತಿಮೆಗಳ ವಿರೂಪ, ಬರ್ಬರ ಹತ್ಯೆಗಳು, ಆಸ್ತಿಹಾನಿ, ದರೋಡೆ, ಮಹಿಳೆಯರ ಅಪಹರಣ, ಅತ್ಯಾಚಾರ, ಬಲವಂತದ ಮತಾಂತರ ಮೊದಲಾದ ಘಟನೆಗಳು ನಿರಂತರ ವರದಿಯಾಗುತ್ತಿವೆ. ಈ ಎಲ್ಲಾ ಘಟನೆಗಳ ಮತೀಯ ಆಯಾಮ ನಿರಾಕರಿಸುವುದು ಮತ್ತು ಕೇವಲ ರಾಜಕೀಯ ಪ್ರೇರಿತ ಎಂದು ಸಾಧಿಸುವುದು ಸತ್ಯದ ನಿರಾಕರಣೆಯೇ ಆಗಿದೆ. ಏಕೆಂದರೆ, ಆ ಘಟನೆಗಳಿಗೆ ಬಹುತೇಕ ಹಿಂದೂ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯವರೇ ಬಲಿಯಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಸ್ಲಿಂ ಮತಾಂತರದಿಂದ ಹಿಂದೂ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಹೊಸದೇನಲ್ಲ. ಬಾಂಗ್ಲಾದಲ್ಲಿ ಹಿಂದೂ ಜನಸಂಖ್ಯೆ ನಿರಂತರ ಇಳಿಕೆಯಾಗಿರುವುದು ಅವರ ಅಸ್ತಿತ್ವದ ಬಿಕ್ಕಟ್ಟು ತೋರಿಸುತ್ತದೆ. 1951ರಲ್ಲಿ ಶೇ.22ರಷ್ಟಿದ್ದ ಹಿಂದೂಗಳ ಸಂಖ್ಯೆ ಪ್ರಸ್ತುತ ಶೇ.7ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ನಡೆದ ಹಿಂಸಾಚಾರ ಮತ್ತು ದ್ವೇಷಕ್ಕೆ ಸರ್ಕಾರ ಮತ್ತು ಸಂಸ್ಥೆಗಳಿಂದ ಸಿಕ್ಕ ಬೆಂಬಲ ತೀವ್ರ ಕಳವಳಕಾರಿ. ಬಾಂಗ್ಲಾದಲ್ಲಿ ಬೆಳೆಯುತ್ತಿರುವ ಭಾರತ ವಿರೋಧಿ ಧೋರಣೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ತೀವ್ರ ಹಾನಿಗೊಳಿಸುವ ಸಾಧ್ಯತೆಯಿದೆ.

ಕೆಲ ಅಂತಾರಾಷ್ಟ್ರೀಯ ಶಕ್ತಿಗಳು ಬುದ್ಧಿಪೂರ್ವಕವಾಗಿ ಭಾರತದ ನೆರೆಹೊರೆಯ ಪ್ರದೇಶಗಳಲ್ಲಿ ಅವಿಶ್ವಾಸ ಮತ್ತು ವೈರುಧ್ಯದ ವಾತಾವರಣ ನಿರ್ಮಿಸುತ್ತಿವೆ. ಈ ಮುಖಾಂತರ ಒಂದು ದೇಶವನ್ನು ಇನ್ನೊಂದು ದೇಶದ ವಿರುದ್ಧವಾಗಿ ಅಸ್ಥಿರತೆ ಪಸರಿಸಲು ಪ್ರಯತ್ನಿಸುತ್ತಿವೆ. ಭಾರತ ವಿರೋಧಿ ವಾತಾವರಣ, ಪಾಕಿಸ್ತಾನ ಮತ್ತು ‘ಡೀಪ್ ಸ್ಟೇಟ್’ ಶಕ್ತಿಗಳ ಸಕ್ರಿಯತೆ ಮೇಲೆ ನಿಗಾವಹಿಸಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ಚಿಂತನಶೀಲ ವರ್ಗ ಮತ್ತು ಅಂತಾರಾಷ್ಟ್ರೀಯ ವಿಷಯಗಳ ವಿಶೇಷ ತಜ್ಞರಲ್ಲಿ ಪ್ರತಿನಿಧಿ ಸಭೆ ಆಗ್ರಹಿಸಿದೆ.

ಇಲ್ಲಿನ ಸಂಪೂರ್ಣ ಪ್ರದೇಶವು ಸಮಾನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಸಂಬಂಧ ಹೊಂದಿದೆ. ಒಂದು ಭಾಗದಲ್ಲಿ ಉಂಟಾಗುವ ತಳಮಳಗಳು ಇಡೀ ಪ್ರದೇಶದಲ್ಲಿ ಪ್ರಭಾವ ಬೀರುತ್ತವೆ. ಜಾಗೃತ ಜನರು ಭಾರತ ಮತ್ತು ನೆರೆಹೊರೆಯ ದೇಶಗಳ ಈ ಸಮಾನ ಪರಂಪರೆ ಬಲಪಡಿಸಲು ಪ್ರಯತ್ನಿಸಬೇಕು. ಗಮನಾರ್ಹ ಸಂಗತಿ ಎಂದರೆ, ಬಾಂಗ್ಲಾದೇಶದ ಹಿಂದೂ ಸಮುದಾಯ ಈ ದೌರ್ಜನ್ಯವನ್ನು ಶಾಂತಿ, ಒಗ್ಗಟ್ಟು, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಎದುರಿಸಿದೆ.

ಈ ಗಟ್ಟಿನತಕ್ಕೆ ಭಾರತ ಮತ್ತು ವಿಶ್ವದೆಲ್ಲೆಡೆಯ ಹಿಂದೂ ಸಮಾಜದಿಂದ ನೈತಿಕ-ಮಾನಸಿಕ ಬೆಂಬಲ ದೊರೆಕಿದ್ದು ಶ್ಲಾಘನೀಯ. ಭಾರತ ಸರ್ಕಾರ ಬಾಂಗ್ಲಾದೇಶದ ಹಿಂದೂ ಸಮುದಾಯದ ಭದ್ರತೆ, ಗೌರವ ಮತ್ತು ಕಲ್ಯಾಣ ರಕ್ಷಣೆಗಾಗಿ ಬಾಂಗ್ಲಾದೇಶದ ಸರ್ಕಾರದೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವ ಎಲ್ಲಾ ಪ್ರಯತ್ನ ನಡೆಸಬೇಕು.

ವಿಶ್ವಸಂಸ್ಥೆ ಸೇರಿ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಬಾಂಗ್ಲಾದೇಶದ ಹಿಂದೂಗಳು ಸೇರಿ ಇತರೆ ಅಲ್ಪಸಂಖ್ಯಾತರ ಮೇಲೆ ನಡೆದಿರುವ ಅಮಾನವೀಯ ಹಿಂಸಾಚಾರ, ದಬ್ಬಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಹಿಂಸಾಚಾರ ನಿಲ್ಲಿಸುವಂತೆ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು. ವಿಶ್ವದ ಎಲ್ಲಾ ದೇಶಗಳ ಹಿಂದೂ ಸಮುದಾಯ, ನಾಯಕರು, ಸಂಸ್ಥೆಗಳು ಬಾಂಗ್ಲಾದೇಶದ ಹಿಂದೂಗಳ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭೆ ಆಗ್ರಹಿಸಿದೆ.

vuukle one pixel image
click me!