
ಬೆಂಗಳೂರು(ಜು.11): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಲು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಯಾವ ನೈತಿಕತೆ ಇದೆ. ಅವರೇನು ಸಂಸದರಾ? ಶಾಸಕರಾ? ಜಿಲ್ಲಾ ಪಂಚಾಯಿತಿ ಸದಸ್ಯರಾ? ಎಂದು ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಕಿಡಿಕಾರಿದ್ದಾರೆ.
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರು ಮೃತಪಟ್ಟಾಗ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ದಿದ್ದಕ್ಕೆ ಆಗ ಸುಮಲತಾ ಅವರು ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಧನ್ಯವಾದ ತಿಳಿಸಿರುವ ವಿಡಿಯೋ ಬಿಡುಗಡೆ ಮಾಡಿದರು. ಇದೇ ವೇಳೆ, ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವ ಸಂಸದೆ ಸುಮಲತಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
‘ಏನ್ರೀ ನೀವು ಯಾವ ಸ್ಥಾನದಲ್ಲಿದ್ದೀರಾ? ರೋಡಲ್ಲಿ ಹೋಗೋ ದಾಸಯ್ಯ ಮಾತನಾಡುತ್ತಾನೆ ಎನ್ನುತ್ತೀರಾ. ಮುಖ್ಯಮಂತ್ರಿ ಅಂದ್ರೆ ಯಾರು, ರಾಜ್ಯದ ದೊರೆ. ಕುಮಾರಸ್ವಾಮಿಗೆ ಭಾಷೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಇದೆ. ರಾಜ್ಯದ ಜನರು ಪ್ರೀತಿಯಿಂದ ಅಣ್ಣಾ ಎಂದು ಕರೆಯೋದು ಇಬ್ಬರನ್ನ ಮಾತ್ರ. ಒಬ್ಬರು ಡಾ.ರಾಜಣ್ಣ, ಮತ್ತೊಬ್ಬರು ಕುಮಾರಣ್ಣ. ಕುಮಾರಣ್ಣ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಜನರ ಸೇವೆ, ಅಭಿವೃದ್ಧಿಗಾಗಿ ದುಡಿದವರು. ಆರು ಕೋಟಿ ಕನ್ನಡಿಗರ ಆಸ್ತಿ ಅವರು. ಅಣ್ಣ ಅನ್ನೋದು ಜನರು ಕೊಟ್ಟಬಿರುದು ಎಂದು ಹೇಳಿದರು.
'ಸತ್ಯದ ಪರ ನಿಂತಾಗ ಶತ್ರುಗಳು ಹುಟ್ಟಿಕೊಳ್ತಾರೆ': ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್
ನಾನು ನಟ ಅಂಬರೀಶ್ ಅಭಿಮಾನಿಯಾಗಿದ್ದು, ಇನ್ನು ಈ ಬಗ್ಗೆ ಮಾತನಾಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೂ ಯಾಕೆ ಮತ್ತೆ ಮತ್ತೆ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ. ಸಂಸದೆ ಸುಮಲತಾ ಅವರೇ ಅಂಬರೀಷ್ ಅಂತ್ಯಕ್ರಿಯೆಗೆ ಎಲ್ಲರೂ ಸಹಕಾರ ಕೊಟ್ಟರು ಎಂದು ಹೇಳಿದ್ದರು. ಮತ್ತೇಕೆ ಕುಮಾರಸ್ವಾಮಿ ಅವರು ಏನೂ ಮಾಡಲಿಲ್ಲ ಎನ್ನುತ್ತಾರೆ ಎಂದು ಪ್ರಶ್ನಿಸಿದರು.
ರಾಕ್‌ಲೈನ್ ಅವರೇ ರಾಜಕೀಯ ಮಾಡುವುದಿದ್ದರೆ ರಾಜಕಾರಣಕ್ಕೆ ಬನ್ನಿ. ಬೇಕಿದ್ದರೆ ವೇದಿಕೆ ಕಲ್ಪಿಸಿಕೊಡೋಣ. ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ಗೊತ್ತಿದೆ. ನೀವು ಎಲ್ಲಿ ಬಡ್ಡಿ ಕೊಡ್ತೀರಾ, ತೆಗೆದುಕೊಳ್ತೀರಾ ಹೇಳಬೇಕಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರ ಬಗ್ಗೆ ನೀವು ಯಾವ ಎಪಿಸೋಡ್ ಬೇಕಾದ್ರೂ ಮಾಡಿ. ದಾಖಲೆ ಇಲ್ಲದೆ ಕುಮಾರಸ್ವಾಮಿ ಮಾತನಾಡಲ್ಲ. ಯಾವ ಟೈಮಲ್ಲಿ ಬಿಡಬೇಕೋ, ಆಗ ಆಡಿಯೋ, ಸಿಡಿ ಬಿಡುತ್ತಾರೆ. ಈ ವಿಚಾರದಲ್ಲಿ ಸುಳ್ಳು ಹೇಳಲು ಆಗುತ್ತದೆಯೇ? ಎಂದು ಕಿಡಿಕಾರಿದರು.
ಮಂಡ್ಯ ಸಂಸದರು ತಾವು ಸಂಸದರಾದ ನಂತರ ರೈತರಿಗೆ ಎಷ್ಟು ಅನುದಾನ ಕೊಡಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲಿದ್ದಾಗ ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಎಲ್ಲರೂ ಕೇಳುತ್ತಿದ್ದಾರೆ ಅದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.
ಚಿತ್ರನಟ ದೊಡ್ಡಣ್ಣ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಚಿತ್ರದುರ್ಗದಲ್ಲಿ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಿದ ಸಂದರ್ಭದಲ್ಲಿ ಆ ವೇದಿಕೆಯಲ್ಲಿ ಏನೇನು ಮಾತನಾಡಿದ್ದೀರಿ ನೆನಪು ಮಾಡಿಕೊಳ್ಳಿ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ