
ಬೆಂಗಳೂರು (ನ.07): ಬೆಂಗಳೂರಿನಲ್ಲಿ ಇನ್ನುಮುಂದೆ ಮೊಬೈಲ್ ರೀಚಾರ್ಜ್ ಮಾದರಿಯಲ್ಲಿಯೇ ಅಡ್ವಾನ್ಸ್ ಆಗಿಯೇ ಬೆಸ್ಕಾಂ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಅನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ನೀವು ರೀಚಾರ್ಜ್ ಮಾಡಿದ ಹಣದ ಮೌಲ್ಯದಷ್ಟು ವಿದ್ಯುತ್ ಪೂರೈಕೆಯಾದ ನಂತರ ತಂತಾನೆ ಸ್ಥಗಿತಗೊಳ್ಳುತ್ತದೆ. ಆಗ ಪುನಃ ರೀಚಾರ್ಜ್ ಮಾಡಿ ವಿದ್ಯುತ್ ಪೂರೈಕೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲು ಬೆಸ್ಕಾಂ ಮುಂದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ವಾಸ ಮಾಡುವ ಜನರಿಂದ ದೊಡ್ಡ ಮಟ್ಟದಲ್ಲಿಯೇ ಹಣ ವಸೂಲಿ ಮಾಡಿ ಸುಗಮ ಸೇವೆಯನ್ನು ಕೊಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ಕೊಡಲು ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಮನೆಗಳಿಗಾಗಲೇ ನೀವು ಗೇಲ್ ಗ್ಯಾಸ್‌ನಿಂದ ಎಷ್ಟು ಮೀಟರ್ ಅಳವಡಿಕೆ ಮಾಡಿ ಗ್ಯಾಸ್ ಸಪ್ಲೈ ಮಾಡಲಾಗುತ್ತದೆ. ನೀವು ಬಳಕೆ ಮಾಡುವಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ವಿದ್ಯುತ್, ನೀರಿನ ಬಿಲ್ ಸೇರಿದಂತೆ ಎಲ್ಲವೂ ಇದೇ ರೀತಿ ನಾವು ಬಳಕೆ ಮಾಡಿದಷ್ಟು ಹಣ ಪಾವತಿ ಮಾಡಬೇಕಿತ್ತು. ಆದರೆ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಸ್ಕಾಂ ಮೊದಲು ನೀವು ಹಣ ಪಾವತಿ ಮಾಡಿ ರೀಚಾರ್ಜ್ ಮಾಡಿಕೊಂಡ ಹಣದ ಮೊತ್ತಕ್ಕೆ ಎಷ್ಟಾಗುತ್ತದೆಯೋ ಅಷ್ಟು ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಹಣ ಪಾವತಿ ಮಾಡಿದಷ್ಟು ವಿದ್ಯುತ್ ಪೂರೈಸಿದ ನಂತರ ಕರೆಂಟ್ ಸ್ಥಗಿತವಾಗಿತ್ತದೆ. ಪುನಃ ಮೊಬೈಲ್ ರೀಚಾರ್ಜ್‌ನಂತೆ ಕರೆಂಟ್ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಪೂರೈಕೆಯನ್ನು ಪಡೆಯಬಹುದು.
ಇದನ್ನೂ ಓದಿ: 10 ಸಾವಿರ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳು ರದ್ದು: ಯಾಕೆ ಗೊತ್ತಾ?
ಹೊಸ ಕಟ್ಟಡ ನಿರ್ಮಾಣಕಾರರಿಂದ ಭಾರೀ ನಷ್ಟ: ಪ್ರಸ್ತುತವಾಗಿ ನಾವು ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಮೊದಲೇ ಹಣ ಪಾವತಿಸಿ ಬಳಿಕ ಫೋನಿನಲ್ಲಿ ಕರೆ ಮತ್ತು ಇಂಟರ್ನೆಟ್ ಡೇಟಾ ಬಳಸುವಂತೆ, ವಿದ್ಯುತ್ ಬಳಕೆಗೂ ಮೊದಲೇ ರೀಚಾರ್ಜ ಮಾಡುವ ಪ್ಲಾನ್‌ಗಳು ಬರುತ್ತವೆ. ಈಗ ಜಾರಿಯಲ್ಲಿರುವ ವಿದ್ಯುತ್ ಬಳಸಿ ಬಿಲ್ ಕಟ್ಟುವ ವ್ಯವಸ್ಥೆಯಿಂದ ಬೆಸ್ಕಾಂ ಸಂಸ್ಥೆಗೆ ಭಾರೀ ಸಮಸ್ಯೆ ಎದುರಾಗುತ್ತಿದೆ. ಇತ್ತೀಚೆಗೆ ಕೆಲವು ಗ್ರಾಹಕರು ಬಿಲ್ ಪಾವತಿಸದೆ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ವಿದ್ಯುತ್ ಇಲಾಖೆಗೆ ಭಾರೀ ನಷ್ಟ ಉಂಟಾಗುತ್ತಿದೆ. ಕೆಲವು ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ವಿದ್ಯುತ್ ಸಂಪರ್ಕವನ್ನು ಪಡೆದು ಬೇಕಾಬಿಟ್ಟಿಯಾಗಿ ವಿದ್ಯುತ್ ಬಳಕೆ ಮಾಡಿ ನಂತರ ಬಿಲ್ ಪಾವತಿ ಮಾಡದೇ ಹೋಗಿಬಿಡುತ್ತಾರೆ. ಇದರಿಂದ ಆಗುತ್ತಿರುವ ನಷ್ಟ ಭರಿಸಲು ಇಂಧನ ಇಲಾಖೆ ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಿದೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕನ ಹೃದಯಾಘಾತ: 50 ಜನರಿರುವ ಬಸ್‌ನಲ್ಲಿ ಮುಂದಾಗಿದ್ದು ದುರಂತ!
ಈ ಹೊಸ ವ್ಯವಸ್ಥೆಗೆ ಪ್ರೀಪೇಯ್ಡ್ ಮೀಟರ್ ಎಂದು ಹೆಸರು: ಹೀಗಾಗಿ, ಇನ್ನುಮುಂದೆ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಪ್ರಮುಖವಾಗಿ ಉಂಟಾಗುತ್ತಿದ್ದ ವಿದ್ಯುತ್ ಬಿಲ್ ನಷ್ಟವನ್ನು ತಡೆಯಲು ಮುಂದಾಗಿದೆ. ಇದಾದ ನಂತರ ಉಳಿದ ಎಲ್ಲ ಹಳೆಯ ಗ್ರಾಹಕರ ಮನೆಗಳಿಗೂ ಈ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡುವ ಕಾರ್ಯ ಮಾಡಲಾಗುತ್ತದೆ. ಇದರಿಂದ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದಂತೆ ದುಡ್ಡು ಕೂಡ ಕಟ್ ಆಗಲಿದೆ. ಬ್ಯಾಲೆನ್ಸ್ ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಲಿದೆ. ಆದ್ದರಂದ ಮನೆಯ ಗ್ರಾಹಕರು ವಿದ್ಯುತ್ ಬಳಕೆಯ ಯುನಿಟ್‌ಗೆ ತಕ್ಕಂತೆ ರೀಚಾರ್ಜ್ ಮಾಡಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ