ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ವಿಚಾರಣೆಗೆ ನ್ಯಾಯಾಲಯವು ಪೊಲೀಸರಿಗೆ ಮಂಗಳವಾರ ಅನುಮತಿ ನೀಡಿದೆ.
ಬೆಂಗಳೂರು (ಆ.28): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ವಿಚಾರಣೆಗೆ ನ್ಯಾಯಾಲಯವು ಪೊಲೀಸರಿಗೆ ಮಂಗಳವಾರ ಅನುಮತಿ ನೀಡಿದೆ. ಈ ಅನುಮತಿ ಹಿನ್ನಲೆಯಲ್ಲಿ ದರ್ಶನ್, ಅವರ ಆಪ್ತ ನಾಗರಾಜ, ಕುಖ್ಯಾತ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹಾಗೂ ಧರ್ಮನನ್ನು ಪೊಲೀಸರು ಪ್ರಶ್ನಿಸಿ ಹೇಳಿಕೆ ಪಡೆಯಲಿದ್ದಾರೆ. ಇದೇ ಪ್ರಕರಣ ಕುರಿತು ಕಾರಾಗೃಹದ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೌಲಭ್ಯ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಆ ಎರಡು ಪ್ರಕರಣಗಳಲ್ಲಿ ದರ್ಶನ್ ಎ1 ಆಗಿದ್ದಾರೆ. ಜೈಲಿನೊಳಗೆ ಕೃತ್ಯ ನಡೆದಿರುವ ಕಾರಣ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ವಿಚಾರಣೆಗೆ ನ್ಯಾಯಾಲಯದ ಪೂರ್ವಾನುಮತಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಅನುಮತಿ ಕೋರಿ ಪೊಲೀಸರು ಮನವಿ ಮಾಡಿದ್ದರು. ಈ ಮನವಿಗೆ ನ್ಯಾಯಾಲಯವು ಸಮತ್ಮಿಸಿದೆ.
ತನಿಖೆ ಪ್ರಗತಿ ಪರಿಶೀಲಿಸಿದ ಆಯುಕ್ತರು: ರಾಜಾತಿಥ್ಯ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ಖುದ್ದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರೇ ವಹಿಸಿದ್ದಾರೆ. ಈ ಸಂಬಂಧ ಮಂಗಳವಾರ ಪರಪ್ಪನ ಅಗ್ರಹಾರ ಠಾಣೆಗೆ ಭೇಟಿ ನೀಡಿದ ಆಯುಕ್ತರು, ತನಿಖೆ ಕುರಿತು ಪೊಲೀಸರ ಜತೆ ಸಮಾಲೋಚಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಸಹ ಅಧಿಕಾರಿಗಳಿಗೆ ಆಯುಕ್ತರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಡಿಂಪಲ್ ಕ್ವೀನ್ ಜತೆ ದಾಸನ ರಹಸ್ಯ ಮಾತುಕತೆ: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅಭಿಮಾನಿಯ ಹುಚ್ಚಾಟ!
ಇದೇ ವೇಳೆ ಕಾರಾಗೃಹದ ಭದ್ರತೆ ಸಂಬಂಧ ಮುಖ್ಯ ಅಧೀಕ್ಷಕ ಸುರೇಶ್ ಸೇರಿದಂತೆ ಕಾರಾಗೃಹದ ಅಧಿಕಾರಿಗಳ ಜತೆ ಆಯುಕ್ತರು ಸಮಾಲೋಚಿಸಿದ್ದಾರೆ. ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಕೂಡ ನಿಗಾವಹಿಸಿದ್ದ ಆಯುಕ್ತರು, ಪ್ರತಿ ದಿನ ಠಾಣೆಗೆ ತೆರಳಿ ತನಿಖೆ ಪ್ರಗತಿ ಕುರಿತು ಮಾಹಿತಿ ಪಡೆಯುತ್ತಿದ್ದರು. ಸೂಕ್ಷ್ಮ ಪ್ರಕರಣವಾಗಿರುವ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗ್ರಾಸವಾಗಿರುವ ಕಾರಣ ತನಿಖೆ ಹಾದಿ ತಪ್ಪದಂತೆ ಆಯುಕ್ತರು ಜಾಗ್ರತೆ ವಹಿಸಿದ್ದಾರೆ.